ಬೆಂಗಳೂರು, ಜೂ.12- ರೈತರ ತೀವ್ರ ವಿರೋಧದ ನಡುವೆಯೂ ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿಯ ಬಳಿ ಮಾಡಲು ಉದ್ದೇಶಿಸಿರುವ ವಿವಾದಾತಕ ಟೌನ್ಶಿಪ್ ನಿರ್ಮಾಣಕ್ಕೆ ರಾಜ್ಯಸರ್ಕಾರ ಅಧಿಸೂಚನೆ ಹೊರಡಿಸಿದೆ. ಯೋಜನೆಗೆ ಅಂತಿಮ ಅನುಮೋದನೆ ನೀಡಿದ ಕೇವಲ ಒಂದು ತಿಂಗಳ ನಂತರ ಅಧಿಸೂಚನೆ ಹೊರಡಿಸಿರುವುದು ವಿಶೇಷ.
ಮತ್ತೊಂದು ವಿಶೇಷ ಎಂದರೆ, ತಮ ಕೃಷಿಭೂಮಿಯನ್ನು ಕಳೆದುಕೊಳ್ಳಬಾರದು, ಜೀವನೋಪಾಯ ಹಾನಿಯಾಗಬಾರದು ಎಂಬ ಕಾರಣಕ್ಕೆ ರೈತರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಈ ಪರಿಸ್ಥಿತಿಯಲ್ಲಿಯೇ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿರುವುದು ಗಮನಾರ್ಹ.
ಟೌನ್ಶಿಪ್ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ಸುಮಾರು 500 ಎಕರೆ ಜಮೀನು ಭೂ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಮತ್ತು ವಡೇರಹಳ್ಳಿ ಗ್ರಾಮಗಳಿಗೆ ಸೇರಿದ ಸುಮಾರು 500 ಎಕರೆ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.ಇದರಲ್ಲಿ ಬಹುಮುಖ್ಯವಾಗಿ ಕೆಂಪಯ್ಯನಪಾಳ್ಯ ಗ್ರಾಮಕ್ಕೆ ಸೇರಿದ ಸುಮಾರು 367 ಎಕರೆ ಜಮೀನು ಭೂಸ್ವಾಧೀನವಾಗಲಿದೆ. ಉಳಿದಂತೆ ಮಂಡಲಹಳ್ಳಿ ಗ್ರಾಮದ 70 ಎಕರೆ ಹಾಗೂ ವಡೇರಹಳ್ಳಿಯಲ್ಲಿ 61 ಎಕರೆಗಳನ್ನು ಭೂ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ.
ಬಿಡದಿ ಟೌನ್ ಶಿಪ್ಗಾಗಿ ಭೂಸ್ವಾಧೀನಕ್ಕೆ ಪರಿಹಾರವಾಗಿ ಪ್ರತಿ ಎಕರೆ ಭೂಮಿಗೆ ಕನಿಷ್ಠ 2.07 ಕೋಟಿ ರಿಂದ 2.5 ಕೋಟಿ ರೂಪಾಯಿ ವರೆಗೆ ನೀಡುವಂತೆ ಪ್ರಸ್ತಾಪಿಸಲಾಗಿದೆ. ಮತ್ತೊಂದು ಆಯ್ಕೆಯಾಗಿ, ಶೇ.50 ರಷ್ಟು ಅಭಿವೃದ್ಧಿಪಡಿಸಿದ ಭೂಮಿಯನ್ನು ರೈತರಿಗೆ ಹಿಂತಿರುಗಿಸಿ ನೀಡುವ ವ್ಯವಸ್ಥೆಯನ್ನೂ ಸರ್ಕಾರ ಸೂಚಿಸಿದೆ. ಅಂದರೆ, ರೈತರು ಹಣ ಅಥವಾ ಅಭಿವೃದ್ಧಿಪಡಿಸಿದ ಭೂಮಿ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾದ ಸಾಧ್ಯತೆ ಇದೆ.
ರೈತರಿಗೆ ತಮ್ಮ ಭೂಮಿಗೆ ಸಂಬಂಧಿಸಿದ ಎಲ್ಲಾ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ನಿರ್ದಿಷ್ಟ ಸಮಯದಲ್ಲಿ ಪರಿಹಾರವನ್ನು ಪಡೆಯಲು ಸೂಚಿಸಲಾಗಿದೆ. ಪ್ರತಿ ಎಕರೆಗೆ ಕನಿಷ್ಠ 2.14 ಕೋಟಿರೂ ದರ ನಿಗದಿ ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಅಂದರೆ, ಇದಕ್ಕಿಂತ ಕಡಿಮೆ ದರಕ್ಕೆ ಭೂಮಿ ತೆಗೆದುಕೊಳ್ಳಬಾರದು ಎಂಬ ಭರವಸೆಯನ್ನು ಸರ್ಕಾರ ನೀಡಲು ಪ್ರಯತ್ನಿಸಿದೆ.
ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು, ತಂತ್ರಜ್ಞಾನ ಆಧಾರಿತ ಕೈಗಾರಿಕಾ ವಲಯಗಳನ್ನು ಸ್ಥಾಪಿಸುವುದು ಮತ್ತು ಆಧುನಿಕ ನಗರ ಸೌಲಭ್ಯಗಳನ್ನು ಕಲ್ಪಿಸುವುದು ಈ ಟೌನ್ಶಿಪ್ ನಿರ್ಮಾಣದ ಸರ್ಕಾರದ ಮುಖ್ಯ ಉದ್ದೇಶವಾಗಿದೆ.ಸದ್ಯಕ್ಕೆ, ಸರ್ಕಾರವು ಅಧಿಸೂಚನೆ ಹೊರಡಿಸಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದರೂ, ಸ್ಥಳೀಯ ಮಟ್ಟದಲ್ಲಿ ರೈತರ ಅಸಮಾಧಾನ ಮತ್ತು ರಾಜಕೀಯ ನಾಯಕರ ವಿರೋಧದಿಂದ ಸಾಕಷ್ಟು ವಿಘ್ನಗಳು ಎದುರಾಗಿವೆ. ಸುಮಾರು 20,000 ಕೋಟಿ ರೂ. ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಭಾರತದ ಮೊದಲ ಎಐ ಸಿಟಿ ಎಂದು ಬಿಂಬಿಸಲಾಗಿದೆ. ಸುಮಾರು 7,481 ಎಕರೆ ಪ್ರದೇಶದಲ್ಲಿ ವಿಸ್ತರಣೆಯಾಗಲಿದೆ.
ಭೂ ಸ್ವಾಧೀನಕ್ಕೆ ಗುರುತಿಸಿರುವ ಪ್ರದೇಶಗಳಲ್ಲಿ ಬಹುತೇಕ ಫಲವತ್ತಾದ ಕೃಷಿ ಭೂಮಿಯಿದ್ದು, ತೆಂಗು, ಮಾವು ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದು ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದ್ದು ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರವು ಪ್ರತಿ ಎಕರೆಗೆ 2 ರಿಂದ 3 ಕೋಟಿ ರೂ. ಪರಿಹಾರ ಅಥವಾ ಅಭಿವೃದ್ಧಿಪಡಿಸಿದ ಜಾಗದಲ್ಲಿ ಶೇ. 50 ಪಾಲು ನೀಡುವ ಭರವಸೆ ನೀಡಿದೆ. ಆದರೆ, ಮಾರುಕಟ್ಟೆ ಮೌಲ್ಯ ಮತ್ತು ಕೈಗಾರಿಕಾ ಪ್ರದೇಶದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರೈತರು ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
ಭೂಮಿ ಕಳೆದುಕೊಂಡರೆ ಕೃಷಿ ಆಧಾರಿತ ಚಟುವಟಿಕೆಗಳು ಮತ್ತು ಪಶುಪಾಲನೆ (ಹೈನುಗಾರಿಕೆ) ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆತಂಕ ರೈತರಲ್ಲಿದೆ.ಈ ಹಿಂದೆ 2025ರ ಫೆಬ್ರವರಿಯಲ್ಲಿ ಔಪಚಾರಿಕ ಅನುಮೋದನೆ ನೀಡಲಾಗಿತ್ತು. ಬಿಡಿಎ 2025ರ ಮಾರ್ಚ್ನಲ್ಲಿ ಭೂಸ್ವಾಧೀನವನ್ನು ಪ್ರಸ್ತಾಪಿಸುವ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿತ್ತು. ಅಂತಿಮ ಅಧಿಸೂಚನೆಯ ಪ್ರಕಾರ, ಸರ್ಕಾರ ಮುಂದುವರಿಯಲು ನಿರ್ಧರಿಸಿದ ಎಲ್ಲಾ ಆಕ್ಷೇಪಣೆಗಳನ್ನು ಸ್ವಾಧೀನಕ್ಕೆ ಮುಂಚಿತವಾಗಿ ಪರಿಶೀಲಿಸಲಾಗಿತ್ತು.
ಭೂಸ್ವಾಧೀನ ಮಾಡಿಕೊಳ್ಳುವ ಅಧಿಕಾರವನ್ನು ರಾಜ್ಯಸರ್ಕಾರವು ಜಿಬಿಎ ಆಯುಕ್ತರು ವಿಶೇಷ ಭೂಸ್ವಾಧೀನ ಅಧಿಕಾರಿ, ಜಿಬಿಡಿಎ, ರಾಮನಗರ ಅವರಿಗೆ ನೀಡಿದೆ.ಜಿಬಿಎ ವತಿಯಿಂದ ನಿರ್ಮಾಣ ಮಾಡುತ್ತಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ಗೆ ಅಂದಾಜು 20,000 ಕೋಟಿ ರೂ. ವೆಚ್ಚವಾಗಲಿದ್ದು, 7,500 ಎಕರೆ ಭೂಮಿಯ ಅವಶ್ಯಕತೆ ಇದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಮತ್ತು ಹಾರೋಹಳ್ಳಿ ತಾಲ್ಲೂಕುಗಳಲ್ಲಿನ 9 ಗ್ರಾಮಗಳು ಮುಖ್ಯವಾಗಿ ಭೈರಗೊಂಡನಹಳ್ಳಿ, ಗಾಲಾ, ಬನ್ನಿಗಿರಿ, ವಡೇರಹಳ್ಳಿ, ಕಂಚುಗಾರನಹಳ್ಳಿ, ಕೆಂಪಯ್ಯನ ಪಾಳ್ಯ, ಕೆಜಿ ಗೊಲ್ಲರ ಪಾಳ್ಯ, ಹೊಸೂರು, ಮಂಡಲಹಳ್ಳಿ, ಅರಳಲುಸಂದ್ರ ಗ್ರಾಮಗಳಲ್ಲಿನ ಭೂಮಿ ಸ್ವಾಧೀನವಾಗಲಿವೆ. ಪ್ರತೀ ಎಕರೆಗೆ 2.07 ಕೋಟಿಯಿಂದ 2.5 ಕೋಟಿ / ಅಭಿವೃದ್ಧಿ ಹೊಂದಿದ ಭೂಮಿಯಲ್ಲಿ ಶೇ.50 ರರೆಗೆ ಪಾಲು ಪಡೆಯುವ ಆಯ್ಕೆಯನ್ನು ರೈತರಿಗೆ ಬಿಡಲಾಗಿದೆ.
ರಾಜ್ಯ ಸರ್ಕಾರದ ಸಮರ್ಥನೆ :
ತರ ವಿರೋಧ, ಸ್ಥಳೀಯರ ಅಸಮಾಧಾನ ಇದ್ದರೂ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಸರ್ಕಾರದ ನಿಲುವು ಪ್ರಕಾರ, ಟೌನ್ ಶಿಪ್ ಯೋಜನೆ ಮೂಲಕ ಪ್ರದೇಶದಲ್ಲಿ ಅಭಿವೃದ್ಧಿ, ಮೂಲಸೌಕರ್ಯ, ಉದ್ಯೋಗಾವಕಾಶಗಳು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ರೈತರಿಗೆ ತಮ ಭೂಮಿ, ಜೀವನ, ಭವಿಷ್ಯ ಬಗ್ಗೆ ಆತಂಕ ಇದೆ.
ಬಿಡದಿ ಟೌನ್ ಶಿಪ್ ಯೋಜನೆ ಈಗ ನಿರ್ಣಾಯಕ ಹಂತಕ್ಕೆ ಬಂದಿದೆ. ಒಂದು ಕಡೆ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಭೂಸ್ವಾಧೀನ ಮುಂದುವರೆಸುತ್ತಿದ್ದು, ಮತ್ತೊಂದೆಡೆ ರೈತರು ತಮ ಹಕ್ಕು, ಭೂಮಿ, ನ್ಯಾಯಯುತ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ರೈತರ ನಡುವೆ ಮಾತುಕತೆ, ನ್ಯಾಯಾಲಯದ ಹಸ್ತಕ್ಷೇಪ ಅಥವಾ ಮತ್ತಷ್ಟು ಪ್ರತಿಭಟನೆಗಳು ನಡೆಯಬಹುದಾದ ಸಾಧ್ಯತೆ ಇದೆ.
