Homeರಾಜ್ಯರಿಯಲ್‌ ಎಸ್ಟೇಟ್‌ ದಂಧೆ ನಡೆಸಲು ಬಿಡದಿ ಟೌನ್‌ಶಿಪ್‌ಗೆ ಅಧಿಸೂಚನೆ : ಡಿಕೆಶಿ ವಿರುದ್ಧ ಹೆಚ್‌ಡಿಕೆ ಆಕ್ರೋಶ

ರಿಯಲ್‌ ಎಸ್ಟೇಟ್‌ ದಂಧೆ ನಡೆಸಲು ಬಿಡದಿ ಟೌನ್‌ಶಿಪ್‌ಗೆ ಅಧಿಸೂಚನೆ : ಡಿಕೆಶಿ ವಿರುದ್ಧ ಹೆಚ್‌ಡಿಕೆ ಆಕ್ರೋಶ

Bidadi Township

ಬೆಂಗಳೂರು, ಜೂ.13- ಬಿಡದಿ ಟೌನ್‌ಶಿಪ್‌ ನೆಪದಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದ್ದು, ಭೂಮಿಯ ಮಾಲೀಕರು ಅಸಲಿ ರೈತರೋ ಅಲ್ಲವೋ ಎಂಬುದನ್ನು ತೀರ್ಮಾನಿಸಲು ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನೊಂದ ಹಳ್ಳಿಗಳಿಗೆ ನನ್ನೊಂದಿಗೆ ಬರಲಿ ಎಂದು ಕೇಂದ್ರದ ಬೃಹತ್‌ ಹಾಗೂ ಉಕ್ಕು ಕೈಗಾರಿಕಾ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ರೈತರ ತೀವ್ರ ವಿರೋಧದ ನಡುವೆಯೂ ಬಿಡದಿ ಟೌನ್‌ ಶಿಪ್‌ ಯೋಜನೆ ಭೂ ಸ್ವಾಧೀನಕ್ಕೆ ರಾಜ್ಯ ಕಾಂಗ್ರೆಸ್‌‍ ಸರಕಾರವು ಅಂತಿಮ ಅಧಿಸೂಚನೆ ಹೊರಡಿಸಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ಈ ರೈತದ್ರೋಹದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಭೂಮಿ ಕಳೆದುಕೊಳ್ಳುತ್ತಿರುವ ಅನ್ನದಾತರ ಪರವಾಗಿ ನಾನು ಹೋರಾಡುತ್ತೇನೆ ಎಂದು ಘೋಷಿಸಿದರು.

ರೈತರನ್ನು ರೈತರೇ ಅಲ್ಲ ಎಂದು ಹೇಳುತ್ತಿರುವುದು ಅಹಂಕಾರದ ಪರಮಾವಧಿ. ಅನ್ನ ಕೊಡುವ ರೈತನಿಗೆ ಮಾಡುವ ಘೋರ ಅಪಮಾನವಾಗಿದೆ. ನಿಜಕ್ಕೂ ಅವರು ರೈತರೋ, ಅಲ್ಲವೋ ಎಂಬುದನ್ನು ತಿಳಿಯಲು ಮುಖ್ಯಮಂತ್ರಿ ಆ ಗ್ರಾಮಗಳಿಗೆ ಬರಲಿ ಎಂದು ಒತ್ತಾಯಿಸಿದರು.
ನಾನು ಕೂಡ ಅಲ್ಲಿಗೆ ಹೋಗುತ್ತೇನೆ. ಭೂಮಿ ಕಳೆದುಕೊಳ್ಳುತ್ತಿರುವ ಆ ಜನರು ರೈತರೋ ಅಲ್ಲವೋ ಎನ್ನುವುದು ಆ ಹಳ್ಳಿಗಳಲ್ಲಿಯೇ ತೀರ್ಮಾನ ಆಗಿಬಿಡಲಿ ಎಂದು ಅವರು ಹೇಳಿದರು.

ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. 470 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲಿರುವುದು ಫಲವತ್ತಾದ ಕೃಷಿ ಭೂಮಿ. ಅದನ್ನು ಕಸಿದುಕೊಂಡು ರಿಯಲ್‌ ಎಸ್ಟೇಟ್‌ ದಂಧೆ ಮಾಡಲು ಈ ಸರ್ಕಾರ ಹೊರಟಿದೆ. ಈಗ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಎಫ್‌ಐಆರ್‌ ಹಾಕಲಾಗುತ್ತಿದೆ. ಗೃಹ ಸಚಿವರು ನೋಡಿದರೆ ಯಾವುದೇ ಎಫ್‌ಐಆರ್‌ ಹಾಕಿಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಸರ್ಕಾರವೇ ದೌರ್ಜನ್ಯ-ದರ್ಪ ನಡೆಸುತ್ತಿದೆ ಎಂದು ಅವರು ಆರೋಪ ಮಾಡಿದರು.

ಶೇ.80 ರಿಂದ 90ರಷ್ಟು ರೈತರು ಯೋಜನೆಯನ್ನು ವಿರೋಧ ಮಾಡುತ್ತಿದ್ದಾರೆ. ಕೆಲವು ದಂಧೆಕೋರರರಿಗೆ ಮಾತ್ರ ಬಿಡದಿ ಯೋಜನೆ ಬೇಕಾಗಿದೆ. ಭೂಮಿ ಕೊಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಪೊಲೀಸರು ಮತ್ತು ಗೂಂಡಾಗಳನ್ನು ಬಿಟ್ಟು ದೌರ್ಜನ್ಯ ಎಸಗಲಾಗುತ್ತಿದೆ ಎಂದು ಅವರು ಕಿಡಿಕಾರಿದರು.

2006ರಲ್ಲಿ ಬಿಡದಿ ಸೇರಿ ಐದು ಟೌನ್‌ಶಿಪ್‌ಗಳನ್ನು ಮಾಡಬೇಕೆಂದು ನಾನು ತೀರ್ಮಾನ ಮಾಡಿದ್ದೆ. ಅದಕ್ಕೆ ರೈತರಿಂದ ತೀವ್ರ ವಿರೋಧ ಬಂದಿದ್ದರಿಂದ ನಾನು ಆ ಯೋಜನೆಯನ್ನು ಮುಲಾಜಿಲ್ಲದೆ ಅಲ್ಲಿಗೆ ಕೈಬಿಟ್ಟೆ ಎಂದು ಸ್ಪಷ್ಟಪಡಿಸಿದರು.

ಕುಮಾರ ಕೃಪ ವಿರೂಪ :
ಪಾರಂಪರಿಕ ಕಟ್ಟಡ ಕುಮಾರ ಕೃಪ ಅತಿಥಿಗೃಹವನ್ನು ಕೆಡುವುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡೆಯನ್ನು ಖಂಡಿಸಿದ ಅವರು ಮುಂದಿನ ಐದು ವರ್ಷ ಇವರೇ ಮುಂದುವರೆದರೆ ಕೆಂಗಲ್‌ ಹನುಮಂತಯ್ಯನವರು ಕಟ್ಟಿದ ವಿಧಾನಸೌಧವನ್ನು ಏನು ಮಾಡುತ್ತಾರೋ ಎಂದು ಗಾಬರಿಯಾಗುತ್ತದೆ ಎಂದು ಲೇವಡಿ ಮಾಡಿದರು.

RELATED ARTICLES

Latest News