ಬೆಂಗಳೂರು, ಜ.22-ಮುಂಬರುವ ಲೋಕಸಭಾ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಇಂದು ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ, ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಗಳ ಕಚೇರಿ ಮತ್ತು ಎಲ್ಲಾ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ. ರಾಜ್ಯದಲ್ಲಿ ಒಟ್ಟು 5,37,85,815 ಸಾಮಾನ್ಯ ಮತದಾರರಿದ್ದಾರೆ. ಈ ಪೈಕಿ 2,69,33,750 ಪುರುಷ 2,68,47,145 ಮಹಿಳಾ ಮತದಾರರು ಇದ್ದು, 4,920 ಇತರೆ ಮತದಾರರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಕರಡು ಮತದಾರರ ಪಟ್ಟಿಗೆ ಹೋಲಿಸಿದ್ದಲ್ಲಿ 4,08,653 ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ಹೆಚ್ಚಾಗಿದ್ದಾರೆ. ಇದರಲ್ಲಿ 2,77,717 ಮಹಿಳಾ ಮತದಾರರು ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ. 13,912 ಪುರುಷ ಹಾಗೂ 24 ಇತರೆ ಮತದಾರರು ಹೆಚ್ಚಳವಾಗಿದ್ದಾರೆ ಎಂದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರದ ಪೈಕಿ ಬೆಂ. ದಕ್ಷಿಣ ವಿಧಾನಸಭಾ ಕ್ಷೇತ್ರವೂ 7,17,201 ಮತದಾರರನ್ನು ಹೊಂದಿದ್ದು, ಅತಿ ಹೆಚ್ಚು ಮತದಾರರನ್ನು ಹೊಂದಿದ ಕ್ಷೇತ್ರವಾಗಿದೆ. ಶೃಂಗೇರಿ ಕ್ಷೇತ್ರವೂ 167556 ಮತದಾರರನ್ನು ಹೊಂದಿದ್ದು, ರಾಜ್ಯದಲ್ಲಿಯೇ ಅತಿ ಕಡಿಮೆ ಮತದಾರರನ್ನು ಹೊಂದಿದ ಕ್ಷೇತ್ರವಾಗಿದೆ ಎಂದು ಹೇಳಿದರು.
2024ರ ಜನವರಿ 1ಕ್ಕೆ ಅರ್ಹತೆ ಹೊಂದಿರುವ ಇದುವರೆಗೆ ನೋಂದಣಿಯಾಗದೆ ಇರುವವರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಮತದಾರರ ಸೇವಾ ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಹತಾ ದಿನಾಂಕ 2024ರ ಏಪ್ರಿಲ್ 1, ಜುಲೈ.1 ಹಾಗೂ ಅಕ್ಟೋಬರ್ 1ರಂತೆ ಅರ್ಹತೆ ಹೊಂದುವ ಹೊಸ ಮತದಾರರು ಮುಂಚಿತವಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದರು.
ತೀವ್ರ ಚಳಿ ಹಿನ್ನೆಲೆಯಲ್ಲಿ ರಾಮೋತ್ಸವಕ್ಕೆ ಲಾಲ್ ಕೃಷ್ಣ ಅಡ್ವಾಣಿ ಗೈರು
ಮತದಾರರ ಗುರುತಿನ ಚೀಟಿ ಹಂಚಿಕೆಯನ್ನು ಶೇ.100ರಷ್ಟು ಹಂಚಲಾಗಿದೆ ಹಾಗೂ ಭಾವಚಿತ್ರ ಅಳವಡಿಸಲಾಗಿದೆ . ಗುರುತಿನ ಚೀಟಿಗಳನ್ನು ತ್ವರಿತ ಅಂಚೆ ಸೇವೆ ಮೂಲಕ ಮತದಾರರ ವಿಳಾಸಕ್ಕೆ ತಲುಪಿಸಲಾಗುತ್ತ್ತಿದೆ. ಕಳೆದ ನವೆಂಬರ್ ಅಂತ್ಯಕ್ಕೆ 17,47,518 ಗುರುತಿನ ಚೀಟಿಗಳನ್ನು ಮತದಾರರಿಗೆ ತಲುಪಿಸಲಾಗಿದೆ. ಇನ್ನೂ 10,76,506 ಗುರುತಿನ ಚೀಟಿ ಮುದ್ರಿಸಿದ್ದು, ಮತದಾರರಿಗೆ ತಲುಪಿಸಲಾಗುವುದೆಂದು ತಿಳಿಸಿದರು.
ಅಂತಿಮ ಮತದಾರರ ಪಟ್ಟಿಯಲ್ಲಿ ಸೇವಾ ಮತದಾರರ ಸಂಖ್ಯೆ ಇಳಿಕೆಯಾಗಿದೆ. ಕರಡು ಪಟ್ಟಿಯಲ್ಲಿ 47,172 ಇದ್ದ ಸೇವಾ ಮತದಾರರ ಸಂಖ್ಯೆ ಅಂತಿಮ ಪಟ್ಟಿಯಲ್ಲಿ 46,501ಕ್ಕೆ ಇಳಿಕೆಯಾಗಿದೆ. 18ರಿಂದ 19 ವರ್ಷದ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಅಂತಿಮ ಪಟ್ಟಿಯಲ್ಲಿ 10,34,018ರಷ್ಟು ಯುವ ಮತದಾರರಿದ್ದಾರೆ. 3,88,527ರಷ್ಟು ಯುವ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಸಾಗರೋತ್ತರ ಮತದಾರರ ಸಂಖ್ಯೆ 3,164ರಷ್ಟಿದೆ ಎಂದು ವಿವರಿಸಿದರು.
80 ವರ್ಷ ಮೇಲ್ಪಟ್ಟ ಹಿರಿಯ ಮತದಾರರ ಸಂಖ್ಯೆ 12,71,862 ಆಗಿದ್ದು, 100 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 17,937ರಷ್ಟಿದ್ದಾರೆ. ವಿಕಲ ಚೇತನ ಮತದಾರ ಸಂಖ್ಯೆ 562890 ರಷ್ಟಿದೆ. 58834 ಮತಗಟ್ಟೆಗಳಿದ್ದು, 845 ಮತಗಟ್ಟೆಗಳನ್ನು ಸೇರ್ಪೆಡೆಗೊಳಿಸಿದ್ದು, 293 ಮತಗಟ್ಟೆಗಳನ್ನು ವಿಲೀನಗೊಳಿಸಲಾಗಿದೆ.
ಕಳೆದ 2019ಕ್ಕೆ ಹೋಲಿಸಿದರೆ ಈ ಬಾರಿ 552 ಮತಗಟ್ಟೆಗಳು ಹೆಚ್ಚಳವಾಗಿದೆ. ನಿಯಮಾನುಸಾರ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವಿಕೆ ಹಾಗೂ ಮಾರ್ಪಾಡು ಮಾಡಲು ನಿಗಧಿತ ನಮೂನೆಯಲ್ಲಿ ಸಲ್ಲಿಸಬಹುದಾಗಿದೆ. ಈ ರೀತಿ 35,02,328 ಮತದರರು ಸೇರ್ಪಡೆಯಾಗಿದ್ದಾರೆ. 11,14,257 ಹೆಸರುಗಳನ್ನು ತೆಗೆದು ಹಾಕಲಾಗಿದೆ ಮತ್ತು 13,43,123 ಮತದಾರರ ವಿವರಗಳನ್ನು ಮಾರ್ಪಾಡು ಮಾಡಲಾಗಿದೆಯೆಂದು ಮಾಹಿತಿ ನೀಡಿದರು.
ಅಂತಿಮ ಮತದಾರರ ಪಟ್ಟಿಯಲ್ಲಿ ಸಾಮಾನ್ಯ ಮತದಾರರ ಲಿಂಗಾನುಪಾತವು 991ರಿಂದ 997 ಹೆಚ್ಚಳವಾಗಿದೆ. ಯುವ ಮತದಾರರ ಲಿಂಗಾನುಪಾತವು 818 ರಿಂದ 856ಕ್ಕೆ ಹೆಚ್ಚಳವಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಮುಖ್ಯ ಚುನಾವಣಾ„ಕಾರಿಗಳಾದ ವೆಂಕಟೇಶ್ ಕುಮಾರ್ ಹಾಗೂ ಕೂರ್ಮರಾವ್ ಉಪಸ್ಥಿತರಿದ್ದರು.