ಬೆಂಗಳೂರು, ಜೂ.17-ತಮ ಹಾಗೂ ತಮ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುವ ಪೋಸ್ಟರ್ ಅಂಟಿಸುವ ಬೆದರಿಕೆಗೆ ಹೆದರುವುದಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನದು ತೆರೆದ ಪುಸ್ತಕ. ಪಕ್ಷದ ಕಾರ್ಯಕರ್ತರು ಮತ್ತು ಜನರಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ. ಜನರ ಹಿತಕ್ಕಾಗಿ ನಮ ಜೆಡಿಎಸ್ ಪಕ್ಷ ಹೋರಾಟ ಮಾಡಲಿದೆ ಎಂದರು.
ಮುಖ್ಯಮಂತ್ರಿಯಾದ ಮೇಲಾದರೂ ನೀಲಿ ಚಿತ್ರ ಮಾಡಿಸುವುದು, ಪೋಸ್ಟರ್ ಅಂಟಿಸುವ ಪ್ರವೃತ್ತಿಯನ್ನು ಬಿಡುತ್ತಾರೆ ಅಂದುಕೊಂಡಿದೆ. ಆದರೆ, ಮುಖ್ಯಮಂತ್ರಿಯಾದ ನಂತರವೂ ಮುಂದುವರೆಸಿದ್ದಾರೆ. ಆ ಖಯಾಲಿ ಹೋಗಿಲ್ಲ. ಈ ರೀತಿ ಮಾತನಾಡಿದೆ ಎಂಬುದಕ್ಕೆ ತಪ್ಪು ತಿಳಿಯಬೇಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಹೇಳದೆ ಆರೋಪಿಸಿದರು.
ನನ್ನ ವಿರುದ್ಧದ ಪೋಸ್ಟರ್ ಬಿಡಿ, ನನ್ನ ಹೆಂಡತಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧವೂ ಪೋಸ್ಟರ್ ಅಂಟಿಸಿದ್ದಾರೆ. ನನ್ನ ಮತ್ತು ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರಲ್ಲಿ 100 ಎಕರೆ ಜಮೀನು ಇದೆ ಎಂದು ಪೋಸ್ಟರ್‌ನಲ್ಲಿ ಹಾಕಿದ್ದಾರೆ. 40 ವರ್ಷಗಳ ಹಿಂದೆ ನಾನು ಕಷ್ಟಪಟ್ಟು ಸಂಪಾದಿಸಿದ್ದು, 46 ಎಕರೆ ಜಮೀನು. ಅನಿತಾ ಅವರು 36 ಎಕರೆ ಜಮೀನು ಖರೀದಿಸಿದ್ದಾರೆ.
ಅವರ ಬೆಂಬಲಿಗರ ಮೂಲಕ ಅಪಪ್ರಚಾರದ ಪೋಸ್ಟರ್ ಹಾಕಿಸಿದ್ದಾರೆ. ಖರೀದಿ ಮಾಡಿದ ಜಮೀನಿಗೆ ಪೋಸ್ಟರ್ ಹಾಕಿದರೆ ಜನರು ನಂಬುತ್ತಾರೆಯೇ ಎಂದು ಅವರು ಪ್ರಶ್ನಿಸಿದರು. ಬೆನಗಾನಹಳ್ಳಿಯಲ್ಲಿ ಸತ್ತವರ ಹೆಬ್ಬೆಟ್ಟು ತೋರಿಸಿ ಜಮೀನು ಪಡೆದ ವ್ಯಕ್ತಿ. ಮುಖ್ಯಮಂತ್ರಿಯಾದ ಮೇಲೆ ಒಂದು ಸ್ಟ್ಯಾಂಡರ್ಡ್ಸ್ ಬೇಡವೇ? ಮುಖ್ಯಮಂತ್ರಿ ಕುರ್ಚಿಗಾದರೂ ಗೌರವ ಬೇಡವೇ? ವಿಕೃತ ಮನಃಸ್ಥಿತಿ.
ಬಿಜೆಪಿ ನಾಯಕರಾದ ಆರ್. ಅಶೋಕ್, ವಿಜಯೇಂದ್ರ, ನಾರಾಯಣಸ್ವಾಮಿ ಹೆಸರಲ್ಲೂ ಹಾಕಿದ್ದಾರೆ. ಒಂದು ವೇಳೆ ತಪ್ಪಾಗಿದ್ದರೆ, ಮುಖ್ಯಮಂತ್ರಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಇಲ್ಲಿವರೆಗೂ ಕಾಂಗ್ರೆಸ್‌ನಲ್ಲಿ ಮಂತ್ರಿ, ಶಾಸಕರ ವಿರುದ್ಧ ನಡೆಯಿತು. ಸತ್ಯ ಹೇಳಲು ಬಿಡದೆ ಅವರ ಬಾಯಿಯನ್ನು ಮುಚ್ಚಿಸಿದರು ಎಂದು ಅವರು ಆರೋಪಿಸಿದರು.
ಬಿಡದಿ ಟೌನ್‌ಶಿಪ್: ನನ್ನ ಕಾಲದಲ್ಲಿ ಆರಂಭವಾಗಿದ್ದು ಬಿಡದಿ ಟೌನ್‌ಶಿಪ್ ಎಂದು ಹೇಳುತ್ತಾರೆ. ರೈತರ ವಿರುದ್ಧವಾಗಿ ಯೋಜನೆ ಮಾಡುವುದಿದ್ದರೆ, ಎರಡನೇ ಬಾರಿ ಮುಖ್ಯಮಂತ್ರಿಯಾದಾಗಲೇ ಮಾಡುತ್ತಿದೆ. ಒಳ್ಳೆಯ ಉದ್ದೇಶವಿದ್ದರೆ ಬೆಂಬಲಿಸಬಹುದು. ಆದರೆ, ಟೌನ್‌ಶಿಪ್ ವಿಚಾರದಲ್ಲಿ ಜಮೀನು ಹಾಗೂ ದುಡ್ಡು ಹೊಡೆಯಲು ಹೊರಟ್ಟಿದ್ದಾರೆ. ಎಲ್ಲದರಲ್ಲೂ ದುಡ್ಡನ್ನೇ ನೋಡುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು.
