ಬೆಂಗಳೂರು, ಸೆ.21- ಇತ್ತೀಚಿಗೆ ಅಗಲಿದ ಮಾಜಿ ಶಾಸಕ ಡಾ. ಆರ್.ಬಿ.ಶಿರಿಯಣ್ಣನವರ್ ಅವರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಲಾಪ ಆರಂಭದಲ್ಲಿ ವಿಧಾನಸಭೆ ಯಲ್ಲಿ ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರು ಸಂತಾಪ ಸೂಚನಾ ನಿರ್ಣಯವನ್ನು ಕೈಗೆತ್ತಿಕೊಂಡರು.
1944ರ ಸೆಪ್ಟೆಂಬರ್ 15ರಂದು ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಜನಸಿದ್ದ ಡಾ. ಆರ್.ಬಿ.ಶಿರಿಯಣ್ಣನವರ್ ವೃತ್ತಿಯಲ್ಲಿ ವೈದ್ಯರಾಗಿದ್ದರು. ತಾಲ್ಲೂಕು ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. 2004ರಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದಿಂದ 12ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು. ಸರಳತೆಗೆ ಹೆಸರುವಾಸಿಯಾಗಿದ್ದರು, ಆಗಸ್ಟ್ 27ರಂದು ನಿಧನರಾಗಿದ್ದಾರೆ ಎಂದು ಸದನಕ್ಕೆ ವಿಷಾದದಿಂದ ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂತಾಪಸೂಚನಾ ನಿರ್ಣಯವನ್ನು ಬೆಂಬಲಿಸಿ, 2004ರಲ್ಲಿ ಶಿರಿಯಣ್ಣನವರ್ ತಮೊಂದಿಗೆ ಶಾಸಕರಾಗಿದ್ದರು. ಸಜ್ಜನ, ಸರಳ ರಾಜಕಾರಣಿ. ಅಪಾರ ಪ್ರಮಾಣದ ಜನರ ವಿಶ್ವಾಸ ಗಳಿಸಿದ್ದರು ಎಂದು ಹೇಳಿದರು. ಒಮೆ ಬಾಯಿ ತಪ್ಪಿ ಶಿರಿಯಣ್ಣನವರ್ ಬದಲಾಗಿ ತಿಮಾಪುರ್ ಎಂದು ಹೇಳಿದ ಮುಖ್ಯಮಂತ್ರಿಯವರು, ತಕ್ಷಣವೇ ತಮ ತಪ್ಪನ್ನು ತಿದ್ದಿಕೊಂಡರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಆರ್.ವಿ. ಶಿರಿಯಣ್ಣನವರ್ ಜನಾನುರಾಗಿ ಯಾಗಿ ಕೆಲಸ ಮಾಡಿದ್ದರು. ವೈದ್ಯರಾಗಿ ಜನಪ್ರಿಯತೆ ಗಳಿಸಿ ದ್ದರು, ಶಾಸಕರಾಗಿಯೂ ಒಳ್ಳೆಯ ಕೆಲಸ ಮಾಡಿದ್ದರು ಎಂದು ಕೊಂಡಾಡಿದರು.
ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಶಿರಿಯಣ್ಣನವರ್ ದೊಡ್ಡ ಕುಟುಂಬಕ್ಕೆ ಸೇರಿದ್ದರು. ಬಾಗಲಕೋಟೆಯಲ್ಲಿ ಜನಿಸಿ ದರೂ ನವಲಗುಂದದಲ್ಲೇ ಬೆಳೆ ದರು. ಅವರ ಸಹೋದರ ನ್ಯಾಯಾಧೀಶರಾಗಿದ್ದರು. ಇಡೀ ಕುಟುಂಬವೇ ಸಜ್ಜನಿಕೆಗೆ ಹೆಸರಾಗಿತ್ತು ಎಂದರು.
ಕುರ್ಚಿ ಬೇಕು ಎಂದು ಹಠ ಹಿಡಿಯುವ ಈ ಕಾಲದಲ್ಲಿ ಶಿರಿಯಣ್ಣನವರ್ ಹಾಲಿ ಶಾಸಕರಾಗಿದ್ದಾಗಲೇ ನಮದೇ ಪಕ್ಷದ ಶಂಕರ ಮುನೇನಕೊಪ್ಪ ಅವರಿಗೆ ಸ್ಪರ್ಧಿಸಲು ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದರು. ಹೊಸ ಶಾಸಕರಿಗೆ ಎಲ್ಲಾ ರೀತಿಯ ಸಹಕಾರ ನೀಡಿದರು ಎಂದು ವಿವರಿಸಿದರು.
ಸಚಿವ ಲಕ್ಷ್ಮಣ ಸವದಿ, ತ್ಯಾಗದ ಕೆಲವು ಉದಾಹರಣೆಗಳನ್ನು ನೀಡಿದರು. ಜನತಾ ಪರಿವಾರದ ಸರ್ಕಾರ ರಚನೆಯಾಗುವ ವೇಳೆಯಲ್ಲಿ, ಬೆಳಗಾವಿ ಜಿಲ್ಲೆಯ ವಿಶ್ವ ನಾಥ ಕತ್ತಿ ಅವರು ಸಚಿವ ರಾಗಬೇಕು ಎಂಬ ಚರ್ಚೆಗಳು ನಡೆದಿದ್ದವು. ಆದರೆ ಅವರು ತಮಗೆ ವಯಸ್ಸಾಗಿದೆ, ಓಡಾಡಲು ಕಷ್ಟವಾಗುತ್ತದೆ ಎಂದು ಹೇಳಿ ನಮದೇ ಜಿಲ್ಲೆಯ ಡಿಬಿ ಇನಾಮ್ದಾರ್ ಅವರನ್ನು ಸಚಿವರನ್ನಾಗಿ ಮಾಡುವಂತೆ ಸಲಹೆ ಮಾಡಿ, ತ್ಯಾಗ ಮನೋಭಾವ ಪ್ರದರ್ಶಿಸಿದರು. ಅದೇ ರೀತಿ ಶಿರಿಯಣ್ಣನವರ್ ಕೂಡ ಶಾಸಕ ಸ್ಥಾನ ಬಿಟ್ಟು ಕೊಟ್ಟಿದ್ದರು ಎಂದು ಹೇಳಿದರು. ನಂತರ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾ ಯಿತು.
