Homeರಾಷ್ಟ್ರೀಯತ್ರಿಪುರಾದಲ್ಲಿ ಬಿಎಸ್‌‍ಎಫ್‌ ಯೋಧರ ಮೇಲೆ ಹಲ್ಲೆ ನಡೆಸಿದ್ದ 8 ಮಂದಿ ಅರೆಸ್ಟ್‌

ತ್ರಿಪುರಾದಲ್ಲಿ ಬಿಎಸ್‌‍ಎಫ್‌ ಯೋಧರ ಮೇಲೆ ಹಲ್ಲೆ ನಡೆಸಿದ್ದ 8 ಮಂದಿ ಅರೆಸ್ಟ್‌

ಅಗರ್ತಲಾ, ನ.6 (ಪಿಟಿಐ)- ತ್ರಿಪುರಾದ ಸೆಪಾಹಿಜಾಲಾ ಜಿಲ್ಲೆಯಲ್ಲಿ ಬಿಎಸ್‌ಎಫ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿ, ಅವರಲ್ಲಿ ಮೂವರನ್ನು ಗಾಯಗೊಳಿಸಿದ್ದ ಎಂಟು ಮಂದಿಯನ್ನು ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 18ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತ್ರಿಪುರಾದ ಸೆಪಾಹಿಜಾಲಾ ಜಿಲ್ಲೆಯಲ್ಲಿ ಕಳ್ಳಸಾಗಣೆ ಶಂಕೆಯ ಮೇರೆಗೆ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಕ್ಕೆ ಸಂಬಂಧಿಸಿದಂತೆ, ಸೋಮವಾರ ಆಶಾಬಾರಿ ಗಡಿ ಹೊರಠಾಣೆಯ ಬಳಿ ಗ್ರಾಮಸ್ಥರ ಗುಂಪೊಂದು ನಡೆಸಿದ ದಾಳಿಯಲ್ಲಿ ಓರ್ವ ಸಹಾಯಕ ಕಮಾಂಡೆಂಟ್ ಸೇರಿದಂತೆ ಮೂವರು ಬಿಎಸ್‌ಎಫ್ ಸಿಬ್ಬಂದಿ ಗಾಯಗೊಂಡಿದ್ದರು.

ಈ ಗುಂಪು ಬಿಎಸ್‌ಎಫ್ ವಾಹನವೊಂದನ್ನು ಜಖಂಗೊಳಿಸಿದ್ದಲ್ಲದೆ, ಗಡಿ ಕಾವಲುಗಾರರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿತ್ತು. ಆಶಾಬಾರಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ, ನವೆಂಬರ್ 2ರ ಘಟನೆಯಲ್ಲಿ ನೇರವಾಗಿ ಭಾಗಿಯಾಗಿದ್ದ 10 ಗ್ರಾಮಸ್ಥರನ್ನು ಬಂಧಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ನಿನ್ನೆ ರಾಜ್ಯ ಆಡಳಿತ, ಪೊಲೀಸ್, ಬಿಎಸ್‌ಎಫ್, ಸಿಆರ್‌ಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ನ ಹಿರಿಯ ಅಧಿಕಾರಿಗಳೊಂದಿಗೆ ರಾಜ್ಯದ ಭದ್ರತಾ ಪರಿಸ್ಥಿತಿಯ ಕುರಿತು ಪರಿಶೀಲನಾ ಸಭೆ ನಡೆಸಿದರು. ಆಶಾಬಾರಿ ಘಟನೆಯನ್ನೂ ಪರಿಶೀಲಿಸಲಾಯಿತು.

ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ, ಗಡಿಯಾಚೆಗಿನ ಕಳ್ಳಸಾಗಣೆಯ ವಿಷಯದಲ್ಲಿ ಯಾವುದೇ ಉದಾರತೆ ತೋರದೆ ಕಠಿಣ ನಿಲುವು ತಳೆಯುವಂತೆ ಮತ್ತು ಶಾಂತಿಯನ್ನು ಕಾಪಾಡಲು ಭದ್ರತಾ ಕ್ರಮಗಳನ್ನು ಬಲಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News