ಲಾಸ್ ಏಂಜಲೀಸ್, ನ.6- ಅಮೆರಿಕದ ಲಾಸ್ ಏಂಜಲೀಸ್ ನಗರದ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ಸಿಟಿ ಕೌನ್ಸಿಲ್ ಸದಸ್ಯೆ ನಿತ್ಯಾ ರಾಮನ್ ಅವರು ಹಾಲಿ ಮೇಯರ್ ಕರೇನ್ ಬಾಸ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.
ಈ ಅನಿರೀಕ್ಷಿತ ಫಲಿತಾಂಶವು ಅಮೆರಿಕದ ಎರಡನೇ ಅತಿದೊಡ್ಡ ನಗರದ ರಾಜಕೀಯ ದಿಕ್ಕಿನಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ. ಡೆಮಾಕ್ರಟಿಕ್ ಸೋಷಿಯಲಿಸ್ಟ್ಸ್ ಆಫ್ ಅಮೆರಿಕ (ಡಿಎಸ್ಎ) ಬೆಂಬಲ ಹೊಂದಿದ್ದ ನಿತ್ಯಾ ರಾಮನ್ ಅವರ ಗೆಲುವು ಲಾಸ್ ಏಂಜಲೀಸ್ ನಗರಾಡಳಿತದಲ್ಲಿ ಹೊಸ ತಲೆಮಾರಿನ ನಾಯಕತ್ವಕ್ಕೆ ನಾಂದಿ ಹಾಡಿದೆ.
ಕಳೆದ ವರ್ಷ ನ್ಯೂಯಾರ್ಕ್ನಲ್ಲಿ ಡೆಮಾಕ್ರಟಿಕ್ ಸೋಷಿಯಲಿಸ್ಟ್ ನಾಯಕ ಜೊಹ್ರಾನ್ ಮಮ್ದಾನಿ ಆಯ್ಕೆಯಾಗಿದ್ದ ಬೆಳವಣಿಗೆಯ ಬೆನ್ನಲ್ಲೇ ಈ ಫಲಿತಾಂಶ ಹೊರಬಿದ್ದಿದೆ. ಆದರೆ ಚುನಾವಣಾ ಪ್ರಚಾರದ ವೇಳೆ ನಿತ್ಯಾ ರಾಮನ್ ರಾಷ್ಟ್ರಮಟ್ಟದಲ್ಲಿ ಅಷ್ಟೊಂದು ಗಮನ ಸೆಳೆದಿರಲಿಲ್ಲ. ಅಲ್ಲದೆ, ಪ್ರಚಾರದ ಸಂದರ್ಭದಲ್ಲಿ ಪ್ರಗತಿಪರ ರಾಜಕೀಯ ಪಕ್ಷದ ನಿಲುವುಗಳೊಂದಿಗೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದುವ ಸಿದ್ಧತೆಯನ್ನೂ ಅವರು ವ್ಯಕ್ತಪಡಿಸಿದ್ದರು.
ಆರಂಭದಲ್ಲಿ ಹಾಲಿ ಮೇಯರ್ ಕರೇನ್ ಬಾಸ್ ಅವರನ್ನು ಬೆಂಬಲಿಸಿದ್ದ ರಾಮನ್, ಬಳಿಕ ತಮ್ಮ ನಿರ್ಧಾರ ಬದಲಿಸಿ ಚುನಾವಣಾ ಕಣಕ್ಕೆ ಧುಮುಕಿದ್ದರು. ನಗರವು ಈಗ ಬಿಕ್ಕಟ್ಟಿನ ಹಂತ ತಲುಪಿದೆ ಎಂದು ಹೇಳಿದ್ದ ಅವರು, ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕಕ್ಕೂ ಮುನ್ನ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
ಚುನಾವಣೆಯಲ್ಲಿ ಸೋಲು ಅನುಭವಿಸಿದ ಕರೇನ್ ಬಾಸ್ ಅವರು ನಿತ್ಯಾ ರಾಮನ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ನಾವು ನಿರೀಕ್ಷಿಸಿದ್ದ ಫಲಿತಾಂಶ ಇದಲ್ಲ. ಆದರೆ ಲಾಸ್ ಏಂಜಲೀಸ್ ಜನತೆ ತಮ್ಮ ತೀರ್ಪು ನೀಡಿದ್ದಾರೆ. ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಬಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ಮರುಚುನಾವಣೆಯಲ್ಲಿ ಸೋಲು ಕಂಡ ಲಾಸ್ ಏಂಜಲೀಸ್ನ ಮೊದಲ ಮೇಯರ್ ಎಂಬ ಅಪಖ್ಯಾತಿಗೆ ಕರೇನ್ ಬಾಸ್ ಪಾತ್ರರಾಗಿದ್ದಾರೆ. ಅವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಸಂಭವಿಸಿದ ಭೀಕರ ಪಾಲಿಸೇಡ್ಸ್ ಕಾಳ್ಗಿಚ್ಚು ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹೊಡೆತ ನೀಡಿತ್ತು. ಅವರು ವಿದೇಶದಲ್ಲಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ಎದುರಿಸಲು ಅಗ್ನಿಶಾಮಕ ಇಲಾಖೆ ಸನ್ನದ್ಧವಾಗಿರಲಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಬೆಂಕಿಯಿಂದ ಉಂಟಾದ ಭಾರೀ ಹಾನಿಗೆ ಮೇಯರ್ ಅವರೇ ಹೊಣೆ ಎಂದು ಅನೇಕ ಮತದಾರರು ಭಾವಿಸಿದ್ದರು.
ದೇಶಾದ್ಯಂತ ಡೆಮಾಕ್ರಟಿಕ್ ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಮನ್ ಅವರ ಗೆಲುವು ಮಹತ್ವ ಪಡೆದುಕೊಂಡಿದೆ. ಆಡಳಿತ ಪಕ್ಷದ ಸಾಂಪ್ರದಾಯಿಕ ನಾಯಕರ ವಿರುದ್ಧ ಎಡಪಂಥೀಯ ಅಭ್ಯರ್ಥಿಗಳು ಸವಾಲು ಹಾಕುತ್ತಿರುವ ಬೆಳವಣಿಗೆಗಳ ಭಾಗವಾಗಿ ಈ ಫಲಿತಾಂಶ ಹೊರಬಿದ್ದಿದೆ.
2028ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ವೇಳೆಗೆ ನಗರದ ಟೆಂಟ್ಗಳು ಮತ್ತು ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುವ ನಿರಾಶ್ರಿತರ ಸಂಖ್ಯೆಯನ್ನು ಕನಿಷ್ಠ ಶೇ.50ರಷ್ಟು ಕಡಿಮೆ ಮಾಡಬಹುದು ಎಂದು ರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಈ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದ್ದು, ನಿರಾಶ್ರಿತರ ಪುನರ್ವಸತಿಗಾಗಿ ಈ ಪ್ರದೇಶದಲ್ಲಿ ಶತಕೋಟಿ ಡಾಲರ್ಗಳನ್ನು ವೆಚ್ಚ ಮಾಡಿದರೂ ನಿರೀಕ್ಷಿತ ಪರಿಹಾರ ದೊರೆತಿಲ್ಲ.
