Homeರಾಜ್ಯಒಂದೇ ಕುಟುಂಬದ 7 ಮಂದಿ ಹತ್ಯೆ : ನರರಾಕ್ಷಸನ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಬೆಂಗಳೂರು..!

ಒಂದೇ ಕುಟುಂಬದ 7 ಮಂದಿ ಹತ್ಯೆ : ನರರಾಕ್ಷಸನ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಬೆಂಗಳೂರು..!

ಬೆಂಗಳೂರು,ನ.6-ಸಿಲಿಕಾನ್‌ ಸಿಟಿಯಲ್ಲಿ ಏಳು ಮಂದಿಯ ಹತ್ಯಾಕಾಂಡ ನಡೆದಿದ್ದು, ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.ಕ್ಯಾಬ್‌ ಚಾಲಕನೊಬ್ಬ ಪತ್ನಿ ಮೇಲಿನ ಕೋಪಕ್ಕೆ ಆಕೆಯೂ ಸೇರಿದಂತೆ ಕುಟುಂಬದ ಏಳು ಮಂದಿಯ ನರಮೇಧ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ರಾಜಾಜಿನಗರದ ಬಾಷ್ಯಂ ಸರ್ಕಲ್‌ ಸಮೀಪದ 59ನೇ ಕ್ರಾಸ್‌‍ನ ನಿವಾಸಿ ಕ್ಯಾಬ್‌ ಚಾಲಕ ಇಂದುಶೇಖರ್‌ (45) ಎಂಬಾತನೇ ಏಳು ಮಂದಿಯನ್ನು ಕೊಲೆ ಮಾಡಿರುವ ಆರೋಪಿ. ಈತ ಪತ್ನಿ ಸುನಿತಾ,ಅತ್ತೆ ರೂಪವತಿ,ಭಾಮೈದುನರಾದ ಶಿವಕುಮಾರ್‌ ಮತ್ತು ಶಂಕರ್‌, ಇವರುಗಳ ಪತ್ನಿಯರಾದ ದಿವ್ಯ, ನಳಿನಿ ಹಾಗೂ ಅವರ ಏಳು ವರ್ಷದ ಪುನೀತ್‌ನನ್ನು ಕೊಲೆ ಮಾಡಿದ್ದಾನೆಂದು ರಾಜಾಜಿನಗರ ಠಾಣೆ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಕೊಲೆ ಮಾಡಿದ ನಂತರ ಒಂದೊಂದೇ ಶವಗಳನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ನಗರದ ಹೊರವಲಯದ ನಂದಿಬೆಟ್ಟ, ಚಾರ್ಮುಡಿಘಾಟ್‌, ತಮಿಳುನಾಡು ಸೇರಿದಂತೆ ಮುಂತಾದ ಪ್ರದೇಶಗಳಿಗೆ ಬೀಸಾಡಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ಆರೋಪಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಮೃತದೇಹಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ನಂದಿಬೆಟ್ಟ ಸಮೀಪ ಬಾಲಕ ಪುನೀತನ ಶವ ಸಿಕ್ಕಿದ್ದು, ಉಳಿದ ಶವಗಳಿಗಾಗಿ ಪೊಲೀಸರು ಇಂದು ಶೋಧ ಮುಂದುವರೆಸಿದ್ದಾರೆ.ಸುಮಾರು 20 ದಿನಗಳ ಅಂತರದಲ್ಲಿ ಆರೋಪಿ ಏಳು ಮಂದಿಯ ನರಮೇಧ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಇಂದುಶೇಖರ್‌ ಸುಮಾರು 20 ವರ್ಷಗಳ ಹಿಂದೆ ಶ್ರೀರಾಮಪುರದ ಸುನಿತಾ ಎಂಬುವವರನ್ನು ವಿವಾಹವಾಗಿದ್ದರು. ಇವರ ಮನೆಗೆ ತವರು ಮನೆಯವರು ಆಗಾಗ್ಗೆ ಬರುತ್ತಿದ್ದು, ಸುನಿತಾ ತವರು ಮನೆಯ ಸಂಬಂಧವನ್ನು ಮುಂದುವರೆಸಿದರು. ಇದು ಆತನಿಗೆ ಇಷ್ಟವಿರಲಿಲ್ಲ. ಇದೇ ವಿಚಾರದಲ್ಲಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.

ತವರು ಮನೆಯವರು ಸುನಿತಾ ಪರವಾಗಿ ನಿಂತಿದ್ದು, ಈತನ ಕೋಪ ಮತ್ತಷ್ಟು ಹೆಚ್ಚಾಗಿತ್ತು. ಈ ಹಿನ್ನಲೆಯಲ್ಲಿ ಈತ ಪತ್ನಿಯ ಕುಟುಂಬದವರ ಹತ್ಯೆಗೆ ಸಂಚು ರೂಪಿಸಿ ಮೊದಲು ತನ್ನ ಪತ್ನಿಯನ್ನು ರುಬ್ಬುಗುಂಡುವಿನಿಂದ ಹೊಡೆದು ಕೊಲೆ ಮಾಡಿ ಶವವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಬೀಸಾಡಿದ.ಬಳಿಕ ಆಕೆ ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ಹೋಗಿದ್ದಾರೆಂದು ಸುಳ್ಳು ಹೇಳಿ ಕುಟುಂಬದವರಿಗೆ ಮತ್ತು ಅಕ್ಕಪಕ್ಕದ ನಿವಾಸಿಗಳಿಗೆ ನಂಬಿಸಿದ.

ನಂತರ ಪಾರ್ಟಿಯ ನೆಪದಲ್ಲಿ ಭಾಮೈದುನರಾದ ಶಿವಕುಮಾರ್‌ ಮತ್ತು ಶಂಕರ್‌ ಅವರನ್ನು ಮನೆಗೆ ಕರೆಸಿಕೊಂಡು ನೆಶೆ ಏರಿದ ನಂತರ ಅವರುಗಳನ್ನು ರುಬ್ಬುಗುಂಡುವಿನಿಂದ ಹೊಡೆದು ಕೊಲೆ ಮಾಡಿ ಶವಗಳನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಚಾರ್ಮುಡಿಘಾಟ್‌ನಲ್ಲಿ ಎಸೆದು ಬಂದು ಅವರುಗಳ ಪತ್ನಿಯನ್ನು ಕೊಲೆಮಾಡಲು ಸಂಚು ರೂಪಿಸಿದ.

ಅದರಂತೆ ನಳಿನಿ ಮತ್ತು ದಿವ್ಯಾ ಅವರನ್ನು ಊಟದ ನೆಪದಲ್ಲಿ ಮನೆಗೆ ಕರೆಸಿಕೊಂಡು ಅವರಿಗೂ ಸಹ ರುಬ್ಬುಗುಂಡುವಿನಿಂದ ಹೊಡೆದು ಕೊಲೆ ಮಾಡಿ ಶವಗಳನ್ನು ಮೂಟೆಗಳಲ್ಲಿ ಕಟ್ಟಿ ತನ್ನ ಕಾರಿನಲ್ಲಿ ಹಾಕಿಕೊಂಡು ನಂದಿಬೆಟ್ಟದ ತಪ್ಪಲಿನಲ್ಲಿ ಬಿಸಾಡಿ ಬಂದಿದ್ದಾನೆ.

ಮತ್ತೆ ಉಳಿದವರನ್ನು ಕೊಲೆ ಮಾಡಲು ಸಂಚು ರೂಪಿಸಿ ಅತ್ತೆ ರೂಪವತಿ ಮತ್ತು ಬಾಲಕ ಪುನೀತನನ್ನು ಕರೆಸಿಕೊಂಡು ಅವರಿಗೂ ಸಹ ರುಬ್ಬುಗುಂಡುವಿನಿಂದ ಹೊಡೆದು ಕೊಲೆ ಮಾಡಿ ಶವಗಳನ್ನು ನಂದಿಬೆಟ್ಟದ ತಪ್ಪಲಿನಲ್ಲಿ ಬಿಸಾಡಿ ತನಗೆ ಏನೂ ಗೊತ್ತಿಲ್ಲದಂತೆ ತನ್ನ ಪಾಡಿಗೆ ತಾನು ಇದ್ದನು.

ಈ ನಡುವೆ ನಳಿನಿ ಕಾಣೆಯಾಗಿರುವ ಬಗ್ಗೆ ಅವರ ತಾಯಿ ಶ್ರೀರಾಮಪುರ ಪೊಲೀಸ್‌‍ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ಕೈಗೊಂಡಾಗ ಆರೋಪಿ ಕ್ಯಾಬ್‌ ಚಾಲಕ ಇಂದುಶೇಖರ್‌ ಮೇಲೆ ಅನುಮಾನ ಬಂದಿತ್ತು. ಆತನನ್ನು ಕರೆದು ನಳಿನಿ ನಾಪತ್ತೆ ಬಗ್ಗೆ ಕೇಳಿದಾಗ ಗೊಂದಲ ಹೇಳಿಕೆಯನ್ನು ನೀಡಿದ್ದ. ಆಗ ಪೊಲೀಸರು ಈತನ ಮೇಲೆ ಅನುಮಾನಗೊಂಡು ತೀವ್ರವಿಚಾರಣೆಗೆ ನಡೆಸಿದಾಗ ಏಳು ಮಂದಿಯ ಹತ್ಯಾಕಾಂಡ ಬೆಳಕಿಗೆ ಬಂದಿದೆ.ಆರೋಪಿಯನ್ನು ಕರೆದುಕೊಂಡು ಪೊಲೀಸರು ನಂದಿಬೆಟ್ಟದ ತಪ್ಪಲಿನಲ್ಲಿ ಇಂದು ಶವಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮೊಬೈಲ್‌ ಲೊಕೇಶನ್‌ನಿಂದ ಸಿಕ್ಕಿ ಬಿದ್ದ ಕ್ರೂರಿ :
ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿದ ಬಳಿಕ ಅವರುಗಳ ಮೊಬೈಲ್‌ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದರಿಂದ ಪೊಲೀಸರಿಗೆ ಸುಲಭವಾಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ನಳಿನಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಾಯಿ ದೂರು ನೀಡಿದಾಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ರಾಜಾಜಿನಗರ ಠಾಣೆ ಪೊಲೀಸರು ಮೊದಲು ನಳಿನಿ ಬಳಸುತ್ತಿದ್ದ ಮೊಬೈಲನ್ನು ಟ್ರೇಸ್‌‍ ಮಾಡಿದ್ದಾರೆ.

ಆಗ ಪೊಲೀಸರಿಗೆ ಮೊದಲು ಆ ಲೊಕೇಶನ್‌ ತೋರಿಸಿದ್ದೇ ಬಾಷ್ಯಂ ಸರ್ಕಲ್‌ ಬಳಿಯ ಆರೋಪಿ ಇಂದುಶೇಖರ್‌ ಮನೆ ವಿಳಾಸ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ದಾವಿಸಿ ಮನೆಯೊಳಗೆ ಕುಳಿತಿದ್ದ ಆರೋಪಿ ಇಂದುಶೇಖರ್‌ನನ್ನು ವಿಚಾರಿಸಿದಾಗ ಮೊದಲು ತಡಬಡಾಯಿಸಿದ್ದಾನೆ. ಪೊಲೀಸರು ತಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆತನ ಭೀಭತ್ಸ ಕೃತ್ಯ ಬಯಲಾಗಿದೆ. ಆತ ಏಳು ಮಂದಿಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದನ್ನು ಕೇಳಿ ಪೊಲೀಸರೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

RELATED ARTICLES

Latest News