Homeರಾಜ್ಯಬೇಯರ್ ಕಂಪನಿ ಜತೆ ಒಪ್ಪಂದಕ್ಕೆ ಸಹಿ, ರಾಜ್ಯದಲ್ಲಿ ₹200 ಕೋಟಿ ಹೂಡಿಕೆ

ಬೇಯರ್ ಕಂಪನಿ ಜತೆ ಒಪ್ಪಂದಕ್ಕೆ ಸಹಿ, ರಾಜ್ಯದಲ್ಲಿ ₹200 ಕೋಟಿ ಹೂಡಿಕೆ

ಬೆಂಗಳೂರು: ಆರೋಗ್ಯ ಸೇವೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದ ಕಂಪನಿಯಾಗಿರುವ ಜರ್ಮನಿ ಮೂಲದ ಬೇಯರ್ ಸೈನ್ಸ್ ಅಂಡ್ ಇನ್ನೋವೇಶನ್ ಬೆಂಗಳೂರಿನ ಸಮೀಪ ತನ್ನ ಅತ್ಯಾಧುನಿಕ ಉತ್ಪಾದನಾ ಸ್ಥಾವರ ಅಭಿವೃದ್ಧಿಗೆ ₹200 ಕೋಟಿ ಹೂಡಿಕೆ ಮಾಡಲಿದ್ದು, ಈ ಸಂಬಂಧ ಅದು ಶುಕ್ರವಾರ ಸರಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ಸಮ್ಮುಖದಲ್ಲಿ ಇದು ನೆರವೇರಿತು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮತ್ತು ಬೇಯರ್ ಕಂಪನಿಯ ಸಿಎಫ್ಒ ವಿನೀತ್ ಜಿಂದಾಲ್ ಒಡಂಬಡಿಕೆಗೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲರು, ಬೇಯರ್ ಕಂಪನಿಯು ಮುಂದಿನ 7 ವರ್ಷಗಳಲ್ಲಿ ಹಂತಹಂತವಾಗಿ ಈ ಹೂಡಿಕೆ ಮಾಡಲಿದೆ. ಇದರಿಂದ 220 ಉದ್ಯೋಗಗಳು ಸೃಷ್ಟಿಯಾಗಲಿವೆ. ತಾವು ಇತ್ತೀಚೆಗೆ ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ನೆದರ್ಲೆಂಡ್ಸ್ ಪ್ರವಾಸ ಕೈಗೊಂಡಿದ್ದಾಗ ಆಮ್ಸ್ಟರ್ ಡ್ಯಾಮ್ ನಲ್ಲಿ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗಿತ್ತು ಎಂದಿದ್ದಾರೆ.

ರಸಗೊಬ್ಬರ, ಕೀಟನಾಶಕ ಮತ್ತು ಶಿಲೀಂದ್ರನಾಶಕ ಮುಂತಾದವನ್ನು ಉತ್ಪಾದಿಸುವ ಈ ಕಂಪನಿಯು ಹೂಡಿಕೆಯಿಂದ 220 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಂಪನಿಯು ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮೊದಲೇ ಯೋಜನೆಯ ಭೂಮಿಪೂಜೆ ನೆರವೇರಿಸಲು ಬಯಸಿದ್ದು, ತ್ವರಿತವಾಗಿ ತಯಾರಿಕೆ ಚಟುವಟಿಕೆಗಳನ್ನು ಆರಂಭಿಸಲು ಉತ್ಸುಕವಾಗಿದೆ. ಕಂಪನಿಯು ಈಗಾಗಲೇ ಬೆಂಗಳೂರಿನಲ್ಲಿ ತನ್ನ ಸೇವಾ ಮತ್ತು ನಾವೀನ್ಯತೆಯ ಹಬ್ ಹಾಗೂ ಚಾಮರಾಜ ನಗರದಲ್ಲಿ ಬೆಳೆ ಪರೀಕ್ಷಾ ಕೇಂದ್ರವನ್ನು ಹೊಂದಿದೆ.

ಭಾರತದಲ್ಲಿ ಇದು 125 ವರ್ಷಗಳಿಂದಲೂ ಇದ್ದು 11 ಸಾವಿರ ಜನರಿಗೆ ಕೆಲಸ ಕೊಟ್ಟಿದೆ. ದೇಶದಲ್ಲಿ ಬೇಯರ್ ಕಂಪನಿಯು 7 ಉತ್ಪಾದನಾ ಸ್ಥಾವರಗಳು ಮತ್ತು 3 ಜಿಇಸಿ ಕೇಂದ್ರಗಳನ್ನು ಹೊಂದಿದೆ ಎಂದು ಅವರು ನುಡಿದಿದ್ದಾರೆ. ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಆಯುಕ್ತೆ ಖುಷ್ಬೂ ಗೋಯಲ್ ಚೌಧರಿ, ಕೆಐಎಡಿಬಿ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.

RELATED ARTICLES

Latest News