ಬೆಂಗಳೂರು, ಸೆ.21- ರಾಜ್ಯದಲ್ಲಿ ಬರ ಘೋಷಣೆ ವಿಚಾರ ಆಡಳಿತಾರೂಢ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರದ ಮಾನ ದಂಡಗಳನ್ನು ಆಧರಿಸಿ ಬರಪೀಡಿತ ತಾಲ್ಲೂಕುಗಳನ್ನು ಗುರುತಿಸಲಾಗುತ್ತಿದ್ದು, ಹಲವು ತಾಲ್ಲೂಕುಗಳಲ್ಲಿ ನಿಗದಿತ ಮಾನದಂಡಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬರ ಘೋಷಣೆ ಸಾಧ್ಯವಾಗಿಲ್ಲ.
ಆದರೆ ತಮ ಕ್ಷೇತ್ರವನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕೆಂಬ ಒತ್ತಡವನ್ನು ಹಲವು ಶಾಸಕರು ಸರ್ಕಾರದ ಮೇಲೆ ಹೇರುತ್ತಿದ್ದಾರೆ. ವಿಶೇಷವಾಗಿ ಆಡಳಿತ ಪಕ್ಷದ ಶಾಸಕರಿಗೆ ತಮ ಕ್ಷೇತ್ರವನ್ನು ಬರಪೀಡಿತ ಎಂದು ಘೋಷಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ.
ಇದರ ಬೆನ್ನಲ್ಲೇ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರು ತಮ ಗದಗ ತಾಲೂಕನ್ನು ಅಕ್ಟೋಬರ್ 10ರೊಳಗೆ ಬರಪೀಡಿತ ಎಂದು ಘೋಷಿಸದಿದ್ದರೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಮೇಲೆ ಒತ್ತಡ ತಂದು ಕೆಲವೇ ದಿನಗಳಲ್ಲಿ ಗದಗ ತಾಲ್ಲೂಕನ್ನು ಬರಪೀಡಿತ ಪ್ರದೇಶಗಳ ವ್ಯಾಪ್ತಿಗೆ ಸೇರಿಸುವುದಾಗಿ ಅವರು ಕ್ಷೇತ್ರದ ಜನರಿಗೆ ಭರವಸೆ ನೀಡಿದ್ದಾರೆ.
ಮತ್ತೊಂದೆಡೆ, ಜಗಳೂರು ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸದಿರುವುದನ್ನು ಖಂಡಿಸಿ ಪ್ರತಿಭಟನೆಗಳು ನಡೆದಿವೆ. ಈ ಹಿಂದೆ ಮೊಳಕಾಲುರು ಸೇರಿದಂತೆ ಹಲವು ತಾಲ್ಲೂಕುಗಳ ಶಾಸಕರೂ ಬರ ಘೋಷಣೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಮಾನದಂಡಗಳೇ ಸರ್ಕಾರಕ್ಕೆ ಸವಾಲು:
ಕೇಂದ್ರದ ಬರ ಮಾನದಂಡಗಳ ಪ್ರಕಾರ ನಿರ್ದಿಷ್ಟ ಅವಧಿಯಲ್ಲಿ ನಿರಂತರ ಒಣಹವೆ, ಮಳೆಯ ಕೊರತೆ, ತೇವಾಂಶದ ಪ್ರಮಾಣ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಲಾಗುತ್ತದೆ. ಕೆಲವು ತಾಲ್ಲೂಕುಗಳಲ್ಲಿ ಈ ಮಾನದಂಡಗಳು ಪೂರ್ಣ ಪ್ರಮಾಣದಲ್ಲಿ ಈಡೇರದ ಹಿನ್ನೆಲೆಯಲ್ಲಿ ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸಲು ಸಾಧ್ಯವಾಗಿಲ್ಲ.
ಶಾಸಕರಿಗೆ ಕೇಂದ್ರದ ನಿಯಮಾವಳಿಗಳು ಹಾಗೂ ರಾಜ್ಯ ಸರ್ಕಾರ ನಡೆಸಿರುವ ಸಮೀಕ್ಷೆಯ ಫಲಿತಾಂಶದ ಅರಿವಿದ್ದರೂ, ರಾಜಕೀಯ ಒತ್ತಡದಿಂದ ತಮ ಕ್ಷೇತ್ರಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೇಂದ್ರದ ನೆರವಿನ ಮೇಲೂ ಪರಿಣಾಮದ ಆತಂಕ:
ನಿಗದಿತ ಮಾನದಂಡಗಳನ್ನು ಮೀರಿ ರಾಜಕೀಯ ಒತ್ತಡಕ್ಕೆ ಮಣಿದು ಬರ ಘೋಷಣೆ ಮಾಡಿದರೆ, ಮುಂದಿನ ಹಂತದಲ್ಲಿ ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಶೀಲನೆ ನಡೆಯಲಿದೆ. ತಪ್ಪು ಮಾಹಿತಿ ಆಧರಿಸಿ ಬರ ಘೋಷಣೆ ಮಾಡಲಾಗಿದೆ ಎಂಬ ಅನುಮಾನ ಮೂಡಿದರೆ ಕೇಂದ್ರದಿಂದ ದೊರೆಯಬೇಕಾದ ಆರ್ಥಿಕ ನೆರವು ವಿಳಂಬವಾಗುವ ಆತಂಕ ರಾಜ್ಯ ಸರ್ಕಾರಕ್ಕಿದೆ.
ಪ್ರತಿಯೊಂದು ಬರಪೀಡಿತ ತಾಲ್ಲೂಕಿನ ಘೋಷಣೆಯನ್ನೂ ಕೇಂದ್ರ ಸರ್ಕಾರ ಪರಿಶೀಲನೆಗೆ ಒಳಪಡಿಸುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಮಾನದಂಡಗಳನ್ನು ಪಾಲಿಸುತ್ತಿದೆ. ಯಾವುದೇ ಹಂತದಲ್ಲಿ ಲೋಪ ಕಂಡುಬಂದು ಕೇಂದ್ರದ ನೆರವು ವಿಳಂಬವಾದರೆ ಬರ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ವಿಶೇಷ ಅಧಿವೇಶನದಲ್ಲಿ ಆಡಳಿತ ಪಕ್ಷದ ಶಾಸಕರಿಂದಲೇ ಒತ್ತಡ?:
ವಿಶೇಷವಾಗಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ವಂಚಿತರಾದ ಶಾಸಕರು ಬರ ಘೋಷಣೆ ವಿಚಾರದಲ್ಲಿ ಬಿಗಿಪಟ್ಟು ಹಿಡಿದಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಇಂದಿನಿಂದ ಆರಂಭವಾಗಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲೂ ಬರ ಘೋಷಣೆ ವಿಚಾರ ಪ್ರಮುಖ ಚರ್ಚೆಯ ವಿಷಯವಾಗುವ ಸಾಧ್ಯತೆ ಇದೆ. ವಿರೋಧ ಪಕ್ಷದ ಶಾಸಕರಿಗಿಂತ ಆಡಳಿತ ಪಕ್ಷದ ಶಾಸಕರಿಂದಲೇ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ವ್ಯಕ್ತವಾಗುವ ಸಾಧ್ಯತೆ ಇದೆ.
