ಬೆಂಗಳೂರು, ಜೂ. 18- ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ವಿಧಾನಸಭೆಯ 222 ಶಾಸಕರು ಮತ ಚಲಾಯಿಸಿದ್ದು, ಸಂಜೆ ಮತ ಎಣಿಕೆ ನಡೆದು ಇದೇ ದಿನ ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್ 135 ಶಾಸಕರು, ಬಿಜೆಪಿಯ 62, ಜೆಡಿಎಸ್ನ 18, ಬಿಜೆಪಿಯ ಉಚ್ಛಾಟಿತ 3, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕ ರೈತ ಪ್ರಗತಿ ಪಕ್ಷದ ಜನಾರ್ಧನರೆಡ್ಡಿ, ಪಕ್ಷೇತರರಾದ ಗೌರಿಬಿದನೂರಿನ ಪುಟ್ಟಸ್ವಾಮಿ, ಹರಪ್ಪನ ಹಳ್ಳಿಯ ಲತಾ ಮಲ್ಲಿಕಾರ್ಜುನ್ ಅವರು ಇಂದು ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ಮತ ಚಲಾಯಿಸಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅನಾರೋಗ್ಯದ ನಡುವೆಯೂ ವಿಧಾನಸೌಧಕ್ಕೆ ಬಂದು ತಮ ಹಕ್ಕು ಚಲಾಯಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್, ಪಿ.ವಿ.ಮೋಹನ್, ತಿಪ್ಪಣ್ಣಪ್ಪ ಕಮಕನೂರು, ಮಾಳವಳ್ಳಿ ಶಿವಣ್ಣ ಮೊದಲ 4 ಅಭ್ಯರ್ಥಿಗಳಾಗಿ ಕಣದಲ್ಲಿದ್ದು, 5ನೇ ಅಭ್ಯರ್ಥಿಯಾಗಿ ಡಿ.ಕೆ.ಶಿವಕುಮಾರ್ ಅವರ ಆಪ್ತ ವಿನಯ್ ಕಾರ್ತಿಕ್ ಸ್ಪರ್ಧಿಸಿದ್ದಾರೆ. ಬಿಜೆಪಿಯ ರಘುಕೌಟಿಲ್ಯ ಹಾಗೂ ಲಿಂಗರಾಜ್ ಪಾಟೀಲ್ ಮತ್ತು ಜೆಡಿಎಸ್ ಗೋವಿಂದರಾಜ್ ಅವರು ಅಖಾಡದಲ್ಲಿದ್ದಾರೆ.
ತಲಾ ಅಭ್ಯರ್ಥಿಗೆ ಗೆಲುವಿಗೆ 28 ಮತಗಳ ಅಗತ್ಯ ಇದೆ. ಕಾಂಗ್ರೆಸ್ ಪಕ್ಷ ಕಳೆದೆರಡು ದಿನಗಳಿಂದಲೂ ಬಿಡದಿ ಬಳಿಯ ಖಾಸಗಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿಸಿ, ಮತದಾನದ ಕುರಿತು ತರಬೇತಿ ನೀಡಿದೆ ಮತ್ತು ಅಣಕು ಮತದಾನವನ್ನು ನಡೆಸಿದೆ. ಇಂದು ಬೆಳಗ್ಗೆ ರೆಸಾರ್ಟ್ನಿಂದ ಎಲ್ಲಾ ಶಾಸಕರನ್ನು ತಲಾ 5 ಬಸ್ಗಳಲ್ಲಿ ವಿಧಾನಸೌಧಕ್ಕೆ ಕರೆತರಲಾಯಿತು. ಕಾಂಗ್ರೆಸ್ ಪಕ್ಷ ಮೊದಲ 4 ಅಭ್ಯರ್ಥಿಗಳಿಗೆ 30 ಮತಗಳನ್ನು ಹಂಚಿಕೆ ಮಾಡಿದ್ದು, ಪ್ರತಿಯೊಂದು ಬಸ್ನಲ್ಲೂ ಹಂಚಿಕೆ ಮಾಡಲಾದ ಮತಗಳ ಶಾಸಕರು ಹಾಗೂ ಅಭ್ಯರ್ಥಿ ಜೊತೆಯಾಗಿಯೇ ಪ್ರಯಾಣಿಸಿದ್ದಾರೆ. ಹಿರಿಯ ನಾಯಕರು ಬಸ್ನಲ್ಲೇ ಉಳಿದು ಯಾವುದೇ ವ್ಯತ್ಯಾಸವಾಗದಂತೆ ಎಚ್ಚರಿಕೆ ವಹಿಸಿದ್ದಾರೆ.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶೀ ರಣದೀಪ್ ಸುರ್ಜೇವಾಲ ಮತ್ತಿತರರು ಶಾಸಕರ ಜೊತೆಯಲ್ಲೇ ಹೆಜ್ಜೆ ಹಾಕಿದ್ದರು. ಮತಗಳು ಅಸಿಂಧುಗೊಳ್ಳದಂತೆ ಹಾಗೂ ಪ್ರಾಶಸ್ತ್ಯ ಮತದಲ್ಲಿ ಯಾವುದೇ ಗೊಂದಲಗಳಾಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅನಾರೋಗ್ಯದಿಂದ ವಿಶ್ರಾಂತಿ ಪಡೆದಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಮಧ್ಯಾಹ್ನದ ಅವರು ವಿಧಾನಸೌಧಕ್ಕೆ ಆಗಮಿಸಿ ಮತ ಹಾಕಿದರು. ದೆಹಲಿಯ ಪ್ರವಾಸದ ವೇಳೆ ಅನಾರೋಗ್ಯಕ್ಕೀಡಾಗಿದ್ದ ತಿಪಟೂರಿನ ಕೆ.ಷಡಕ್ಷರಿ ಹಾಗೂ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಗವಾಡ ಕ್ಷೇತ್ರದ ರಾಜುಕಾಗೆ ವೀಲ್ಚೇರ್ನಲ್ಲಿ ಆಗಮಿಸಿ ಮತ ಚಲಾಯಿಸಿದ್ದಾರೆ.
ಬಿಜೆಪಿಯ ಉಚ್ಛಾಟಿತ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ನ ಶಾಸಕ ಬಸವರಾಯರೆಡ್ಡಿ ಮತ್ತು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರ ಜೊತೆ ಆಗಮಿಸಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಇಂದು ಬೆಳಗ್ಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಿಜೆಪಿಯ ಎಲ್ಲಾ ಶಾಸಕರು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಶಾಸಕಾಂಗ ಕಚೇರಿಯಲ್ಲಿ ಸಭೆ ಸೇರಿ ನಂತರ ಪಕ್ಷ ಹಂಚಿಕೆ ಮಾಡಿದ ಅಭ್ಯರ್ಥಿಗೆ ಸರದಿಯಲ್ಲಿ ಬಂದು ಮತ ಚಲಾಯಿಸಿದರು. ಬೆಳಗ್ಗೆ 11ಗಂಟೆಯ ಒಳಗೆ ಬಿಜೆಪಿಯ ಎಲ್ಲಾ ಶಾಸಕರ ಮತ ಚಲಾವಣೆ ಮುಗಿದಿತ್ತು. ಆರ್.ಅಶೋಕ್, ಭೈರತಿ ಬಸವರಾಜ್, ಪ್ರಭು ಚೌಹಾಣ್, ಬಿ.ವೈ.ವಿಜಯೇಂದ್ರ, ಅಶ್ವನಾರಾಯಣ, ರಮೇಶ್ ಜಾರಕಿಹೊಳಿ, ಮುನಿರತ್ನ ಸೇರಿದಂತೆ ಹಲವಾರು ಶಾಸಕರು ಆಗಮಿಸಿ ಮತ ಚಲಾಯಿಸಿದರು.
ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿ ಗೆಲುವಿಗೆ ತಲಾ 30 ಚಲಾಯಿಸಿಕೊಳ್ಳಲಾದ ಮತಗಳನ್ನು ಹೊರತು ಪಡಿಸಿ ಹೆಚ್ಚುವರಿ 2 ಮತಗಳನ್ನು ಎನ್ಡಿಎ ಮಿತ್ರ ಪಕ್ಷವಾಗಿರುವ ಜೆಡಿಸ್ ಅಭ್ಯರ್ಥಿ ಗೋವಿಂದ ರಾಜ್ಗೆ ಚಲಾಯಿಸಲು ಸೂಚನೆ ನೀಡಲಾಗಿತ್ತು. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜ್ ಪರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರ್ಯತಂತ್ರ ರೂಪಿಸಿದ್ದು, ತಮ ಪಕ್ಷದ ಎಲ್ಲಾ ಶಾಸಕರನ್ನು ನಿನ್ನೆ ದೇವನಹಳ್ಳಿ ಬಳಿಯ ಖಾಸಗಿ ರೆಸಾರ್ಟ್ನಲ್ಲಿ ಇರಿಸಿದ್ದರು. ಅಲ್ಲಿ ಚರ್ಚೆ ನಡೆಸಿ, ನಂತರ ಬಸ್ನಲ್ಲಿ ಒಟ್ಟಾಗಿ ವಿಧಾನಸಭೆಗೆ ಆಗಮಿಸಿದರು.
ಪಕ್ಷಗಳು ಹಂಚಿಕೆ ಮಾಡಿದ ಮಾದರಿಯಲ್ಲೇ ಮತದಾನವಾದರೆ, ಕಾಂಗ್ರೆಸ್ನ ಮೊದಲ 4 ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸುವುದು ಸುಲಭವಾಗಲಿದೆ. ಕಾಂಗ್ರೆಸ್ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಮತ್ತು ಜೆಡಿಎಸ್ನ ಗೋವಿಂದರಾಜ್ ಅವರ ನಡುವ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಮತದಾನ ಮಾಡಿದ ಬಳಿಕ ಜೆಡಿಎಸ್ನ ಜಿ.ಟಿ.ದೇವೇಗೌಡ, ತಮ ಪಕ್ಷದ ಗೋವಿಂದರಾಜ್ ಗೆಲುವು ಸಾಧಿಸುತ್ತಾರೆ. ಚುನಾವಣೆ ಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ಸೇರಿದಂತೆ ತಮಗೆ ಎಲ್ಲರೂ ಕರೆ ಮಾಡಿದ್ದಾರೆ. ನಾನು ಆತಸಾಕ್ಷಿಯ ಮತ ಹಾಕಿದ್ದೇನೆ ಎಂದು ಹೇಳಿ ಅಚ್ಚರಿ ಮೂಡಿಸಿದರು.
ಬಿಜೆಪಿಯ ಉಚ್ಛಾಟಿತ ಶಾಸಕರ ಪೈಕಿ ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಶಾಸಕರ ಜೊತೆ ಆಗಮಿಸಿದ್ದು ಕುತೂಹಲ ಕೆರಳಿಸಿದ್ದರೆ, ಮತ್ತೊಬ್ಬ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಾವು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ತಿಳಿಸಿದ್ದಾರೆ. ಎಸ್.ಟಿ.ಸೋಮಶೇಖರ್ ತಾವು ಆತಸಾಕ್ಷಿ ಮತವನ್ನು ಕಾಂಗ್ರೆಸ್ಗೆ ಹಾಕಿರುವುದಾಗಿ ಬಹಿರಂಗ ಪಡಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಿಗೆ ಈ ಚುನಾವಣೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿತು.್ತ ಕಳೆದ ಮೂರ್ನಾಲ್ಕು ದಿನಗಳಿಂದ ನಡೆದ ರಣತಂತ್ರಗಳು ಯಾವ ಮಟ್ಟಿಗೆ ಫಲ ನೀಡಿವೆ ಎಂದು ಸಂಜೆ ಮತ ಎಣಿಕೆಯ ಬಳಿಕ ತಿಳಿದು ಬರಲಿದೆ.
