ಬೆಂಗಳೂರು,ಜೂ.18-ನಾವು ಎಷ್ಟೇ ಬುದ್ಧಿ ಉಪಯೋಗಿಸಿದರೂ ಸಹ ಕಳ್ಳರು ತಮ್ಮ ಖತರ್ನಾಕ್ ಬುದ್ಧಿ ಬಳಸಿ ಕಳ್ಳತನ ಮಾಡುತ್ತಾರೆ ಜೋಕೆ… ಇಂತಹ ಪ್ರಕರಣವೊಂದು ಕಲ್ಬುರ್ಗಿ ನಗರದಲ್ಲಿ ನಡೆದಿದ್ದು, ಊರಿಗೆ ಹೋಗುವಾಗ ಮನೆ ಮಾಲೀಕರು ಹಣ ಹಾಗೂ ಆಭರಣಗಳನ್ನು ವಾಷಿಂಗ್‌ಮಷಿನ್‌ನೊಳಗೆ ಇಟ್ಟಿದ್ದರೂ ಸಹ ಕಳ್ಳರು ಎಲ್ಲವನ್ನೂ ಜಾಲಾಡಿ ಕದ್ದೊಯ್ದಿದ್ದಾರೆ.
ಕಲ್ಬುರ್ಗಿ ಪ್ರಶಾಂತ್ ನಗರದಲ್ಲಿ ನಿವೃತ್ತ ಸರ್ಕಾರಿ ನೌಕರರಾದ ಮಧ್ವೇಶ್ ಕುಲಕರ್ಣಿ ದಂಪತಿ ವಾಸವಾಗಿದ್ದು, ಕಳೆದ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಮಗನ ಮನೆಗೆ ಹೋಗಲು ತಯಾರಿ ನಡೆಸಿದ್ದರು. ಈ ನಡುವೆ ಕಳ್ಳಕಾಕರ ಭಯದಿಂದ ಹಣ ಆಭರಣಗಳನ್ನು ಬೀರುವಿನಲ್ಲಿಟ್ಟರೆ ಕಳ್ಳರು ಜಾಲಾಡುತ್ತಾರೆಂದು ಹೆದರಿ, ಸುರಕ್ಷಿತವಾಗಿ ವಾಷಿಂಗ್ ಮಿಷಿನ್ನೊಳಗೆ ಬಚ್ಚಿಟ್ಟು ಬೆಂಗಳೂರಿನಲ್ಲಿರುವ ಮಗನ ಮನೆಗೆ ಬಂದಿದ್ದಾರೆ.
ಇಷ್ಟಾದರೂ ಸಹ ಇವರ ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರು ಬೀಗ ಮುರಿದು ಒಳನುಗ್ಗಿ ಮನೆಯ ಮೂಲೆ ಮೂಲೆಯನ್ನೂ ಜಾಲಾಡಿದ್ದಾರೆ. ಕೈಗೆ ಏನೂ ಸಿಗದಿದ್ದಾಗ ಕೊನೆಗೆ ಕಣ್ಣಿಗೆ ಕಂಡ ವಾಷಿಂಗ್ ಮಿಷಿನ್ ಡೋರ್ ತೆಗೆದು ನೋಡಿದಾಗ ಅದೃಷ್ಟ ಖುಲಾಯಿಸಿದೆ. ಅದರೊಳಗಿದ್ದ ಚಿನ್ನದ ತಾಳಿ, ಬೆಳ್ಳಿಯ ಪೂಜಾ ಸಾಮಾಗ್ರಿಗಳು, 80 ಸಾವಿರ ಹಣ ಸೇರಿದಂತೆ ಒಟ್ಟು 1.49 ಲಕ್ಷ ಮೌಲ್ಯದ ಮಾಲನ್ನು ದೋಚಿ ಪರಾರಿಯಾಗಿದ್ದಾರೆ.
ಮೂರು ತಿಂಗಳು ಮಗನ ಮನೆಯಲ್ಲಿದ್ದು, ಪ್ರವಾಸ ಮುಗಿಸಿ ವಾಪಸ್ ಮನೆಗೆ ಹೋದಾಗ ಬೀಗ ಮುರಿದಿರುವುದು ಕಂಡು ಬಂದಿದೆ. ಇದರಿಂದ ಗಾಬರಿಯಾದ ದಂಪತಿ ಮನೆ ಒಳಗೆ ಹೋಗುತ್ತಿದ್ದಂತೆ ವಾಷಿಂಗ್ ಮಿಷಿನ್ ಡೋರ್ ತೆಗೆದು ನೋಡಿದಾಗ ತಾವು ದುಡಿದು ಸಂಪಾದಿಸಿದ ಸಂಪತ್ತನ್ನೆಲ್ಲಾ ಕಳ್ಳರು ದೋಚಿಕೊಂಡು ಹೋಗಿರುವುದು ಕಂಡು ಕಂಗಾಲಾಗಿದ್ದಾರೆ. ತಕ್ಷಣ ಪೊಲೀಸರಿಗೆ ಮಧ್ವೇಶ್ ಕುಲಕರ್ಣಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
