ಬೆಂಗಳೂರು, ಜೂ.20- ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅಡ್ಡಿ ಪಡಿಸಿದರೆ ನೀರಿನ ಸಂಗ್ರಹದ ಕೊರತೆಯಾಗಿ, ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸಲು ಕಷ್ಟವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ವಿಧಾನಸೌಧದ ಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಮಟ್ಟಿಗೆ ಕೆ ಆರ್ ಎಸ್ ನಲ್ಲಿ 11, ಕಬಿನಿಯಲ್ಲಿ 5 ಟಿಎಂಸಿ ಸೇರಿ, ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ 16 ಟಿಎಂಸಿ ನೀರಿನ ಸಂಗ್ರಹವಿದೆ.
ಅದರಲ್ಲಿ ಕುಡಿಯುವ ನೀರಿಗೆ ಕಾಯ್ದಿರಿಸಿದರೆ ಬಾಕಿ ಉಳಿಯುವುದು 3 ಟಿಎಂಸಿ ಮಾತ್ರ. ಇದರಲ್ಲಿ ಕೃಷಿಗೆ ಬಳಕೆ ಮಾಡಲು ಅವಕಾಶ ಇಲ್ಲ ಎಂದು ಹೇಳಿದರು. ಕಾವೇರಿ ನದಿ ಪಾತ್ರದ ಅಡಿಯಲ್ಲಿ ಒಟ್ಟು 114 ಟಿಎಂಸಿ ಸಾಮರ್ಥ್ಯದ ಹಾರಂಗಿ, ಹೇಮಾವತಿ, ಕೃಷ್ಣರಾಜ ಸಾಗರ, ಕಬಿನಿ ನಾಲ್ಕು ಜಲಾಶಯಗಳಿವೆ. ಮೇಕೆದಾಟು ಬಳಿ 67 ಟಿಎಂಸಿ ನೀರು ಸಂಗ್ರಹಿಸುವ ಹೊಸ ಅಣೆಕಟ್ಟು ನಿರ್ಮಿಸಬೇಕು ಎಂಬುದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದರಿಂದ ಬೆಂಗಳೂರಿಗೆ 4.75 ಟಿಎಂಸಿ ಕುಡಿಯುವ ನೀರು ದೊರೆಯುತ್ತದೆ ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ವ್ಯವಸಾಯಕ್ಕೆ ನೀರು ಬಳಕೆ ಮಾಡಿಕೊಳ್ಳುವುದಿಲ್ಲ ಎಂದರು.
ಪ್ರತಿ ನಾಲ್ಕೈದು ವರ್ಷಕ್ಕೊಮೆ ಮಳೆ ಕಡಿಮೆಯಾಗುತ್ತದೆ, ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ಪ್ರತಿ ತಿಂಗಳು ಕಾವೇರಿ ನೀರು ಹರಿಸಲು ಕೊರತೆಯಾಗಲಿದೆ. ಜೂನ್ ನಲ್ಲಿ 9.19 ಟಿಎಂಸಿ, ಜುಲೈನಲ್ಲಿ 31.24, ಆಗಸ್ಟ್ ನಲ್ಲಿ 45.95, ಸೆಪ್ಟಂಬರ್ ನಲ್ಲಿ 36, ಅಕ್ಟೋಬರ್ ನಲ್ಲಿ 20, ನವೆಂಬರ್ ನಲ್ಲಿ 13, ಡಿಸೆಂಬರ್ ನಲ್ಲಿ 7 ಟಿಎಂಸಿ , ನಂತರ ಪ್ರತಿ ತಿಂಗಳು ಎರಡುವರೆ ಟಿಎಂಸಿಯಂತೆ ಒಟ್ಟು 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಹಿಂದೆ ತೀರ್ಮಾನವಾಗಿತ್ತು ಎಂದು ವಿವರಿಸಿದರು.
ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ, ತಮಿಳುನಾಡು ಸುಪ್ರಿಂಕೋರ್ಟ್ಗೆ ಮಿಸಲೆನಿಯಸ್ ಅರ್ಜಿ ಹಾಗೂ ರಿವ್ಯೂ ಪಿಟಿಷನ್ ಹಾಕಿತ್ತು. ಎರಡು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ನಂತರವೂ ನಿನ್ನೆ ತಮಿಳುನಾಡಿನ ಮುಖ್ಯಮಂತ್ರಿಯವರು ಮೇಕೆದಾಟು ಯೋಜನೆ ವಿಚಾರವಾಗಿ ಹೋರಾಟ ಮಾಡಬೇಕು ಎಂದು ಅಲ್ಲಿನ ವಿಧಾನಸಭೆಯಲ್ಲಿ ಹೇಳಿದ್ದಾರೆ ಎಂದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಇತ್ತೀಚೆಗೆ ತಾವು ದೆಹಲಿಗೆ ಭೇಟಿ ನೀಡಿದಾಗ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ, ತಮಿಳುನಾಡಿನ ಜೊತೆ ಚರ್ಚೆಗೆ ಸಭೆ ನಿಗದಿ ಪಡಿಸುವಂತೆ ಮನವಿ ಮಾಡಿದ್ದೆವು. ನಾವು ಚರ್ಚೆಗೆ ಸಿದ್ಧರಿದ್ದೇವೆ, ತಮಿಳುನಾಡಿನ ಪ್ರತಿನಿಧಿಗಳನ್ನು ಕರೆಸುವಂತೆ ಸಲಹೆ ನೀಡಿದ್ದೇವೆ. ಸಮಾಲೋಚನೆ ಮೂಲಕ ಇದನ್ನು ಬಗೆ ಹರಿಸಬಹುದು. ತಮಿಳುನಾಡಿಗೆ ನಿಗದಿ ಪಡಿಸಿರುವ ನೀರು ಹರಿಸಲು ನಮ್ಮ ತಕರಾರಿಲ್ಲ. ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರನ್ನು ನಮಗೆ ಉಳಿಸಿದರೆ ಸಾಕು ಎಂದರು.
ಮೇಕೆದಾಟು ಅಣೆಕಟ್ಟು ನಿರ್ಮಾಣವಾಗಿದ್ದರೆ ನಮಗೆ ಕುಡಿಯುವ ನೀರಿಗೆ ಅನುಕೂಲವಾಗುತ್ತಿತ್ತು ಮತ್ತು ನಿಗದಿತ ನೀರನ್ನು ಪ್ರತಿ ತಿಂಗಳು ತಮಿಳುನಾಡಿಗೆ ಹರಿಸಲು ಸಾಧ್ಯವಾಗುತ್ತಿತ್ತು. ಮೇಕೆದಾಟು ಅಣೆಕಟ್ಟಿನಿಂದ ತಮಿಳುನಾಡಿಗೆ ಹೆಚ್ಚಿನ ಲಾಭವಾಗಲಿದೆ. ವಿರೋಧ ಮಾಡಿದರೆ ತಮಿಳುನಾಡಿನ ರೈತರಿಗೆ ತೊಂದರೆಯಾಗಲಿದೆ ಎಂದರು. ಮೇಕೆದಾಟು ಯೋಜನೆಗೆ ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ಅದನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದ್ದೇವೆ. ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಲು ಹೇಳಿದ್ದಾರೆ, ಪರಿಷ್ಕೃತ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು. ಅಲ್ಲಿಂದ ಅನುಮತಿ ದೊರೆತ ಬಳಿಕ ಅಣೆಕಟ್ಟು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ತಮಿಳುನಾಡಿಗೆ ನಿಗದಿಯಾಗಿರುವ ನೀರನ್ನು ನಾವು ಬಳಕೆ ಮಾಡುವುದಿಲ್ಲ, ನಮಗೆ ಹಂಚಿಕೆಯಾಗಿರುವ ನೀರನ್ನು ಮಾತ್ರ ಬಳಸಿಕೊಳ್ಳುತ್ತೇವೆ ಎಂದು ಸ್ಪಷ್ಟ ಪಡಿಸಿದರು. ಈ ವರ್ಷದ ಜೂನ್ 18ರವರೆಗೂ ಎರಡು ಟಿಎಂಸಿ ನೀರು ಬಿಟ್ಟಿದ್ದೇವೆ. ಇನ್ನೂ ಲಭ್ಯತೆ ಇರುವುದು ಮೂರು ಟಿಎಂಸಿ ಮಾತ್ರ. ಅಣೆಕಟ್ಟು ನಿರ್ಮಾಣ ಮಾಡಿ ನೀರು ಸಂಗ್ರಹಿಸಿದ್ದರೆ ತಮಿಳುನಾಡಿಗೆ ಅನುಕೂಲವಾಗುತ್ತಿತ್ತು. ಈ ವರ್ಷ ಮಳೆ ಕಡಿಮೆಯಾಗಿ ಕರ್ನಾಟಕವೂ ಸೇರಿ 12 ರಾಜ್ಯಗಳಲ್ಲಿ ಬರಗಾಲ ಎದುರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೇಗ ಮಳೆ ಬಂದು ಅಣೆಕಟ್ಟುಗಳು ತುಂಬಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಇಲ್ಲವಾದರೆ ನೀರು ಬಿಡುವುದು ಕಷ್ಟವಾಗಲಿದೆ ಎಂದರು.
ಅಣೆಕಟ್ಟೆ ನಿರ್ಮಿಸುವ ಉದ್ದೇಶ ತಮಿಳುನಾಡಿಗೆ ಮನವರಿಕೆಯಾಗಿದೆಯೋ ಇಲ್ಲವೋ ಗೊತ್ತಿಲ್ಲ, ವಿರೋಧ ಏಕೆ ಮಾಡಲಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ನೆರೆ ಹೊರೆಯ ರಾಜ್ಯಗಳು ಮಾತುಕತೆಯ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು. ನ್ಯಾಯಾಲಯಕ್ಕೆ ಹೋದರೆ ವರ್ಷಾನುಗಟ್ಟಲೆ ಕಾಲಹರಣವಾಗಲಿದೆ. ತಮಿಳುನಾಡಿಗೆ ರಾಜ್ಯದ ನಿಯೋಗ ಕರೆದುಕೊಂಡು ಹೋಗಲು ಮುಖ್ಯಮಂತ್ರಿಯವರ ಜೊತೆಗೆ ಚರ್ಚೆ ನಡೆಸಲಾಗುವುದು ಎಂದರು.
ಕೃಷ್ಣಾನದಿಯ ವಿವಾದ ಕುರಿತಂತೆ ಅಂತಿಮ ತೀರ್ಪು ಪ್ರಕಟವಾಗಿ 14 ವರ್ಷ ಕಳೆದಿದೆ. ಇನ್ನೂ ಅಧಿಸೂಚನೆ ಜಾರಿಯಾಗಿಲ್ಲ. ಮೂರು ರಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರಿವೆ. ನೀರಿನ ಹಂಚಿಕೆ ಅವಧಿ 2050ಕ್ಕೆ ಮುಕ್ತಾಯವಾಗಲಿದೆ. ಇನ್ನೂ 24 ವರ್ಷ ಮಾತ್ರ ಬಾಕಿ ಇದೆ. ಅಷ್ಟರಲ್ಲಿ ಹಂಚಿಕೆಯಾದ ನೀರನ್ನು ಬಳಕೆ ಮಾಡಿಕೊಳ್ಳಬೇಕು ಎಂದರು. ಕೇಂದ್ರ ಜಲಶಕ್ತಿ ಸಚಿವರು ತುಂಗಾ ಭದ್ರಾ ಅಣೆಕಟ್ಟಿನ ಕ್ರಸ್ಟ್ ಗೇಟ್ ಉದ್ಘಾಟನೆಗೆ ಇದೇ 25ಕ್ಕೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಕೃಷ್ಣಾ ನದಿ ವಿವಾದಕ್ಕೆ ಒಳ ಪಡುವ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಅಲ್ಲಿ ಅವಕಾಶ ಸಿಕ್ಕರೆ ಚರ್ಚೆ ಮಾಡುತ್ತೇವೆ. ಇಲ್ಲವಾದರೆ ದೆಹಲಿಯಲ್ಲಿ ಪ್ರತ್ಯೇಕ ಸಭೆ ಕರೆಯಲಾಗುವುದು ಎಂದು ಹೇಳಿದರು.
