ಬೆಂಗಳೂರು,ಜ.28- ನಿತೀಶ್‍ಕುಮಾರ್ ರವರು ಇಂಡಿಯಾ ರಾಜಕೀಯ ಕೂಟಕ್ಕೆ ರಾಜೀನಾಮೆ ನೀಡಿ ಎನ್‍ಡಿಎ ಜೊತೆ ಹೋಗುವುದು 5 ದಿನಗಳ ಹಿಂದೆಯೇ ನಮಗೆ ಮಾಹಿತಿ ಇತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ದಿನಗಳ ಹಿಂದೆ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ತಮ್ಮೊಂದಿಗೆ ಮಾತುಕತೆ ನಡೆಸಿದ್ದರು. ಆ ವೇಳೆ ಎಲ್ಲವೂ ಚರ್ಚೆಯಾಗಿದ್ದವು. ನಮ್ಮ ಸಂಖ್ಯಾಬಲ ಏನು, ಅವರ ಸಂಖ್ಯಾಬಲ ಏನಿದೆ ಎಂಬುದೆಲ್ಲಾ ವಿಶ್ಲೇಷಣೆಗಳಾಗಿದ್ದವು ಎಂದಿದ್ದಾರೆ.
ಮಾಜಿ ಕೇಂದ್ರ ಸಚಿವ ಹರ್ಮೋಹನ್ ಧವನ್ ನಿಧನ
ನಿತೀಶ್‍ಕುಮಾರ್ ರವರು ಇಂಡಿಯಾ ಮೈತ್ರಿಕೂಟವನ್ನು ತೊರೆದು ಎನ್‍ಡಿಎ ಜೊತೆ ಹೋಗುವುದಾದರೆ ಹೋಗಲಿ ಬಿಡಿ. ನಾವು ಮೊದಲಿನಿಂದಲೂ ಒಟ್ಟಾಗಿಯೇ ಹೋರಾಟ ಮಾಡುತ್ತಿದ್ದೇವೆ. ಮುಂದೆಯೂ ಅದನ್ನು ಮುಂದುವರೆಸೋಣ. ನಿತೀಶ್ ಅವರ ಜೊತೆ ಮಾತುಕತೆ ನಡೆಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಒಂದು ವೇಳೆ ಸಾಧ್ಯವಾಗದೇ ಹೋದರೆ ಅವರ ದಾರಿ ಅವರು ನೋಡಿಕೊಳ್ಳಲಿ. ನೀವೇನೂ ತಲೆಕೆಡಿಸಿಕೊಳ್ಳಬೇಡಿ ಎಂದು ಲಾಲೂ ಪ್ರಸಾದ್ ಯಾದವ್ ತಮಗೆ ಹೇಳಿದ್ದರು. ಇದ್ಯಾವುದೂ ಅನಿರೀಕ್ಷಿತ ಬೆಳವಣಿಗೆಗಳಲ್ಲ. ಎಲ್ಲವೂ ಗೊತ್ತಿತ್ತು. ಆದರೆ ಕೊನೆ ಕ್ಷಣದವರೆಗೂ ಬಹಿರಂಗಪಡಿಸಬಾರದು ಎಂದು ನಾವು ಸುಮ್ಮನಿದ್ದೆವು ಎಂದು ಖರ್ಗೆ ಹೇಳಿದರು.
ಲಾಲೂಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರೊಂದಿಗಿನ ಮಾತುಕತೆ ವೇಳೆ ಅವರು ಹೇಳಿದ ಬಹಳಷ್ಟು ವಿಷಯಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ನಿತೀಶ್ ಅವರ ನಡವಳಿಕೆ ಸಂಶಯಾಸ್ಪದವಾಗಿದೆ. ನಾವು ಅದರ ಬಗ್ಗೆ ನಂತರ ಚರ್ಚೆ ಮಾಡುತ್ತೇವೆ ಎಂದರು.
ಒಂದು ವೇಳೆ ನಿತೀಶ್‍ರ ಬಗ್ಗೆ ಆರಂಭದಲ್ಲೇ ನಾವು ಮಾತನಾಡಿದ್ದರೆ ತಪ್ಪು ಸಂದೇಶವಾಗುತ್ತಿತ್ತು. ಅದು ಇಂಡಿಯಾ ಮೈತ್ರಿಕೂಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು. ಹಾಗಾಗಿ ನಾವು ಅವರ ನಿರ್ಧಾರಗಳನ್ನು ನಿರೀಕ್ಷಿಸುತ್ತಿದ್ದೆವು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದೆ ಎಂದಿದ್ದಾರೆ. ಇಂಡಿಯಾ ಮೈತ್ರಿಕೂಟದ ಜೊತೆ ಹಲವರು ಬರುತ್ತಾರೆ, ಕೆಲವರು ಹೋಗುತ್ತಾರೆ. ಆಯಾರಾಮ್, ಗಯಾರಾಮ್ ಇದ್ದದ್ದೇ ಎಂದು ಖರ್ಗೆ ಹೇಳಿದರು.
ಇಂಡಿಯಾ ಮೈತ್ರಿಕೂಟದ ನಡುವೆ ಸೀಟುಗಳ ಹಂಚಿಕೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್‍ನ ನಾಯಕ ಮುಖುಲ್ ವಾಸ್ಮಿ ಅವರ ನೇತೃತ್ವದಲ್ಲಿ ಆರು ಜನರ ಸಮಿತಿಯನ್ನು ರಚಿಸಲಾಗಿದೆ. ಅವರು ಈಗಾಗಲೇ ಬಿಹಾರದ ಆರ್‍ಜೆಡಿ, ಅಮ್ ಆದ್ಮಿ, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ಜೊತೆ ಚರ್ಚೆ ನಡೆಸಿದ್ದಾರೆ. ಕೆಲವು ಕಡೆ ಸೀಟುಗಳ ಹೊಂದಾಣಿಕೆಯಾಗಿದೆ. ಇನ್ನೂ ಚರ್ಚೆಗಳು ನಡೆಯುತ್ತಿವೆ ಎಂದರು.
ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆಸಿದೆ.
ದಯಾಮರಣ ಕೋರಿ ಸುಪ್ರೀಂ ಮೆಟ್ಟಿಲೇರಲು ಸಿದ್ದವಾದ ಕೇರಳ ಕುಟುಂಬ
ರಾಹುಲ್‍ಗಾಂಧಿಯವರು ಮಣಿಪುರದಿಂದ ಮುಂಬೈವರೆಗೂ ಭಾರತ್ ಜೋಡೊ ನ್ಯಾಯಯಾತ್ರೆ ಆರಂಭಗೊಂಡಿದೆ. ನಾನು ತೆಲಂಗಾಣ, ಡೆಹ್ರಾಡೂನ್, ಒರಿಸ್ಸಾ, ದೆಹಲಿ, ಕೇರಳ ಸೇರಿದಂತೆ ವಿವಿಧ ಕಡೆಗಳ ಕಾರ್ಯಕ್ರಮಗಳಿಗೆ ದಿನಾಂಕ ನಿಗದಿಯಾಗಿದೆ. ಕೆಲವು ಕಾರ್ಯಕ್ರಮಗಳಿಗೆ ರಾಹುಲ್‍ಗಾಂಧಿಯವರು ಬರುತ್ತಾರೆ ಎಂದು ಹೇಳಿದರು.
ನಾವು ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ಶುರು ಮಾಡಿದ್ದೇವೆ. ಮತ್ತೊಂದು ಪಕ್ಷವನ್ನು ಹೋಲಿಕೆ ಮಾಡಿಕೊಂಡು ಕೂರುವುದಿಲ್ಲ. ನಾವು ನಮ್ಮ ಜವಾಬ್ದಾರಿ ಏನಿದೆಯೋ ಅದನ್ನು ನಿಭಾಯಿಸುತ್ತೇವೆ. ಲೋಕಸಭೆ ಚುನಾವಣೆ ತಯಾರಿಯಲ್ಲಿ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.