ಬೆಂಗಳೂರು,ಜ.31- ಕಾನೂನನ್ನು ಗಾಳಿಗೆ ತೂರಿ 73 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುತ್ತಿರುವುದು ಅಸಂವಿಧಾನಿಕವಾಗಿದ್ದು, ಕೂಡಲೇ ಇದನ್ನು ರದ್ದು ಮಾಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಹೊಟ್ಟೆಗೆ ಹಿಟ್ಟಿಲ್ಲ. ಜುಟ್ಟಿಗೆ ಮಲ್ಲಿಗೆ ಎಂಬಂತೆ ರೈತರ ಬರ ಪರಿಹಾರಕ್ಕೆ, ಅಭಿವೃದ್ಧಿಗೆ ಹಣವಿಲ್ಲದಿರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ 73 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಜನರ ತೆರಿಗೆ ಹಣ ಪೋಲು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
135 ಶಾಸಕರಲ್ಲಿ 34 ಸಚಿವರು, ನಿಗಮ ಮಂಡಳಿಗಳ ಅಧ್ಯಕ್ಷರು, ಸಲಹೆಗಾರರು, ದೆಹಲಿ ಪ್ರತಿನಿ ಸೇರಿದಂತೆ ಈಗ ಒಟ್ಟು 73 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಲಾಗಿದ್ದು, ಗ್ಯಾರೆಂಟಿ ಜಾರಿ ಸಮಿತಿಯ 10 ಮಂದಿಗೂ ಸಂಪುಟ ದರ್ಜೆ ಸ್ಥಾನ ನೀಡಿದರೆ 80ಕ್ಕೂ ಹೆಚ್ಚು ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
2.8ಮಿಲಿಯನ್ ಅಮೆರಿಕನ್ ಡಾಲರ್ ವಂಚನೆ ಮಾಡಿದ್ದ ಭಾರತೀಯನಿಗೆ 9 ವರ್ಷ ಜೈಲು
ಅತೃಪ್ತ ಶಾಸಕರ ಬಂಡಾಯ ಶಮನ ಮಾಡಲಾಗದ ದುರ್ಬಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಬೇಕಾಬಿಟ್ಟಿ ಎಲ್ಲರಿಗೂ ಗೂಟದ ಕಾರು ನೀಡಿ ಸಮಾಧಾನ ಮಾಡುವ ಕಸರತ್ತು ಮಾಡುತ್ತಿದ್ದಾರೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.