ವಾಷಿಂಗ್ಟನ್, ಜೂ.27- ಹೋರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಯನ್ನು ಕದನವಿರಾಮ ಉಲ್ಲಂಘನೆ ಎಂದು ಆರೋಪಿಸಿರುವ ಅಮೆರಿಕ, ಇರಾನ್‌ನ ಮೇಲೆ ವೈಮಾನಿಕ ದಾಳಿ ನಡೆಸಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿದ ಮಾಹಿತಿ ಪ್ರಕಾರ, ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ಉಡಾವಣಾ ತಾಣಗಳು ಮತ್ತು ಕರಾವಳಿ ರಾಡಾರ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ದಾಳಿಗೆ ಕೆಲವೇ ಗಂಟೆಗಳ ಮುನ್ನ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾವು ಪ್ರತಿಕ್ರಿಯೆ ನೀಡುತ್ತೇವೆಯೇ ಎಂಬುದು ನಿಮಗೆ ಗೊತ್ತಾಗುತ್ತದೆ ಎಂದು ಹೇಳಿದ್ದರು.ನಿನ್ನೆ ಅವರು ನಾಲ್ಕು ಬಾರಿ ಗುಂಡು ಹಾರಿಸಿದ್ದು ನನಗೆ ಇಷ್ಟವಾಗಲಿಲ್ಲ, ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್‌ನೊಂದಿಗೆ ಮಾತುಕತೆ ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳುತ್ತಿರುವಾಗಲೂ ದಾಳಿ ಏಕೆ ಎಂಬ ಪ್ರಶ್ನೆಗೆ, ಇರಾನ್ ಸ್ವಲ್ಪ ವಿಭಿನ್ನ ಎಂದು ಉತ್ತರಿಸಿ, ನಂತರ ಸುದ್ದಿಗೋಷ್ಠಿಯನ್ನು ಕೊನೆಗೊಳಿಸಿದರು.
ಸರಕು ಹಡಗಿನ ಮೇಲೆ ಡ್ರೋನ್ ದಾಳಿ :
ಬ್ರಿಟನ್‌ನ ಸೇನೆ ನೀಡಿದ ಮಾಹಿತಿಯ ಪ್ರಕಾರ, ಒಮಾನ್ ಕರಾವಳಿಯ ಸಮೀಪ ಕಂಟೇನರ್ ಹಡಗೊಂದು ಪ್ರಕ್ಷೇಪಕದ ದಾಳಿಗೆ ಗುರಿಯಾಗಿತ್ತು. ಅದಕ್ಕೂ ಕೆಲವೇ ಗಂಟೆಗಳ ಮೊದಲು ಇರಾನ್, ಕೆಲವು ಮಾರ್ಗಗಳನ್ನು ಬಳಸಬಾರದು ಎಂದು ಹಡಗುಗಳಿಗೆ ಎಚ್ಚರಿಕೆ ನೀಡಿತ್ತು.
ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್‌್ಸಪ್ರಕಾರ, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಉದ್ವಿಗ್ನ ಪರಿಸ್ಥಿತಿ:
ಯುದ್ಧಕ್ಕೆ ಶಾಶ್ವತ ಅಂತ್ಯ ಕಾಣಿಸಲು ಅಮೆರಿಕ ಮತ್ತು ಇರಾನ್ ಮಾತುಕತೆ ನಡೆಸುತ್ತಿರುವ ಸೂಕ್ಷ್ಮ ಹಂತದಲ್ಲೇ ಈ ಬೆಳವಣಿಗೆ ನಡೆದಿದೆ. ಕಳೆದ ವಾರದ ಮಧ್ಯಂತರ ಒಪ್ಪಂದದ ಬಳಿಕವೂ ಹೋರ್ಮುಜ್ ಜಲಸಂಧಿಯ ಮೇಲಿನ ತನ್ನ ನಿಯಂತ್ರಣದ ವಿಚಾರದಲ್ಲಿ ಇರಾನ್ ಕಠಿಣ ನಿಲುವು ಮುಂದುವರಿಸಿದೆ.
ಹಡಗುಗಳ ಸ್ಥಳಾಂತರಕ್ಕೆ ಅಡ್ಡಿ:
ಈ ದಾಳಿ ನಡೆಯುವ ವೇಳೆ, ಅಂತರರಾಷ್ಟ್ರೀಯ ಸಾಗರ ಸಂಸ್ಥೆ ಜಲಸಂಧಿಯಲ್ಲಿ ಸಿಲುಕಿದ್ದ ಹಡಗುಗಳನ್ನು ಒಮಾನ್ ಕರಾವಳಿಯ ಸಮೀಪದ ಪರ್ಯಾಯ ಮಾರ್ಗದ ಮೂಲಕ ಸ್ಥಳಾಂತರಿಸುವ ಕಾರ್ಯಾಚರಣೆ ಆರಂಭಿಸಿತ್ತು.
ಆದರೆ ದಾಳಿಯ ಬಳಿಕ ಈ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಉಳಿದ ಹಡಗುಗಳ ಸುರಕ್ಷತೆಗೆ ಭರವಸೆ ಸಿಗುವವರೆಗೆ ಅದನ್ನು ಪುನರಾರಂಭಿಸುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.ಸಂಸ್ಥೆಯ ಮಹಾ ಕಾರ್ಯದರ್ಶಿ ಅರ್ಸೆನಿಯೊ ಡೊಮಿಂಗ್ವೆಜ್ ಅವರ ಪ್ರಕಾರ, ಇತ್ತೀಚಿನ ದಿನಗಳಲ್ಲಿ 115 ಹಡಗುಗಳು ಜಲಸಂಧಿಯಿಂದ ಹೊರಬಂದಿದ್ದರೆ, ಇನ್ನೂ ಸುಮಾರು 500 ಹಡಗುಗಳು ಅಲ್ಲಿಯೇ ಉಳಿದಿವೆ.
ಸರಕು ಸಾಗಣೆ ತಜ್ಞರ ಪ್ರಕಾರ, ಡ್ರೋನ್ ದಾಳಿಯು ಹೋರ್ಮುಜ್ ಜಲಸಂಧಿಯಲ್ಲಿ ವ್ಯಾಪಾರ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿದ್ದ ಪ್ರಕ್ರಿಯೆಗೆ ದೊಡ್ಡ ಹಿನ್ನಡೆಯಾಗಿದೆ. ಸಮುದ್ರ ದತ್ತಾಂಶ ಸಂಸ್ಥೆ ವಿಡ್‌ವಾರ್ ಪ್ರಕಾರ, ದಾಳಿಯ ಬಳಿಕವೂ 43 ಹಡಗುಗಳು ಜಲಸಂಧಿಯನ್ನು ದಾಟಿದ್ದರೂ, ಸಾಮಾನ್ಯ ಸ್ಥಿತಿಗೆ ಮರಳುವ ಪ್ರಕ್ರಿಯೆಯ ವೇಗ ಕುಂಠಿತವಾಗಿದೆ.ಯುದ್ಧ ಆರಂಭಕ್ಕೂ ಮುನ್ನ ಪ್ರತಿದಿನ 130ಕ್ಕೂ ಹೆಚ್ಚು ಹಡಗುಗಳು ಸಂಚರಿಸುತ್ತಿದ್ದರೆ, ಬುಧವಾರ ಈ ಸಂಖ್ಯೆ 78ಕ್ಕೆ ಏರಿಕೆಯಾಗಿತ್ತು. ಆದರೆ ದಾಳಿಯ ನಂತರ ಕನಿಷ್ಠ ಎರಡು ತೈಲ ಟ್ಯಾಂಕರ್‌ಗಳು ತಮ ಮಾರ್ಗವನ್ನು ಬದಲಾಯಿಸಿವೆ ಎಂದು ಅಧಿಕಾರಿಗಳು ತಿಳಿಸಿದೆ.
ಅಮೆರಿಕ ಮತ್ತು ಇರಾನ್ ನಡುವೆ ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ, ಹಾಗೂ ಇರಾನ್‌ನ ಅಧಿಕ ಸಂವರ್ಧಿತ ಯುರೇನಿಯಂ ಸಂಗ್ರಹದ ಭವಿಷ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ಮುಂದುವರಿದಿದೆ. ಮಧ್ಯಂತರ ಒಪ್ಪಂದದ ಪ್ರಕಾರ, ಈ ವಿಷಯಗಳಲ್ಲಿ ಅಂತಿಮ ಒಪ್ಪಂದಕ್ಕೆ ಬರಲು ಎರಡೂ ರಾಷ್ಟ್ರಗಳಿಗೆ 60 ದಿನಗಳ ಕಾಲಾವಕಾಶವಿದೆ.
