ಬೆಂಗಳೂರು, ಜೂನ್. 27- ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಾಳೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಹಮಿಕೊಳ್ಳಲಾಗಿದೆ.ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಬಿಎ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ವೆಂಕಟಾ ಚಲಪತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಪಲ್ಸ್ ಪೋಲಿಯೋ ಕಾರ್ಯ ಕ್ರಮದ ಸಿದ್ಧತೆ ಕುರಿತು ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಜುನ್ 28ರಿಂದ ಜುಲೈ 1ರವರೆಗೆ ನಡೆಯಲಿರುವ ಅಭಿಯಾನದಲ್ಲಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಎರಡು ಹನಿ ಪೋಲಿಯೋ ಲಸಿಕೆ ತಲುಪಿಸುವಂತೆ ಸೂಚಿಸಿದರು.
ಜಿಬಿಎ ವ್ಯಾಪ್ತಿಯ ಎಲ್ಲ ವಾರ್ಡ್ಗಳಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಮ್ಮ ಕ್ಲಿನಿಕ್ಗಳು, ಹೆರಿಗೆ ಆಸ್ಪತ್ರೆಗಳು, ಕುಟುಂಬ ಕಲ್ಯಾಣ ಕೇಂದ್ರಗಳು, ಅಂಗನವಾಡಿಗಳು ಹಾಗೂ ಶಾಲೆಗಳಲ್ಲಿ ಪೋಲಿಯೋ ಬೂತ್ಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಬಸ್ ನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ ನಿಲ್ದಾಣ, ಮಾಲ್ಗಳು, ಖಾಸಗಿ ಆಸ್ಪತ್ರೆಗಳು ಮತ್ತು ಕೊಳಚೆ ಪ್ರದೇಶಗಳಂತಹ ಜನನಿಬಿಡ ಸ್ಥಳಗಳಲ್ಲಿ ಸ್ಥಿರ ಹಾಗೂ ಸಂಚಾರಿ ತಂಡಗಳನ್ನು ನಿಯೋಜಿಸಲಾಗಿದೆ.
ಪೋಷಕರು ತಮ್ಮ ಸಮೀಪದ ಪೋಲಿಯೋ ಬೂತ್ಗಳ ಮಾಹಿತಿಯನ್ನು ಪಡೆಯಲು ಜಿಬಿಎ ಪೋಲಿಯೋ ಬೂತ್ ಮ್ಯಾಪಿಂಗ್ ಪೋರ್ಟಲ್ ಅನ್ನು ಬಳಸಬಹುದಾಗಿದೆ.
ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಹನಿ ನೀಡಿದ್ದರೂ ಅಭಿಯಾನದ ದಿನ ಮತ್ತೊಮ್ಮೆ ಲಸಿಕೆ ಹಾಕಿಸುವಂತೆ ಜಿಬಿಎ ಮನವಿ ಮಾಡಿದೆ.
ಜಿಬಿಎ ಅಂಕಿಅಂಶಗಳ ಪ್ರಕಾರ, ವ್ಯಾಪ್ತಿಯಲ್ಲಿ 1.23 ಕೋಟಿ ಜನಸಂಖ್ಯೆ ಇದ್ದು, 0-5 ವರ್ಷದ 11.47 ಲಕ್ಷ ಮಕ್ಕಳು ಲಸಿಕಾ ಅಭಿಯಾನದ ಗುರಿಯಾಗಿದ್ದಾರೆ. 3,444 ಪೋಲಿಯೋ ಬೂತ್ಗಳು, 660 ಸ್ಥಿರ ತಂಡಗಳು ಹಾಗೂ 435 ಸಂಚಾರಿ ತಂಡಗಳ ಮೂಲಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಒಟ್ಟು 15,964 ಲಸಿಕಾ ಕಾರ್ಯಕರ್ತರು ಮತ್ತು 817 ಮೇಲ್ವಿಚಾರಕರು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.ಪೋಲಿಯೋ ಮುಕ್ತ ಬೆಂಗಳೂರು ಮತ್ತು ಪೋಲಿಯೋ ಮುಕ್ತ ವಿಶ್ವ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸುವಂತೆ ಜಿಬಿಎ ಮನವಿ ಮಾಡಿದೆ.
