ಮೈಸೂರು, ಜೂ.28- ಚಾಮುಂಡೇಶ್ವರಿ ಕ್ಷೇತ್ರದಲ್ಞ ಅಭಿವೃದ್ಧಿ ವಿಚಾರ ಬಿಟ್ಟರೆ, ಬೇರೆ ರಾಜಕಾರಣ ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದೇ ನನ್ನ ಗುರಿ. ಸಂಪೂರ್ಣವಾಗಿ ಜನರು ಅಭಿವೃದ್ಧಿಗಾಗಿಯೇ ನನ್ನನ್ನು ಆಯ್ಕೆ ಮಾಡಿದ್ದಾರೆ. ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ನೀವು ನಿಲ್ಲಬೇಕು ಎಂದು ಜನರು ಹೇಳಿದ್ದಾರೆ. ನಿಮ ಜೊತೆ ಇರುತ್ತೇವೆ ಎಂದಿದ್ದಾರೆ. ನನ್ನ ಕ್ಷೇತ್ರದ ಜನರು ಗಟ್ಟಿ ಇದ್ದಾರೆ, ನನ್ನ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸ ವನ್ನು ವ್ಯಕ್ತಪಡಿಸಿದರು.
ಕುಮಾರ ಪರ್ವ ಮಾಡಿದ್ದು ಚಾಮುಂಡೇಶ್ವರಿ ಜನ ಮಾತ್ರ. ಬೇರೆ ಯಾವ ಕ್ಷೇತ್ರದಲ್ಲೂ ಈ ರೀತಿಯ ಸಮಾವೇಶ ಮಾಡಿಲ್ಲ.ನನ್ನ ಬೆಂಬಲದಿಂದಲೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ನನಗೂ ಮಂತ್ರಿ ಮಾಡಿ ಕೆಲಸ ಮಾಡುವುದಕ್ಕೆ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದರು.
ಪಕ್ಷ ಉಳಿಸುವ ಕೆಲಸವನ್ನ ಕುಮಾರಸ್ವಾಮಿ ಮಾಡುತ್ತಾರೆ. ಕುಮಾರಸ್ವಾಮಿ ಅವರಿಗೆ ರಾಜ್ಯದಲ್ಲಿ ಪಕ್ಷ ಕಟ್ಟುವುದಕ್ಕೆ ಶಕ್ತಿ ಇದೆ ಎಂದ ಅವರು. ನನಗೆ ಫೋನ್ ನೋಡಲು ಬರುವುದಿಲ್ಲ, ಇನ್ಸ್ಟಾಗ್ರಾಂ ನೋಡಲು ಬರುವುದಿಲ್ಲ. ಪಿಎಗಳು ಫೋನ್ ಮಾಡಿಕೊಡುತ್ತಾರೆ. ಎಸ್ಎಂಎಸ್ ನೋಡಲು ನನಗೆ ಬರುವುದಿಲ್ಲ, ಟಿವಿಯಲ್ಲಿ ಸುದ್ದಿಯನ್ನೂ ನಾನು ನೋಡಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ ಎಂದು ತಿಳಿಸಿದರು.
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು, ಅವರಿಗೆ ಎಲ್ಲಾ ರೀತಿಯ ಅನುಭವ ಇದೆ. ಒಂದುವರೆ ವರ್ಷದಿಂದ ನಾನು ಮಾತನಾಡಿಲ್ಲ ಎಂದು ಹೇಳಿದ್ದಾರೆ. ಜನರು ಏನು ಹೇಳುತ್ತಾರೆ ಅದನ್ನು ಮಾಡುತ್ತಾರೆ. ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಬಳಿಕ ಕಾಂಗ್ರೆಸ್ಗೆ ಹೋಗುತ್ತಾರೆ ಎಂದು ಹೇಳಿದ್ದರು. ನಾನು ಕಾಂಗ್ರೆಸ್ಗೆ ಹೋಗಿದ್ದೇನೆಯೇ? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ನಾನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಎಲ್ಲಾ ಶಾಸಕರಿಗೆ ಕೊಟ್ಟಿರುವ ಹಾಗೇ ನನ್ನ ಕ್ಷೇತ್ರಕ್ಕೂ 25 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ ಎಂದು ಹೇಳಿದರು.ತಮ ಪುತ್ರ ಹಾಗೂ ಶಾಸಕ ಹರೀಶ್ಗೌಡ ನಡುವಿನ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ಕುಟುಂಬದಲ್ಲಿ ಎಲ್ಲಿ ಜಗಳ ಇಲ್ಲ ಹೇಳಿ? ಸಣ್ಣ ಪುಟ್ಟ ಜಗಳಗಳು ಇರುತ್ತವೆ. ಮತ್ತೆ ಅವರು ಒಂದಾಗಲ್ಲವೇ? ಒಂದಾಗಲ್ಲ ಎಂದು ತಿಳಿದುಕೊಂಡವರು ಮೂರ್ಖರು ಎಂದರು.
