ಬೆಂಗಳೂರು,ಜೂ.28- ಕುಡಿಬೇಡಪ್ಪ ಎಂದು ಬುದ್ಧಿವಾದ ಹೇಳಿದ ತಾಯಿ ಮಾತಿನಿಂದ ಬೇಸತ್ತ ಕುಡುಕನೊಬ್ಬ ಕಸದ ಲಾರಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಿವಾಸಿ ಸಿದ್ದರಾಜು (29) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.
ಈತ ತಮ್ಮ ತಾಯಿ ಜೊತೆ ಹುಳಿಮಾವಿನಲ್ಲಿ ವಾಸವಾಗಿದ್ದು, ಕುಡಿತದ ದಾಸನಾಗಿದ್ದ. ಆತನ ಚಟ ಬಿಡಿಸಲು ತಾಯಿ ಹಲವಾರು ಪ್ರಯತ್ನ ಮಾಡಿದ್ದರೂ ಸಹ ಸಿದ್ಧರಾಜು ಕುಡಿತದ ಚಟ ಬಿಟ್ಟಿರಲಿಲ್ಲ. ನಿನ್ನೆ ರಾತ್ರಿ ಸಿದ್ಧರಾಜು ಕುಡಿಯಲು ತಾಯಿ ಬಳಿ ಹಣ ಕೇಳಿದ. ಆದರೆ, ತಾಯಿ ಹಣ ನೀಡಿರಲಿಲ್ಲ. ಇದರಿಂದ ಮನನೊಂದ ಆತ ಇಂದು ಮುಂಜಾನೆ ಮನೆಯಿಂದ ಹೊರಹೋಗಿದ್ದ.
ಮನೆಯಿಂದ ಹೊರಗೆ ಹೋದ ನಂತರ ಆತ ಸ್ನೇಹಿತರ ಬಳಿ ಕುಡಿತದ ಹಣಕ್ಕಾಗಿ ಅಂಗಲಾಚಿದ್ದರೂ ಯಾರೂ ಹಣ ಕೊಟ್ಟಿರಲಿಲ್ಲ. ಹೀಗಾಗಿ ಅಲ್ಲಿ ಇಲ್ಲಿ ಸುತ್ತಾಡಿದ ಸಿದ್ಧರಾಜು ಇಂದು ಮುಂಜಾನೆ ಸಿ.ಕೆ.ಪಾಳ್ಯ ರಸ್ತೆಗೆ ಬಂದು ಚಲಿಸುತ್ತಿದ್ದ ಕಸದ ಲಾರಿಯ ಹಿಂಭಾಗದ ಚಕ್ರಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೊದಲು ಅಪಘಾತವೆಂದು ಸುದ್ದಿ ತಿಳಿದು ಹುಳಿಮಾವು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಇದು ಆತ್ಮಹತ್ಯೆ ಎಂಬುದು ಗೊತ್ತಾಗಿದೆ. ತಕ್ಷಣ ಹುಳಿಮಾವು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಠಾಣೆಯ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
