ಇಸ್ಲಾಮಾಬಾದ್, ಜೂ.29 – ಪಾಕಿಸ್ತಾನದ ಅಫ್ಘಾನಿಸ್ತಾನ ಗಡಿಯಲ್ಲಿ ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆಯಲ್ಲಿ ಕನಿಷ್ಠ 29 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ. ಮಾಹಿತಿ ಸಚಿವ ಅತ್ತ ತರರ್‌ಅವರ ಪ್ರಕಾರ, ಇತ್ತೀಚೆಗೆ ಕರಾಚಿಯಲ್ಲಿರುವ ಪಾಕಿಸ್ತಾನ ರೇಂಜರ್ಸ್ ಕೇಂದ್ರ ಸೇರಿದಂತೆ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ ಪ್ರದೇಶಗಳಲ್ಲಿ ನಡೆದ ಉಗ್ರರ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದಿದ್ದಾರೆ.
ಪಾಕಿಸ್ತಾನ ಭದ್ರತಾ ಪಡೆಗಳು ಖೈಬರ್ ಪಖ್ತುನ್ಖ್ವಾದ ಬಜೌರ್ ಜಿಲ್ಲೆಯ ಪಾಕಿಸ್ತಾನ-ಅಫ್ಘಾನ್ ಗಡಿಭಾಗದಲ್ಲಿ ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆ ನಡೆಸಿ, ಬಳಿಕಆಪರೇಷನ್ ಘಜಬ್ ಲಿಲ್ ಹಕ್ ಅಡಿಯಲ್ಲಿ ಗಡಿಭಾಗದಲ್ಲಿದ್ದ ಉಗ್ರರ ಅಡಗುತಾಣಗಳ ಮೇಲೆ ನಿಖರ ದಾಳಿಗಳನ್ನು ನಡೆಸಲಾಗಿದೆ ಎಂದು ಹೇಳಿದ್ದಾರೆ.
ಈ ದಾಳಿಗಳಲ್ಲಿ ಜಮಾತ್-ಉಲ್-ಅಹ್ರಾರ್ ಹಾಗೂ ಫಿತ್ನಾ ಅಲ್ ಖವಾರಿಜ್ ಸಂಘಟನೆಗಳಿಗೆ ಸೇರಿದ ಉಗ್ರರ ನೆಲೆಗಳನ್ನು ಗುರಿಯಾಗಿಸಿ, ಒಟ್ಟು 29 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಹೇಳಿದರು.ಅಲ್ಲಿ ಸಂಗ್ರಹಿಸಲಾಗಿದ್ದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಸಾಮಗ್ರಿಯನ್ನೂ ನಾಶಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರಾಚಿಯಲ್ಲಿ ಬಂಧಿತ ಉಗ್ರನು ತಾನು ಅಫ್ಘಾನಿಸ್ತಾನದವನು ಎಂದು ವಿಚಾರಣೆ ವೇಳೆ ಹೇಳಿದ್ದು, ದಾಳಿಯ ಸಂಚು ಅಫ್ಘಾನಿಸ್ತಾನದಲ್ಲಿ ರೂಪುಗೊಂಡಿತ್ತು ಹಾಗೂ ಬಜೌರ್‌ನ ಸ್ಥಳೀಯ ಉಗ್ರನ ಸಹಾಯದಿಂದ ಅದನ್ನು ಕಾರ್ಯಗತಗೊಳಿಸಲಾಗಿದೆ ಎಂದು ಪಾಕಿಸ್ತಾನ ಮೂಲಗಳು ಹೇಳಿವೆ.
ಪಾಕಿಸ್ತಾನವು ಬಹುಕಾಲದಿಂದ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಗಡಿಯಾಚೆ ಉಗ್ರರಿಗೆ ಆಶ್ರಯ ಮತ್ತು ಬೆಂಬಲ ನೀಡುತ್ತಿದೆ ಎಂದು ಆರೋಪಿಸುತ್ತಿದೆ. ಆದರೆ ಅಫ್ಘಾನಿಸ್ತಾನವು ಈ ಆರೋಪಗಳನ್ನು ನಿರಂತರವಾಗಿ ತಳ್ಳಿಹಾಕುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಪೊಲೀಸ್ ಹಾಗೂ ಭದ್ರತಾ ಪಡೆಗಳ ಮೇಲೆ ಉಗ್ರರ ದಾಳಿಗಳು ಹೆಚ್ಚಾಗಿದ್ದು, ಇದರ ಹಿಂದೆ (ಟಿಟಿಪಿ) ಸಂಘಟನೆಯ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
