ಬೆಂಗಳೂರು,ಜೂ.29 -ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ರಾಜ್ಯದ 31 ಜಿಲ್ಲೆಗಳ ಪೈಕಿ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಶೇ.50ಕ್ಕಿಂತ ಕಡಿಮೆ ಮಳೆಯಾಗಿದೆ.ಐಎಂಡಿ ದತ್ತಾಂಶದ ಪ್ರಕಾರ, 162.5 ಮಿಮೀ ಸಾಮಾನ್ಯ ಮುನ್ಸೂಚನೆಗೆ ವಿರುದ್ಧವಾಗಿ, ರಾಜ್ಯವು ಕೇವಲ 95.2 ಮಿಮೀ ಮಳೆಯನ್ನು ದಾಖಲಿಸಿದೆ.
ಆತಂಕಕಾರಿ ಸಂಗತಿಯೆಂದರೆ, ಸಾಮಾನ್ಯವಾಗಿ ಅಧಿಕ ಮಳೆ ಪಡೆಯುವ ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಶೇ.40ಕ್ಕಿಂತ ಕಡಿಮೆ ಪ್ರಮಾಣದ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಭಾರೀ ಹೊಡೆತ ಬೀಳುವ ಆತಂಕ ಎದುರಾಗಿದೆ.
ಕೃಷಿ ಇಲಾಖೆ ಸಂಗ್ರಹಿಸಿರುವ ಜಿಲ್ಲಾವಾರು ಅಂಕಿ-ಅಂಶಗಳ ಪ್ರಕಾರ, ಜೂನ್ 26ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿಗೆ ಅಗತ್ಯವಿರುವಷ್ಟು ಮಳೆಯಾಗಿಲ್ಲ ಎಂದು ತಿಳಿದುಬಂದಿದ್ದು, ಇದು ರೈತರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ಅತಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಗಳ ಪೈಕಿ ಶಿವಮೊಗ್ಗದಲ್ಲಿ ಸಾಮಾನ್ಯ ಮಳೆಯ ಶೇ.36 ಮಾತ್ರ ದಾಖಲಾಗಿದ್ದು, ಶೇ.64ರಷ್ಟು ಕೊರತೆ ಕಂಡುಬಂದಿದೆ. ಕೊಡಗಿನಲ್ಲಿ ಶೇ.39ರಷ್ಟು ಮಾತ್ರ ಮಳೆಯಾಗಿದ್ದು, ಶೇ.61ರಷ್ಟು ಕೊರತೆ ದಾಖಲಾಗಿದೆ. ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಸುಮಾರು ಶೇ.60ರಷ್ಟು ಮಳೆ ಕೊರತೆ ಉಂಟಾಗಿದೆ.
ಜೂನ್ 26ರವರೆಗೆ ದಕ್ಷಿಣ ಕನ್ನಡದಲ್ಲಿ ಸಾಮಾನ್ಯವಾಗಿ 766 ಮಿ.ಮೀ. ಮಳೆಯಾಗಬೇಕಿದ್ದರೆ, ಕೇವಲ 306 ಮಿ.ಮೀ. ಮಳೆಯಾಗಿದೆ. ಚಿಕ್ಕಮಗಳೂರಿನಲ್ಲಿ 264 ಮಿ.ಮೀ. ಬದಲಿಗೆ 105 ಮಿ.ಮೀ., ಕೊಡಗಿನಲ್ಲಿ 429 ಮಿ.ಮೀ. ಬದಲಿಗೆ 168 ಮಿ.ಮೀ., ಶಿವಮೊಗ್ಗದಲ್ಲಿ 383 ಮಿ.ಮೀ. ಬದಲಿಗೆ 138 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ.
ವಿಜಯನಗರ ಜಿಲ್ಲೆಯಲ್ಲಿ 71 ಮಿ.ಮೀ. ಸಾಮಾನ್ಯ ಮಳೆಯ ಬದಲಿಗೆ ಕೇವಲ 29 ಮಿ.ಮೀ. ಮಳೆಯಾಗಿ ಶೇ.59ರಷ್ಟು ಕೊರತೆ ಉಂಟಾಗಿದೆ.ಇನ್ನು ಉಡುಪಿಯಲ್ಲಿ ಜೂನ್ 26ರ ವೇಳೆಗೆ ಸಾಮಾನ್ಯವಾಗಿ 923 ಮಿ.ಮೀ. ಮಳೆಯಾಗಬೇಕಿದ್ದರೆ, ಈ ಬಾರಿ 424 ಮಿ.ಮೀ. ಮಾತ್ರ ದಾಖಲಾಗಿದ್ದು, ಶೇ.54ರಷ್ಟು ಕೊರತೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲೂ ಶೇ.54ರಷ್ಟು ಮಳೆ ಕೊರತೆ ದಾಖಲಾಗಿದೆ.
ಹಾವೇರಿ, ಉತ್ತರ ಕನ್ನಡ ಹಾಗೂ ಮೈಸೂರು ಜಿಲ್ಲೆಗಳಲ್ಲೂ ಸುಮಾರು ಶೇ.53ರಷ್ಟು ಮಳೆ ಕೊರತೆ ಕಂಡುಬಂದಿದೆ. ಮೈಸೂರಿನಲ್ಲಿ 82 ಮಿ.ಮೀ. ಬದಲಿಗೆ 38 ಮಿ.ಮೀ., ಹಾವೇರಿಯಲ್ಲಿ 99 ಮಿ.ಮೀ. ಬದಲಿಗೆ 47 ಮಿ.ಮೀ. ಹಾಗೂ ಉತ್ತರ ಕನ್ನಡದಲ್ಲಿ 564 ಮಿ.ಮೀ. ಬದಲಿಗೆ ಕೇವಲ 264 ಮಿ.ಮೀ. ಮಳೆಯಾಗಿದೆ.
ಇದಕ್ಕೆ ವಿರುದ್ಧವಾಗಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಮಂಡ್ಯ, ಬಳ್ಳಾರಿ, ಕೋಲಾರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು, ಚಾಮರಾಜನಗರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗಿದೆ.
ಇನ್ನು ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕ್ರಮವಾಗಿ ಶೇ.28 ಮತ್ತು ಶೇ.33ರಷ್ಟು ಅಧಿಕ ಮಳೆ ದಾಖಲಾಗಿದೆ. ತುಮಕೂರಿನಲ್ಲಿ ಸಾಮಾನ್ಯ 60 ಮಿ.ಮೀ. ಬದಲಿಗೆ 80 ಮಿ.ಮೀ. ಹಾಗೂ ಚಿಕ್ಕಬಳ್ಳಾಪುರದಲ್ಲಿ 55 ಮಿ.ಮೀ. ಬದಲಿಗೆ 71 ಮಿ.ಮೀ. ಮಳೆಯಾಗಿದೆ.ಇದಲ್ಲದೆ, ಸಾಮಾನ್ಯ ಮುನ್ಸೂಚನೆಯಾದ 89 ಮಿ.ಮೀ.ಗೆ ವಿರುದ್ಧವಾಗಿ, ಬೆಂಗಳೂರಿನಲ್ಲಿ ಜೂನ್ 25 ರವರೆಗೆ ಕೇವಲ 66 ಮಿ.ಮೀ. ಮಳೆ ದಾಖಲಾಗಿದೆ.
ಮಳೆ ಕೊರತೆ ಇದೇ ರೀತಿ ಮುಂದುವರಿದರೆ ಬೆಳೆಗಳಿಗೆ ತೀವ್ರ ಹಾನಿಯಾಗುವ ಸಾಧ್ಯತೆ ಇದೆ. ನೈಋತ್ಯ ಮಾನ್ಸೂನ್ ಆರಂಭವಾದ ನಂತರದ ಮೊದಲ ತಿಂಗಳಲ್ಲಿ ಕರ್ನಾಟಕವು ಶೇ. 41 ರಷ್ಟು ಮಳೆ ಕೊರತೆಯನ್ನು ದಾಖಲಿಸಿರುವುದರಿಂದ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತ್ತು ಹವಾಮಾನ ತಜ್ಞರು ಇದನ್ನು ವಿಫಲ ಮಾನ್ಸೂನ್ ಅವಧಿ ಎಂದು ಕರೆದಿದ್ದಾರೆ.
ಕೇವಲ ಎಲ್ ನಿನೊ ಮಾತ್ರ ಕಾರಣವೆಂದು ತಜ್ಞರು ಉಲ್ಲೇಖಿಸುವುದಿಲ್ಲ. ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಕಡಿಮೆ ಹವಾಮಾನ ವ್ಯವಸ್ಥೆಗಳು ರೂಪುಗೊಂಡಿವೆ ಎಂದು ಅವರು ಹೇಳುತ್ತಾರೆ. ಇದು ರಾಜ್ಯ ಮತ್ತು ಒಟ್ಟಾರೆ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.
ಕಳಪೆ ಮಾನ್ಸೂನ್ ಮತ್ತು ಗಾಳಿಯ ಮಾದರಿಗಳಿಂದಾಗಿ, ರಾಜ್ಯದಾದ್ಯಂತ ಅನೇಕ ಸ್ಥಳಗಳಲ್ಲಿ ತಾಪಮಾನವು ಏರಲು ಪ್ರಾರಂಭಿಸಿದೆ. ಕಲಬುರಗಿ ಇತ್ತೀಚೆಗೆ 38 ಡಿ.ಸೆ ಗರಿಷ್ಠ ತಾಪಮಾನ ದಾಖಲಾಗಿತ್ತು. ಒಟ್ಟಾರೆಯಾಗಿ ಕರ್ನಾಟಕವು ಶೇ.42ರಷ್ಟು ಮಳೆ ಕೊರತೆಯನ್ನು ದಾಖಲಿಸಿದ್ದರೆ, ಕರಾವಳಿ ಕರ್ನಾಟಕದಲ್ಲಿ ಮಾತ್ರ ಇದು ಶೇ.50ರಷ್ಟು ಮತ್ತು ಬೆಂಗಳೂರಿನಲ್ಲಿ ಇದು ಶೇ.25 ಆಗಿದೆ.
ಜಲಾಶಯಗಳಲ್ಲಿ ಸದ್ಯದ ಸ್ಥಿತಿಗತಿ :
ಸಾಮಾನ್ಯವಾಗಿ ಮುಂಗಾರು ಹಂಗಾಮಿನ ಈ ಅವಧಿಯಲ್ಲಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಬೇಕಿತ್ತು. ಆದರೆ, ಪ್ರಸಕ್ತ ವರ್ಷ ಮಳೆಯ ಅನಿಶ್ಚಿತತೆಯಿಂದಾಗಿ ಜಲಾಶಯಗಳು ನೀರಿಲ್ಲದೆ ಖಾಲಿಯಾಗಿವೆ. ಪ್ರಸ್ತುತ ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ಒಟ್ಟು ನೀರಿನ ಪ್ರಮಾಣ ಕೇವಲ 200 ಟಿಎಂಸಿ ಅಡಿಯಷ್ಟು ಮಾತ್ರ ಇದೆ ಎಂದು ಜಲಸಂಪನೂಲ ಇಲಾಖೆಯ ಮೂಲಗಳು ತಿಳಿಸಿವೆ.
ಆತಂಕದಲ್ಲಿ ರೈತರು :
ಕೃಷಿಗೆ ಸಂಕಷ್ಟ: ಮುಂಗಾರು ಬೆಳೆಗಳಿಗೆ ಜೀವನಾಡಿಯಾಗಿರುವ ಜಲಾಶಯಗಳಲ್ಲಿ ನೀರು ಇಲ್ಲದಿರುವುದರಿಂದ, ರೈತರು ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದು, ಅನ್ನದಾತರಲ್ಲಿ ಆತಂಕ ಮನೆ ಮಾಡಿದೆ.
ಕುಡಿಯುವ ನೀರಿಗೆ ಭವಿಷ್ಯದಲ್ಲಿ ತೊಂದರೆ: ಮುಂಗಾರಿನಲ್ಲೇ ಈ ಮಟ್ಟಿಗೆ ನೀರಿನ ಕೊರತೆ ಉಂಟಾಗಿರುವುದರಿಂದ, ಮುಂದಿನ ಬೇಸಿಗೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವ ಮುನ್ಸೂಚನೆ ಸಿಕ್ಕಿದೆ.
ಮುಂದುವರಿದ ಮಳೆ ಕೊರತೆ
ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಈ ಅವಧಿಯಲ್ಲಿ ದಾಖಲಾಗಬೇಕಿದ್ದ ವಾಡಿಕೆ ಮಳೆಗಿಂತ ಶೇ. 42 ರಷ್ಟು ಕೊರತೆಯಾಗಿದೆ. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿದಿದೆ. ಮಳೆ ಕೊರತೆಯಿಂದಾಗಿ ರಾಜ್ಯದ ಜಲಾನಯನ ಪ್ರದೇಶಗಳಲ್ಲಿ ನದಿಗಳು ಜೀವ ಕಳೆದುಕೊಂಡಿದ್ದು, ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಒಳಹರಿವು ಕೂಡ ಕಡಿಮೆಯಾಗಿದೆ.
ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜ್ಯದ ಕೃಷಿ ಮತ್ತು ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳುವ ಸಾಧ್ಯತೆಯಿದ್ದು, ಸರ್ಕಾರವು ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.ಈ ಗಂಭೀರ ಪರಿಸ್ಥಿತಿಯನ್ನು ಗಮನಿಸಿದಾಗ, ಮುಂಬರುವ ದಿನಗಳಲ್ಲಿ ನೀರಿನ ನಿರ್ವಹಣೆ ಕುರಿತು ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
