Homeರಾಜ್ಯಬೇಟೆಗಾರರಿಂದ ರಕ್ಷಣೆಗೆ ಗುಂಡಿನ ದಾಳಿ : ಹನೂರು ಶೂಟೌಟ್ ಕುರಿತು ರಾಮಲಿಂಗಾರೆಡ್ಡಿ ಸ್ಪಷ್ಟನೆ

ಬೇಟೆಗಾರರಿಂದ ರಕ್ಷಣೆಗೆ ಗುಂಡಿನ ದಾಳಿ : ಹನೂರು ಶೂಟೌಟ್ ಕುರಿತು ರಾಮಲಿಂಗಾರೆಡ್ಡಿ ಸ್ಪಷ್ಟನೆ

ಬೆಂಗಳೂರು, ಆ.17- ಅರಣ್ಯ ಇಲಾಖೆ ಸಿಬ್ಬಂದಿ ತಮ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬೇಟೆಗಾರರು ಗುಂಡಿನ ದಾಳಿ ನಡೆಸಿದ್ದರಿಂದ ಪರಿಸ್ಥಿತಿ ಕೈಮೀರಿತ್ತು. ಈ ವೇಳೆ ಆತರಕ್ಷಣೆ ಹಾಗೂ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಮಾತ್ರ ಅಧಿಕಾರಿಗಳು ಪ್ರತಿದಾಳಿ ನಡೆಸಿದ್ದಾರೆ. ಇಲ್ಲಿ ಯಾರಿಗೂ ಪ್ರಾಣಹಾನಿ ಮಾಡುವ ಉದ್ದೇಶವಾಗಲಿ, ವೈಯಕ್ತಿಕ ದ್ವೇಷವಾಗಲಿ ಇರಲಿಲ್ಲ ಎಂದು ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.

ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯದ ಮೇರೆಗೆ ಹನೂರು ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಕುರಿತು ಸಮಗ್ರ ಹೇಳಿಕೆ ನೀಡಿದ ಸಚಿವರು, ಘಟನೆಯಲ್ಲಿ ಮೂವರು ಬೇಟೆಗಾರರು ಮೃತಪಟ್ಟಿದ್ದು, ಮತ್ತೊಬ್ಬರು ಸ್ಥಳದಿಂದ ಪರಾರಿಯಾಗಿದ್ದರು ಎಂದರು.

ಪರಾರಿಯಾದ ವ್ಯಕ್ತಿಯ ವಿರುದ್ಧ ಈ ಹಿಂದೆ ಅರಣ್ಯ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು, ಮೃತಪಟ್ಟವರ ವಿರುದ್ಧ ಯಾವ ಪ್ರಕರಣಗಳೂ ಕಂಡು ಬಂದಿಲ್ಲ ಎಂದು ವಿವರಿಸಿದರು.
ಆಗಸ್ಟ್‌ 14 ರಂದು ರಾತ್ರಿ 8 ಗಂಟೆಗೆ ಕೆಲವರು ಅಕ್ರಮವಾಗಿ ಅರಣ್ಯ ಪ್ರವೇಶಿಸಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದಾರೆ ಎಂಬ ಮಾಹಿತಿ ಅರಣ್ಯ ಅಧಿಕಾರಿಗಳಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎರಡು ತಂಡಗಳಾಗಿ ಅರಣ್ಯ ಪ್ರದೇಶದ ಸುತ್ತ ಗಸ್ತು ನಡೆಸುತ್ತಿದ್ದರು. ಈ ವೇಳೆ ಅರಣ್ಯದೊಳಗೆ ಟಾರ್ಚ್‌ ಬೆಳಕಿನಲ್ಲಿ ಕೆಲವರು ಓಡಾಡುತ್ತಿರುವುದು ಕಂಡುಬಂದಿತ್ತು.

ಬೆಳಗಿನ ಜಾವ ಸುಮಾರು 5.30ರ ವೇಳೆಗೆ ಕರಡಿಕಲ್ಲು ಒಡ್ಡು ಅರಣ್ಯ ಪ್ರದೇಶದಲ್ಲಿ ಎತ್ತರದ ಪ್ರದೇಶದಲ್ಲಿ ಅವಿತಿದ್ದ ಬೇಟೆಗಾರರು ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ನಾಡ ಬಂದೂಕಿನಿಂದ ಹಾರಿಸಿದ ಗುಂಡುಗಳು ಚದುರಿ ಹೋಗಿದ್ದರಿಂದ ಸಿಬ್ಬಂದಿಗೆ ಗಂಭೀರ ಗಾಯಗಳಾಗಿಲ್ಲ. ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸಚಿವರು ತಿಳಿಸಿದರು.

ಬೇಟೆಗಾರರಿಂದ ಗುಂಡಿನ ದಾಳಿ ನಡೆದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಹಾಗೂ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಒಬ್ಬ ವ್ಯಕ್ತಿ ಓಡಿ ಹೋಗುತ್ತಿರುವುದು ಕಂಡುಬಂದಿದ್ದು, ಮತ್ತೂ ಮೂವರು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರ ಪ್ರಾಣ ರಕ್ಷಣೆಗಾಗಿ ಹನೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಸಚಿವರು ವಿವರಿಸಿದರು.

ಸ್ಥಳ ಪರಿಶೀಲನೆ ವೇಳೆ ಒಂದು ಬ್ಯಾಗ್‌ನಲ್ಲಿ 22.35 ಕೆ.ಜಿ. ಹಾಗೂ ಮತ್ತೊಂದು ಬ್ಯಾಗ್‌ನಲ್ಲಿ 11.90 ಕೆ.ಜಿ. ಸೇರಿ ಒಟ್ಟು 34.25 ಕೆ.ಜಿ. ವನ್ಯಪ್ರಾಣಿ ಮಾಂಸ ಪತ್ತೆಯಾಗಿದೆ. ಮಾಂಸದಲ್ಲಿ ಗುಂಡಿನ ಚಹರೆ ಕಂಡುಬಂದಿದೆ ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ತನಿಖೆಗಾಗಿ ಮಾಂಸ ಹಾಗೂ ನಾಡ ಬಂದೂಕುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಸ್ಥಳದಲ್ಲಿ ನಾಡ ಬಂದೂಕುಗಳು, ಮದ್ದು ಗುಂಡುಗಳು, ಅಡುಗೆ ಸಾಮಾಗ್ರಿಗಳು, ಚಾಕು, ಮಚ್ಚುಗಳು, ಬೇಟೆಗಾರರ ಬಳಸುವ ಹಣೆಯ ಟಾರ್ಚ್‌ ಗಳು, ಸಾಂಬಾರ್‌ ಪದಾರ್ಥಗಳು ಪತ್ತೆಯಾಗಿವೆ ಎಂದು ವಿವರಿಸಿದ್ದರು.

ಅಕ್ರಮವಾಗಿ ಅರಣ್ಯ ಪ್ರವೇಶಿಸಿದವರು ಕಳೆದುಹೋಗಿದ್ದ ದನಗಳನ್ನು ಹುಡುಕುತ್ತಿದ್ದರೂ ಎಂದು ಕುಟುಂಬದ ಸದಸ್ಯರು ಹೇಳುತ್ತಿದ್ದಾರೆ. ಆದರೆ ಆ ರೀತಿ ದನ ಕಳೆದು ಹೋಗಿರುವ ಬಗ್ಗೆ ಅರಣ್ಯ ಇಲಾಖೆಗೆ ಯಾವುದೇ ಮಾಹಿತಿ ಇರಲಿಲ್ಲ. ಒಂದು ವೇಳೆ ದನ ಹುಡುಕಲು ಕಾಡಿಗೆ ಹೋಗಬೇಕಾದರೆ ಇಲಾಖೆಯ ಪೂರ್ವ ಅನುಮತಿ ಅಗತ್ಯ. ಮೇಲಾಗಿ ದನ ಹುಡುಕಲು ಹೋಗುವವರು ಪಾತ್ರೆ, ಸಾಂಬಾರ್‌ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದರೇ ಎಂದು ಸಚಿವರು ಪ್ರಶ್ನಿಸಿದರು.

ಬೇಟೆ ಶಿಬಿರಗಳಿಗೆ ಹಾನಿ:
ಘಟನೆಯ ಬಳಿಕ ಕೆಲವು ದುಷ್ಕರ್ಮಿಗಳು ಏಳು ಬೇಟೆ ಶಿಬಿರಗಳು ಹಾಗೂ ಒಂಬತ್ತು ವಸತಿಗೃಹಗಳಿಗೆ ಹಾನಿ ಮಾಡಿದ್ದಾರೆ. ಇದರಿಂದ ಸಾಕಷ್ಟು ನಷ್ಟ ಉಂಟಾಗಿದ್ದು, ಈ ಸಂಬಂಧ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಮ್ಯಾಜಿಸ್ಟ್ರೇಟ್‌ ತನಿಖೆ:
ಪ್ರಕರಣವನ್ನು ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್‌ ಕುಮಾರ್‌ ಮೀನಾ ಅವರ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್‌ ತನಿಖೆಗೆ ವಹಿಸಲಾಗಿದೆ. ತನಿಖಾಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಸಚಿವರು ಹೇಳಿದರು.ತನಿಖೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಯಾವುದೇ ಲೋಪ ಕಂಡುಬಂದರೆ, ಅವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿ ಭರವಸೆ ನೀಡಿದರು.

RELATED ARTICLES
spot_img

Latest News