ನವದೆಹಲಿ,ಅ.1-ಗೋವಾದ ಮಡಗಾಂವ್-ಮಂಗಳೂರು ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ. ಕಾರವಾರ, ಉಡುಪಿ, ಮಂಗಳೂರು, ಹಾಸನ ಮಾರ್ಗವಾಗಿ ಬೆಂಗಳೂರುವರೆಗೆ ಈ ರೈಲು ಸಂಪರ್ಕ ಕಲ್ಪಿಸಲಿದೆ. ಇದರಿಂದ ಕರಾವಳಿ ಕರ್ನಾಟಕ ಮತ್ತು ಗೋವಾ ನಡುವಿನ ರೈಲು ಸಂಪರ್ಕಕ್ಕೆ ದೊಡ್ಡ ಉತ್ತೇಜನ ಸಿಕ್ಕಿದಂತಾಗಿದೆ.
ಹಾಸನ, ಮಂಗಳೂರು ಜಂಕ್ಷನ್, ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಮಡಗಾಂವ್ ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಸೇವೆಯನ್ನು ಪರಿಚಯಿಸುವಂತೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬರೆದ ಪತ್ರದಲ್ಲಿ, ಪ್ರವಾಸೋದ್ಯಮ, ಧಾರ್ಮಿಕ ಯಾತ್ರೆ, ಶಿಕ್ಷಣ ಮತ್ತು ವೃತ್ತಿಪರ ಕೆಲಸಗಳಿಗಾಗಿ ಪ್ರಯಾಣಿಸುವವರಿಗೆ ಈ ಮಾರ್ಗವು ಮುಖ್ಯವಾಗಲಿದೆ ಎಂದು ಉಲ್ಲೇಖಿಸಿದ್ದರು. ಅಲ್ಲದೆ, ಬೆಂಗಳೂರು ಹಾಗೂ ಕರಾವಳಿ ಕರ್ನಾಟಕ ಮತ್ತು ಗೋವಾದ ಪ್ರಮುಖ ವಾಣಿಜ್ಯ, ಬಂದರು ಮತ್ತು ಪ್ರವಾಸೋದ್ಯಮ ಕೇಂದ್ರಗಳ ನಡುವೆ ಬಲವಾದ ಸಂಪರ್ಕದ ಅಗತ್ಯವನ್ನೂ ಅವರು ಒತ್ತಿಹೇಳಿದ್ದರು.
ಸಚಿವ ಕುಮಾರಸ್ವಾಮಿ ಅವರ ಪ್ರಸ್ತಾವನೆಗೆ ಪ್ರತಿಕ್ರಿಯಿಸಿರುವ ಅಶ್ವಿನಿ ವೈಷ್ಣವ್, ಪ್ರಸ್ತುತ ಮಡಗಾಂವ್-ಮಂಗಳೂರು ವಂದೇ ಭಾರತ್ ಎಕ್್ಸಪ್ರೆಸ್ ರೈಲನ್ನು ಕಾರವಾರ, ಉಡುಪಿ ಮತ್ತು ಹಾಸನ ಮಾರ್ಗವಾಗಿ ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸೇವೆಯು ಈಗ ಪರಿಷ್ಕೃತ ಸಮಯದೊಂದಿಗೆ ರೈಲು ಸಂಖ್ಯೆ 26655/26656 ಯಶವಂತಪುರ-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ಆಗಿ ಕಾರ್ಯನಿರ್ವಹಿಸಲಿದೆ. ಈ ವಿಸ್ತರಣೆಯು ಬೆಂಗಳೂರನ್ನು ಕರಾವಳಿ ಕರ್ನಾಟಕದ ಪ್ರಮುಖ ಸ್ಥಳಗಳೊಂದಿಗೆ ಮತ್ತು ಅಲ್ಲಿಂದ ಗೋವಾದ ಮಡಗಾಂವ್ಗೆ ಸಂಪರ್ಕ ಕಲ್ಪಿಸುತ್ತದೆ.
ನೈಋತ್ಯ ರೈಲ್ವೆಯ ಸಂಬಂಧಪಟ್ಟ ಅಧಿಕಾರಿಗಳು ಈ ಸೇವೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ, ಅಗತ್ಯ ಆಡಳಿತಾತಕ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದ್ದರು. ಸುಧಾರಿತ ರೈಲು ಸಂಪರ್ಕದ ವ್ಯಾಪಕ ಆರ್ಥಿಕ ಮಹತ್ವವನ್ನೂ ಅವರು ಒತ್ತಿ ಹೇಳಿದ್ದರು. ಇಂತಹ ಸೇವೆಯು ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ, ಪ್ರವಾಸೋದ್ಯಮವನ್ನು ಬಲಪಡಿಸುತ್ತದೆ ಮತ್ತು ರಾಜ್ಯಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದರು.
ಸಚಿವ ವೈಷ್ಣವ್ ಅವರು ಸೆಪ್ಟೆಂಬರ್ 28ರಂದು ಕುಮಾರಸ್ವಾಮಿ ಅವರಿಗೆ ಬರೆದ ಪತ್ರದಲ್ಲಿ, ಕುಮಾರಸ್ವಾಮಿ ಅವರು ಕಳೆದ 2025ರ ಡಿಸೆಂಬರ್ 23 ರಂದು ಬರೆದಿದ್ದ ಪತ್ರವನ್ನು ಉಲ್ಲೇಖಿಸಿ, ಮಡಗಾಂವ್-ಮಂಗಳೂರು ವಂದೇ ಭಾರತ್ ಎಕ್್ಸಪ್ರೆಸ್ ರೈಲನ್ನು ಹಾಸನ, ಉಡುಪಿ ಮತ್ತು ಕಾರವಾರದ ಮೂಲಕ ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದರು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
