ಬೆಂಗಳೂರು,ಅ.1- ವಿಧಾನಸೌಧದ ಮುಂದೆಉರ್ದು ಹಬ್ಬ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರು ಈ ಕ್ರಮವನ್ನು ಕೈಬಿಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಆರೋಗ್ಯ ಸಚಿವ ಖಾದರ್ ಅವರು ವಿಧಾನಸೌಧದ ಎದುರು ಉರ್ದು ಹಬ್ಬ ಆಚರಣೆಗೆ ಮುಂದಾಗಿರುವ ಕ್ರಮ ತೀವ್ರ ಖಂಡನೀಯ. ಈ ಹಿಂದೆ ವೀರಪ್ಪಮೊಯ್ಲಿ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಉರ್ದು ವಾರ್ತೆಗಳನ್ನು ಓದಲು ಕ್ರಮವನ್ನು ಜಾರಿಗೊಳಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ರಾಜ್ಯಾದ್ಯಂತ ಉಗ್ರ ಹೋರಾಟ ನಡೆದಮೇಲೆ ಉರ್ದು ವಾರ್ತೆಯನ್ನು ಹಿಂತೆಗೆದು ಕೊಳ್ಳಲಾಯಿತು.
ವಿಧಾನಸೌಧದ ಮುಂಭಾಗದಲ್ಲಿ ಉರ್ದು ಹಬ್ಬ ಮಾಡಲು ಮುಂದಾದರೆ ಇದೇ ರೀತಿ ಹೋರಾಟ ಮಾಡಬೇಕಾಗುತ್ತದೆ. ನಮ ತುಳು ಭಾಷೆ ಬ್ಯಾರಿ ಭಾಷೆಗಳಿವೆ. ಅದಕ್ಕೆ ಸಂಬಂಧಿಸಿದ ಹಬ್ಬಗಳನ್ನು ಆಚರಣೆ ಮಾಡಲಿ. ವಿಧಾನಸೌಧ ಇರುವುದು ಅಭಿವೃದ್ಧಿ ಕೆಲಸ ಮಾಡಲು. ಈ ರೀತಿ ಕೋಮುಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡಲು ಅಲ್ಲ. ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ರಕ್ಷಣಾ ವೇದಿಕೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
