ಕೊಳ್ಳೇಗಾಲ,ಆ.17- ಹನೂರು ಕಾವೇರಿ ವನ್ಯ ಧಾಮದಲ್ಲಿ ಅರಣ್ಯ ಸಿಬ್ಬಂದಿಗಳ ಎನ್ಕೌಂಟರ್‌ಗೆ ಬಲಿಯಾಗಿ ಮೃತಪಟ್ಟವರ ಮೃತ ದೇಹಗಳು ತಡ ರಾತ್ರಿ ಸ್ವಗ್ರಾಮಗಳಿಗೆ ತರಲಾಗಿದ್ದು ಇಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.
ಹನೂರು ತಾಲೂಕಿನ ಮರಿಯ ಮಂಗಳ ಗ್ರಾಮಕ್ಕೆ ಅಂಥೋಣಿ ಸ್ವಾಮಿ, ಜಗನ್ನಾಥ ದುಡ್ಡಿಗೆ ಪೀಟರ್ ಹಾಗೂ ಲಾಜರ್ ದೊಡ್ಡಿಗೆ ಶಬಸ್ಟಿನ್ ಡೇವಿಡ್ ಕುಮಾರ್ ಮೃತದೇಹಗಳನ್ನು ತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ, ಗೋಳಾಟ ಮುಗಿಲು ಮುಟ್ಟಿತ್ತು.
ಇಂದು ಬೆಳಿಗ್ಗೆ 11 ಗಂಟೆ ವೇಳೆಗೆ ಕುಟುಂಬಸ್ಥರು ಸಂಬಂಧಿಕರು ಹಾಗೂ ಗ್ರಾಮಸ್ಥರು ತೋಮಿಯಾರ್ ಪಾಳ್ಯ ಚರ್ಚ್‌ಗೆ ಮೃತ ದೇಹಗಳನ್ನು ತಂದು ತೋಮಿಯಾರ್ ಪಾಳ್ಯ ಚರ್ಚ್ ಫಾದರ್ ಕೆ ಚಾರ್ ಜೋಸೆಫ್ ನೇತೃತ್ವದಲ್ಲಿ ಚರ್ಚಿನಲ್ಲಿ ಮೂವರ ಮೃತದೇಹಗಳನ್ನು ಇಟ್ಟು ಒಂದು ಗಂಟೆಗಳ ಕಾಲ ಸಾಮೂಹಿಕ ಪ್ರಾರ್ಥನೆ, ಪೂಜೆ ಸಲ್ಲಿಸಿದರು.
ಮೈಸೂರಿನ ಬಿಷಪ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಬಳಿಕ 12 ಗಂಟೆ ವೇಳೆಗೆ ಸಮಾಧಿಗಳಿಗೆ ಮೃತದೇಹ ಕೆಫೆನ್‌ನಲ್ಲಿ ಮೂರು ಮೃತ ದೇಹ ಇರಿಸಿ ಪವಿತ್ರ ಜಲ ಹಾಕಿ ಪೂಜೆ ನೆರವೇರಿಸಿ, ಮತದೇಹಗಳನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿಧಿ ವಿಧಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮರಿಯ ಮಂಗಲದಲ್ಲಿ ಪೀಟರ್ ಹಾಗೂ ಅಂಥೋಣಿ ಸ್ವಾಮಿ ಅಂತ್ಯಕ್ರಿಯೆ ಹಾಗೂ ತೋಮಿರ್ ಪಾಳ್ಯದಲ್ಲಿ ಕುಮಾರ್ ಅಂತ್ಯಕ್ರಿಯೆ ನೆರವೇರಿತು.
ಕಳೆದೆರಡು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಬೇಡಿಕೆ ಈಡೇರಿಸುವುದಾಗಿ ಹನೂರು ಶಾಸಕ ಮಂಜುನಾಥ್ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ನಿನ್ನೆ ಸ್ಥಗಿತಗೊಳಿಸಿ ಮೃತರ ಅಂತ್ಯಕ್ರಿಯೆಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದರು.
15 ಲಕ್ಷ ಪರಿಹಾರ:
ಈ ಹಿನ್ನೆಲೆಯಲ್ಲಿ ಮೃತ ಕುಟುಂಬಗಳಿಗೆ ಶಾಸಕ ಮಂಜುನಾಥ್ ರವರು ತಲಾ 5 ಲಕ್ಷ ರೂಗಳ ಚೆಕ್ ಹಾಗೂ 10 ಲಕ್ಷ ರೂ.ಗಳ ನಗದು ಸೇರಿದಂತೆ ಒಟ್ಟು 15 ಲಕ್ಷ ರೂ. ತಾತ್ಕಾಲಿಕ ಪರಿಹಾರವನ್ನು ಇಂದು ಹನೂರು ತಹಶೀಲ್ದಾರ್ ಚೈತ್ರರವರ ಸಮುಖದಲ್ಲಿ ವಿತರಿಸಿದರು.
