ಬೆಂಗಳೂರು,ಜೂ.29-ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ನಾಲ್ಕು ಮಂದಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ 23 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ನೈಜೀರಿಯಾ ಪ್ರಜೆಗಳಾದ ಅಮ್ಬೋಮೊ ಜಾನ್ ವಿಕ್ಟರ್ (37), ಚಿಮಿ ನುಬುಸಿ ಮೋಸೆಸ್(36), ಕರಿಕರಿ ಎಮೋಸ್(33) ಹಾಗೂ ಕೇರಳದ ಮೊಹಮದ್ ಉಮರುಲ್ ಫಾರುಕ್ (25) ಬಂಧಿತರು.
ಈ ಮೂವರು ವಿದೇಶಿ ಪ್ರಜೆಗಳು ಮೆಡಿಕಲ್ ವೀಸಾ ಹಾಗೂ ಟೂರಿಸ್ಟ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ವೀಸಾ ಅವಧಿ ಮುಗಿದಿದ್ದರೂ ಸಹ ನಗರದಲ್ಲಿ ಅನಧಿಕೃತವಾಗಿ ವಾಸವಾಗಿದ್ದುಕೊಂಡು ದೆಹಲಿಯಲ್ಲಿ ವಾಸವಿರುವ ನೈಜೀರಿಯಾ ಪ್ರಜೆಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದುದ್ದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಈ ಮೂವರು ವಿದೇಶಿ ಪ್ರಜೆಗಳಿಂದ 21 ಕೋಟಿ ಮೌಲ್ಯದ 10 ಕೆಜಿ 270 ಗ್ರಾಂ ಎಂಡಿಎಂಎ, 4 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮಾರುಕಟ್ಟೆ ಮೌಲ್ಯ 21 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.ಕೇರಳದಿಂದ ನಾಲ್ಕು ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದು ಹೆಚ್ಬಿಆರ್ ಲೇಔಟ್ನ ಕೃಷ್ಣಾರೆಡ್ಡಿ ಲೇಔಟ್ನಲ್ಲಿ ವಾಸವಾಗಿದ್ದುಕೊಂಡು ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಆರೋಪಿ ಮೊಹಮದ್ನನ್ನು ಸಿಸಿಬಿ ಪೊಲೀಸರು ಬಂಧಿಸಿ 2 ಕೋಟಿ ಮೌಲ್ಯದ 2ಕೆಜಿ 44 ಗ್ರಾಂ ಹೈಡ್ರೋ ಗಾಂಜಾ,ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ನಗರದ ಆರ್ಎಂಸಿ ಯಾರ್ಡ್, ಸುಬ್ರಮಣ್ಯನಗರ, ಮಡಿವಾಳ, ರಾಜಾಜಿನಗರ, ವೈಟ್ಫೀಲ್್ಡ, ತಿಲಕನಗರ, ಯಶವಂತಪುರ ಹಾಗೂ ಇಂದಿರಾನಗರ ಠಾಣೆಗಳ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಹೊರ ರಾಜ್ಯದ ವ್ಯಕ್ತಿಗಳು ಸೇರಿದಂತೆ 13 ಮಂದಿಯನ್ನು ಬಂಧಿಸಿ 2.23 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿಗಳು ಕೋಟ್ಪಾ ಕಾಯ್ದೆಯ ನಿಯಮಗಳನ್ನು ಉಲ್ಲಂಸಿ ತಯಾರು ಮಾಡಿದ್ದ ವಿವಿಧ ಕಂಪೆನಿಯ ತಂಬಾಕು ಉತ್ಪನ್ನಗಳು, ಸೇರಿದಂತೆ 7 ಮೊಬೈಲ್ ಪೋನ್, 6 ದ್ವಿಚಕ್ರ ವಾಹನ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆ ಮಾಹಿತಿಗಳನ್ನಾಧಾರಿಸಿ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ, ಸ್ಥಳಗಳ ಮೇಲೆ ದಾಳಿ ಮಾಡಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ವಿದೇಶಿ ಮೂಲದ, ಹೊರ ರಾಜ್ಯದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಹಾಗೂ ಕೋಟ್ಪಾ ಕಾಯ್ದೆಯ ನಿಯಮಗಳನ್ನು ಉಲ್ಲಂಸಿ ವಿವಿಧ ಕಂಪೆನಿಯ ತಂಬಾಕು ಉತ್ಪನ್ನಗಳನ್ನು ತಯಾರು ಮಾಡುತ್ತಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಆರ್ಎಂಸಿ ಯಾರ್ಡ್ ಠಾಣೆ ಪೊಲೀಸರು 72.30 ಲಕ್ಷ ಮೌಲ್ಯದ 1 ಕೆಜಿ 33 ಗ್ರಾಂ ಹೈಡ್ರೋಗಾಂಜಾ, 2 ದ್ವಿಚಕ್ರ ವಾಹನ ವಶಪಡಿಸಿಕೊಂಡರೇ ಸುಬ್ರಮಣ್ಯನಗರ ಠಾಣೆ ಪೊಲೀಸರು 69.64 ಲಕ್ಷ ಮೌಲ್ಯದ 45 ಕೆಜಿ 855 ಗ್ರಾಂ ಗಾಂಜಾ, 237 ಗ್ರಾಂ ಹೈಡ್ರೋಗಾಂಜಾ, 36 ಗ್ರಾಂ ಎಂಡಿಎಂಎ, ಮೊಬೈಲ್, ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.
ಮಡಿವಾಳ ಠಾಣೆ ಪೊಲೀಸರು 36 ಲಕ್ಷ ಮೌಲ್ಯದ 36 ಕೆಜಿ ಗಾಂಜಾ, ಕಾರು ಮತ್ತು ರಾಜಾಜಿನಗರ ಠಾಣೆ ಪೊಲೀಸರು 15.84 ಲಕ್ಷ ಮೌಲ್ಯದ ವಿವಿಧ ಕಂಪನಿಯ ತಂಬಾಕು ಉತ್ಪನ್ನಗಳನ್ನು, ವೈಟ್ಫೀಲ್್ಡ ಠಾಣೆ ಪೊಲೀಸರು 22 ಲಕ್ಷ ಮೌಲ್ಯದ 22 ಕೆಜಿ ಗಾಂಜಾ, ತಿಲಕನಗರ ಠಾಣೆ ಪೊಲೀಸರು 20.20 ಲಕ್ಷ ಮೌಲ್ಯದ 20 ಕೆಜಿ 200 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.
ಯಶವಂತಪುರ ಠಾಣೆ ಪೊಲೀಸರು 8 ಲಕ್ಷ ಮೌಲ್ಯದ 300 ಇ-ಸಿಗರೇಟ್ಗಳು, 90 ಹುಕ್ಕಾ ಪ್ಲೇವರ್ಗಳು, 30 ಹುಕ್ಕಾ ಪಾಟ್ಗಳು, ಸ್ಟ್ಯಾಂಡ್ಗಳೂ, ಹುಕ್ಕಾ ಪಿಂಗಾಣಿಗಳು ಮತ್ತು ವಿದೇಶಿ ಸಿಗರೇಟ್ ಪ್ಯಾಕ್ಗಳನ್ನು ವಶಪಡಿಸಿಕೊಂಡಿದ್ದಾರೆ.ಇಂದಿರಾನಗರ ಠಾಣೆ ಪೊಲೀಸರು 3.24 ಲಕ್ಷ ಮೌಲ್ಯದ 3 ಕೆಜಿ 247 ಗ್ರಾಂ ಗಾಂಜಾ, ಮೊಬೈಲ್ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.
ನಗರ ಪೊಲೀಸರು ಒಟ್ಟು 17 ಮಂದಿಯನ್ನು ಬಂಧಿಸಿ 25.23 ಕೋಟಿ ಮೌಲ್ಯದ ಗಾಂಜಾ, ತಂಬಾಕು ಉತ್ಪನ್ನಗಳು, ವಿದೇಶಿ ಸಿಗರೇಟು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಕಾರ್ಯಾಚರಣೆಗಳನ್ನು ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಅವರ ಮಾರ್ಗದರ್ಶನದಲ್ಲಿ ಆಯಾ ಠಾಣೆಗಳ ಇನ್್ಸಪೆಕ್ಟರ್ಗಳು ಹಾಗೂ ಸಿಬ್ಬಂದಿ ತಂಡ ಕೈಗೊಂಡು ಆರೋಪಿಗಳನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
