Homeರಾಜ್ಯಮಂಗಳೂರಲ್ಲಿ ಭೂಕುಸಿತಕ್ಕೆ ಮೂವರು ಬಲಿ

ಮಂಗಳೂರಲ್ಲಿ ಭೂಕುಸಿತಕ್ಕೆ ಮೂವರು ಬಲಿ

Landslide kills three in Mangaluru

ಮಂಗಳೂರು,ಜು.1-ಭಾರೀ ಮಳೆಯಿಂದ ಉಂಟಾದ ಭೂಕುಸಿತಕ್ಕೆ ಮನೆ ಕುಸಿದು ಒಂದೇ ಕುಟುಂಬದ ತಾಯಿ-ಇಬ್ಬರು ಪುತ್ರಿಯರ ದುರ್ಮರಣಕ್ಕೀಡಾದ ಘಟನೆ ನಾಗೋರಿ ಬಳಿ ನಡೆದಿದೆ
ಮೃತರನ್ನು ಶಾಂತಾ (46) ಅವರ ಪುತ್ರಿ ಅನಾಮಿಕಾ ಚೌರಾಸಿಯಾ(8) ಹಾಗೂ ನಾಲ್ಕು ವರ್ಷದ ಪುತ್ರಿ ಪರಿ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಮೂವರನ್ನು ರಕ್ಷಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ ಸುರಿದ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿ,ಮುಂಜಾನೆ 3.40 ರಲ್ಲಿ ಮಣ್ಣಿನ ರಾಶಿಯಡಿ ಮನೆ ಸಂಪೂರ್ಣವಾಗಿ ಹೂತುಹೋಗಿದೆ.

ಮನೆ ಕುಸಿದ ವೇಳೆ ಕುಟುಂಬದ ಆರು ಮಂದಿ ಅವಶೇಷಗಳಡಿ ಸಿಲುಕಿದ್ದರು. ಸ್ಥಳೀಯ ನಿವಾಸಿಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು.ಬಾಲಕೃಷ್ಣ (48),ಅಲ್ಕಾ (14) ಎಂಬುವವರು ಗಾಯಗೊಂಡಿದ್ದು ಇವರು ಬಿಹಾರ ರಾಜ್ಯದವರಾಗಿದ್ದು, ಕಳೆದ ಎರಡು ದಶಕಗಳಿಂದ ಮಂಗಳೂರಿನ ಕಂಕನಾಡಿ ಪ್ರದೇಶದಲ್ಲಿ ವಾಸಿಸುತ್ತಿತ್ತು.

ನಿರಂತರ ಮಳೆಯಿಂದಾಗಿ ಮನೆಯ ಮೇಲ್ಭಾಗದ ಗುಡ್ಡದ ದೊಡ್ಡ ಪ್ರಮಾಣದ ಮಣ್ಣು ಜಾರಿಬಿದ್ದು ಮನೆ ಕುಸಿದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಂತರ ಎನ್‌ಡಿಆರ್‌ಎಫ್‌ ಸಿಬ್ಬಂದಿಯೂ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಅವಶೇಷಗಳಡಿಯಿಂದ ಮೂವರ ಮೃತದೇಹಗಳನ್ನು ಹೊರತೆಗೆದ ಬಳಿಕ ಕಾರ್ಯಾಚರಣೆ ಪೂರ್ಣಗೊಳಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್‌‍ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ರಕ್ಷಣಾ ಕಾರ್ಯಾಚರಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಗುಡ್ಡಗಾಡು ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆಯಿರುವ ಪ್ರದೇಶಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಇದಲ್ಲದೆ, ಘಟನೆ ನಡೆದ ಪ್ರದೇಶದ ಸುತ್ತಮುತ್ತಲಿನ ಸ್ಥಳಗಳು ನಿವಾಸಿಗಳಿಗೆ ಸುರಕ್ಷಿತವಾಗಿವೆಯೇ ಎಂಬುದನ್ನು ಪರಿಶೀಲಿಸಲು ಜಿಲ್ಲಾಡಳಿತ ಅಧ್ಯಯನವನ್ನೂ ಆರಂಭಿಸಿದೆ.

RELATED ARTICLES

Latest News