ಬೆಂಗಳೂರು,ಆ.18- ನಿರೀಕ್ಷೆಯಂತೆ ಕರ್ನಾಟಕ ವಿಧಾನಪರಿಷತ್‌ಗೆ ಉಪಸಭಾಪತಿ ಯಾಗಿ ಮಾಜಿ ಸಚಿವೆ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕಿ ಉಮಾಶ್ರೀ ಅವರು ಅವಿರೋಧವಾಗಿ ಆಯ್ಕೆಯಾದರು. ವಿಧಾನಪರಿಷತ್ ಕಲಾಪ ಪ್ರಾರಂಭವಾಗುತ್ತಿ ದ್ದಂತೆ ಸಭಾಪತಿ ಸಲೀಂ ಅವರು, ಉಪಸಭಾಪತಿ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದರು. ಸಚಿವ ಹಾಗೂ ಸಭಾನಾಯಕ ಡಾ.ಯತೀಂದ್ರ ಅವರು ಉಪಸಭಾಪತಿಯನ್ನಾಗಿ ಉಮಾಶ್ರೀ ಅವರನ್ನು ಚುನಾಯಿಸಬೇಕೆಂದು ಪ್ರಸ್ತಾವನೆ ಮಂಡಿಸಿದರು.
ಈ ಪ್ರಸ್ತಾವನೆಗೆ ಸದಸ್ಯರಾದ ಎಫ್.ಎಚ್. ಜಕ್ಕಪ್ಪನವರ್, ಪಿ.ಸಿ.ಮೋಹನ್, ಬಸನಗೌಡ ಬಾದರ್ಲಿ, ಎ.ವಿ.ಗಾಯತ್ರಿ ಶಾಂತೇಗೌಡ, ಜಗದೇವ್ ಗುತ್ತೇದಾರ್, ರಾಮೋಜಿ ಗೌಡ ಹಾಗೂ ರಾಜಣ್ಣ ಅವರು ಸೂಚಿಸಿದರು. ಸದಸ್ಯರ ಅನುಮೋದನೆಯನ್ನು ಕಾಂಗ್ರೆಸ್ ಸದಸ್ಯೆ ಡಾ.ಆರತಿ ಕೃಷ್ಣ ಅವರು ಅನುಮೋದಿಸಿದರು.
ಬಳಿಕ ಸಭಾಪತಿ ಸಲೀಂ ಅವರು ಉಮಾಶ್ರೀ ಅವರು ವಿಧಾನಪರಿಷತ್‌ನ ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಅಧಿಕೃತವಾಗಿ ಘೋಷಣೆ ಮಾಡಿದರು. ನಂತರ ಸಭಾನಾಯಕ ಡಾ.ಯತೀಂದ್ರ, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರ ಸದಸ್ಯರು ಉಮಾಶ್ರೀ ಅವರನ್ನು ಸಭಾಪತಿಗಳ ಪೀಠಕ್ಕೆ ಕರೆದೊಯ್ದರು.
ಬಳಿಕ ಉಪಸಭಾಪತಿಯಾಗಿ ಆಯ್ಕೆಯಾದ ಉಮಾಶ್ರೀ ಅವರ ಅವರನ್ನು ಸದನವು ಪಕ್ಷಬೇಧ ಮರೆತು ಅಭಿನಂದಿಸಿತು. ಆರಂಭದಲ್ಲಿ ಮಾತನಾಡಿದ ಸಭಾನಾಯಕ ಯತೀಂದ್ರ, ಉಮಾಶ್ರೀ ಅವರು ಕಡು ಬಡತನದಿಂದ ಬೆಳೆದು ಬಂದು ಕರ್ನಾಟಕ ಮಾತ್ರವಲ್ಲದೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.
ರಂಗಭೂಮಿ ಕಲಾವಿದೆಯಾಗಿ, ಪೋಷಕ ನಟಿಯಾಗಿ ಎಲ್ಲಾ ಪಾತ್ರಗಳಲ್ಲೂ ಅಭಿನಯಿಸಿ ಕನ್ನಡ ಭಾಷೆಗೆ ರಾಷ್ಟ್ರ ಮಟ್ಟದಲ್ಲೂ ಹೆಸರು ತಂದುಕೊಟ್ಟವರು. ಶಾಸಕಿಯಾಗಿ, ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಉಪಸಭಾಪತಿ ಯಾಗಿ ಅವರು ಸದನದ ಗೌರವವನ್ನು ಎತ್ತಿ ಹಿಡಿಯಲಿದ್ದಾರೆ ಎಂದು ಹೇಳಿದರು.
ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಉಮಾಶ್ರೀ ಅವರು ಓರ್ವ ಅತ್ಯುತ್ತಮ ನಟಿ. ಸುಮಾರು ನಾಲ್ಕು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಗುರುತಿಸಿಕೊಂಡು, ಕರ್ನಾಟಕ ಮತ್ತು ಕನ್ನಡ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು ಎಂದು ಶ್ಲಾಘಿಸಿದರು.
