Homeರಾಜ್ಯ37 ವರ್ಷಗಳ ಬಳಿಕ ವಿದ್ಯಾರ್ಥಿ ಸಂಘಗಳ ಚುನಾವಣೆಗೆ ವೇದಿಕೆ ಸಜ್ಜು

37 ವರ್ಷಗಳ ಬಳಿಕ ವಿದ್ಯಾರ್ಥಿ ಸಂಘಗಳ ಚುನಾವಣೆಗೆ ವೇದಿಕೆ ಸಜ್ಜು

ಬೆಂಗಳೂರು,ಅ.3- ರಾಜ್ಯದ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ 37 ವರ್ಷಗಳ ಬಳಿಕ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ಮರುಜಾರಿಗೆ ತರುವ ಸರ್ಕಾರದ ನಿರ್ಧಾರದ ಬೆನ್ನಲ್ಲೇ, ಹಲವು ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಚುನಾವಣಾ ಪ್ರಕ್ರಿಯೆ ಆರಂಭಿಸಲು ತಮ ವ್ಯಾಪ್ತಿಯ ಕಾಲೇಜುಗಳಿಗೆ ಸೂಚನೆ ನೀಡಿವೆ.

ಇದರಿಂದ ರಾಜ್ಯದ ಕ್ಯಾಂಪಸ್‌‍ಗಳಲ್ಲಿ ವಿದ್ಯಾರ್ಥಿ ರಾಜಕೀಯ ಮತ್ತೆ ಚಟುವಟಿಕೆಗೆ ಬರುವ ಸಾಧ್ಯತೆ ಹೆಚ್ಚಿದೆ.ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ನಾಗರಿಕ ಜವಾಬ್ದಾರಿ, ಹೊಣೆಗಾರಿಕೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ.

ಸಚಿವ ಸಂಪುಟದ ಅನುಮೋದನೆಯ ನಂತರ ವಿಶ್ವವಿದ್ಯಾಲಯಗಳು ತಮ ವ್ಯಾಪ್ತಿಯ ಕಾಲೇಜುಗಳಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸುತ್ತಿವೆ.ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲೀಕಿ ವಿಶ್ವವಿದ್ಯಾಲಯವು ಸೆ.21ರಂದು ತನ್ನ ವ್ಯಾಪ್ತಿಯ ಎಲ್ಲ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘ ಚುನಾವಣೆ ನಡೆಸಲು ಸೂಚನೆ ನೀಡಿದೆ.

ಚುನಾವಣಾ ಪ್ರಕ್ರಿಯೆ ಆರಂಭಿಸುವ ಮೊದಲು ಚುನಾವಣಾ ನೀತಿ ಸಂಹಿತೆ ಸೇರಿದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕಾಲೇಜುಗಳಿಗೆ ಸೂಚಿಸಲಾಗಿದೆ.
ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯವೂ ಇದೇ ದಿಕ್ಕಿನಲ್ಲಿ ಕ್ರಮ ಕೈಗೊಂಡಿದ್ದು, ಚುನಾವಣಾ ಪ್ರಕ್ರಿಯೆ ಆರಂಭಿಸುವ ಮುನ್ನ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಸಿದ್ಧತೆಗಳ ಕುರಿತು ಪರಿಶೀಲನಾ ಸಭೆ ನಡೆಸಲು ಮುಂದಾಗಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯ ಕಾಲೇಜುಗಳ ಪ್ರಾಂಶುಪಾಲರಿಂದ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ವರದಿ ಸಲ್ಲಿಸುವಂತೆ ಸೂಚಿಸಿರುವುದು ಕೂಡ ಪ್ರಕ್ರಿಯೆ ಹಂತ ಹಂತವಾಗಿ ಆರಂಭವಾಗುತ್ತಿರುವುದನ್ನು ತೋರಿಸುತ್ತದೆ.

ನೀತಿ ಸಂಹಿತೆ ಮುಗಿದ ಬಳಿಕ ಚುನಾವಣೆ :
ಪ್ರಸ್ತುತ ಕೆಲವು ಕಡೆ ಚುನಾವಣಾ ಸಂಬಂಧಿತ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಅದು ಪೂರ್ಣಗೊಂಡ ನಂತರ ಕಾಲೇಜುಗಳಲ್ಲಿ ಚುನಾವಣಾ ಪ್ರಕ್ರಿಯೆ ಮುಂದುವರಿಯಲಿದೆ. ಹೀಗಾಗಿ ವಿಶ್ವವಿದ್ಯಾನಿಲಯಗಳು ಈಗಲೇ ಆಡಳಿತಾತಕ ಸಿದ್ಧತೆ, ಚುನಾವಣಾಧಿಕಾರಿಗಳ ನೇಮಕ, ಮತದಾರರ ಪಟ್ಟಿ ಹಾಗೂ ಅಭ್ಯರ್ಥಿಗಳ ಅರ್ಹತೆ ಸೇರಿದಂತೆ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.ರಾಜ್ಯದಲ್ಲಿ ಸುಮಾರು 37 ವರ್ಷಗಳ ಅಂತರದ ಬಳಿಕ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ಮರುಪರಿಚಯಿಸಲಾಗುತ್ತಿದೆ.

ಯಾವ ಹುದ್ದೆಗಳಿಗೆ ಚುನಾವಣೆ? :
ಮಾರ್ಗಸೂಚಿಗಳ ಪ್ರಕಾರ, ವಿದ್ಯಾರ್ಥಿ ಸಂಘದಲ್ಲಿ ಅಧ್ಯಕ್ಷ, ಇಬ್ಬರು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಹಾಗೂ ಆರು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಡೆಯಲಿದೆ. ಜಂಟಿ ಕಾರ್ಯದರ್ಶಿ ಹುದ್ದೆಗಳಲ್ಲಿ ಒಂದು ಮಹಿಳಾ ಅಭ್ಯರ್ಥಿಗೆ ಮೀಸಲಾಗಿರಲಿದ್ದು, ಕಾರ್ಯಕಾರಿ ಸಮಿತಿಯ ಆರು ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.ಇದರ ಮೂಲಕ ವಿದ್ಯಾರ್ಥಿ ಸಂಘಟನೆಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೂ ಅವಕಾಶ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ.

ಜಾತಿ-ಧರ್ಮ ಆಧರಿತ ಪ್ರಚಾರಕ್ಕೆ ಕಡಿವಾಣ :
ವಿದ್ಯಾರ್ಥಿ ಚುನಾವಣೆಗಳನ್ನು ಪಕ್ಷ ರಾಜಕೀಯದ ನೇರ ವಿಸ್ತರಣೆಯನ್ನಾಗಿ ಮಾಡದಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಜಾತಿ ಅಥವಾ ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡುವಂತಿಲ್ಲ. ಹಣ, ಅಧಿಕಾರ ಅಥವಾ ಯಾವುದೇ ರೀತಿಯ ಆಮಿಷ ನೀಡಿ ಮತ ಪಡೆಯುವುದಕ್ಕೂ ಅವಕಾಶವಿಲ್ಲ.

ಅಭ್ಯರ್ಥಿಗಳು ಪೋಸ್ಟರ್‌ ಅಥವಾ ಬ್ಯಾನರ್‌ಗಳನ್ನು ಹಾಕುವಂತಿಲ್ಲ.
ಪ್ರಚಾರಕ್ಕಾಗಿ ಅ5 ಗಾತ್ರದ ಕರಪತ್ರಗಳನ್ನು ಮಾತ್ರ ಮುದ್ರಿಸಿ ವಿತರಿಸಲು ಅವಕಾಶವಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ನಡೆಸಬಹುದಾದರೂ ದ್ವೇಷ, ವೈಷಮ್ಯ ಅಥವಾ ದುರುದ್ದೇಶವನ್ನು ಪ್ರಚೋದಿಸುವ ಸಂದೇಶಗಳಿಗೆ ನಿರ್ಬಂಧವಿದೆ.

ಶೇ.75ರಷ್ಟು ಹಾಜರಾತಿ, ಕ್ರಿಮಿನಲ್‌ ಹಿನ್ನೆಲೆಗೂ ನಿಯಮ :
ಅಭ್ಯರ್ಥಿಯಾಗಲು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75ರಷ್ಟು ಹಾಜರಾತಿ ಹೊಂದಿರಬೇಕು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ ಕ್ರಿಮಿನಲ್‌ ಆರೋಪ ಅಥವಾ ಚಾರ್ಜ್‌ಶೀಟ್‌‍ ಎದುರಿಸುತ್ತಿರುವವರು ಹಾಗೂ ಪೊಲೀಸ್‌‍ ರೌಡಿ ಶೀಟ್‌ನಲ್ಲಿ ಹೆಸರು ಹೊಂದಿರುವವರು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ. ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆಯನ್ನು ಓದಿ, ಅದನ್ನು ಪಾಲಿಸುವುದಾಗಿ ಚುನಾವಣಾಧಿಕಾರಿಯ ಮುಂದೆ ಘೋಷಣೆ ಮಾಡಬೇಕಾಗುತ್ತದೆ.

RELATED ARTICLES
spot_img

Latest News