Homeರಾಜ್ಯಗುತ್ತಿಗೆದಾರರ ಪ್ರತಿಭಟನೆ ಬೆನ್ನಲ್ಲೇ ನೀರಾವರಿ ಇಲಾಖೆಗೆ 2,400 ಕೋಟಿ ರೂ. ಬಾಕಿ ಬಿಲ್‌ ಬಿಡುಗಡೆ

ಗುತ್ತಿಗೆದಾರರ ಪ್ರತಿಭಟನೆ ಬೆನ್ನಲ್ಲೇ ನೀರಾವರಿ ಇಲಾಖೆಗೆ 2,400 ಕೋಟಿ ರೂ. ಬಾಕಿ ಬಿಲ್‌ ಬಿಡುಗಡೆ

ಬೆಂಗಳೂರು,ಅ.3- ರಾಜ್ಯದ ವಿವಿಧ ಇಲಾಖೆಗಳಲ್ಲಿನ ಗುತ್ತಿಗೆದಾರರ ಬಾಕಿ ಬಿಲ್‌ಗಳ ವಿಚಾರ ಮತ್ತೆ ತೀವ್ರಗೊಂಡಿರುವ ಬೆನ್ನಲ್ಲೇ ಕರ್ನಾಟಕ ಸರ್ಕಾರ ಕಳೆದ ಮೂರು ದಿನಗಳಲ್ಲಿ ನೀರಾವರಿ ಇಲಾಖೆಗೆ 2,400 ಕೋಟಿ ರೂ. ಬಿಡುಗಡೆ ಮಾಡಿದೆ. ಸುಮಾರು 38,000 ಕೋಟಿ ರೂ. ಬಾಕಿ ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಪ್ರತಿಭಟನೆಗೆ ಎಚ್ಚರಿಕೆ ನೀಡಿರುವ ಸಂದರ್ಭದಲ್ಲಿ ಸರ್ಕಾರ ಕೈಗೊಂಡಿರುವ ಈ ಕ್ರಮವನ್ನು ಬಾಕಿ ಪಾವತಿ ಪ್ರಕ್ರಿಯೆಗೆ ಚಾಲನೆ ನೀಡುವ ಪ್ರಯತ್ನವೆಂದು ಪರಿಗಣಿಸಲಾಗಿದೆ.

ಆದರೆ, ಗುತ್ತಿಗೆದಾರರ ಸಂಘದ ಪ್ರಕಾರ ಬಿಡುಗಡೆಯಾಗಿರುವ 2,400 ಕೋಟಿ ರೂ. ಮೊತ್ತವು ಒಟ್ಟು ಬಾಕಿಯ ಶೇ.10ರಷ್ಟು ಕಡಿಮೆಯಾಗಿದ್ದು, ಇದರಿಂದ ಹಲವು ವರ್ಷಗಳಿಂದ ಮುಂದುವರಿದಿರುವ ಆರ್ಥಿಕ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಮೂರು-ನಾಲ್ಕು ತಿಂಗಳಿಗೊಮ್ಮೆ ಅಲ್ಪ ಪ್ರಮಾಣದ ಹಣ ಬಿಡುಗಡೆ ಮಾಡುವ ಬದಲು ಬಾಕಿ ಮೊತ್ತವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌‍, ಬಾಕಿ ಹಣದ ಮೇಲಿನ ಸಾಲದ ಹೊರೆ ಹೆಚ್ಚುತ್ತಿರುವುದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದಾರೆ. ಗುತ್ತಿಗೆದಾರರ ಬಾಕಿ ಬಿಲ್‌ಗಳ ಸಮಸ್ಯೆ ಹೊಸದಲ್ಲ.ಮಾರ್ಚ್‌ 6ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುತ್ತಿಗೆದಾರರು ಪ್ರತಿಭಟನೆ ನಡೆಸಿ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿದ್ದರು. ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಗುತ್ತಿಗೆದಾರರೊಂದಿಗೆ ಮುಖ್ಯಮಂತ್ರಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ತಿಂಗಳುಗಳು ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಹಣ ಬಿಡುಗಡೆಯಾಗಿಲ್ಲ .

ಎಂಬುದು ಸಂಘದ ಅಸಮಾಧಾನಕ್ಕೆ ಕಾರಣವಾಗಿದೆ.ಫೆಬ್ರವರಿಯಲ್ಲಿಯೂ ಗುತ್ತಿಗೆದಾರರ ಸಂಘವು ರಾಜ್ಯದ ಪ್ರಮುಖ ಎಂಟು ಇಲಾಖೆಗಳಲ್ಲೇ ಸುಮಾರು 37,370 ಕೋಟಿ ರೂ. ಬಿಲ್‌ಗಳು ಬಾಕಿ ಉಳಿದಿವೆ ಎಂದು ಹೇಳಿ, ಹಣ ಬಿಡುಗಡೆ ಮಾಡದಿದ್ದರೆ ಮೂಲಸೌಕರ್ಯ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿತ್ತು.

ಇದೀಗ ಸೆಪ್ಟೆಂಬರ್‌ ಅಂತ್ಯದಲ್ಲಿ ಸಂಘವು ಮತ್ತೆ ಮುಖ್ಯಮಂತ್ರಿಗೆ ಪತ್ರ ಬರೆದು ಸುಮಾರು 38,000 ಕೋಟಿ ರೂ. ಬಾಕಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಸುಮಾರು 1.5 ಲಕ್ಷ ಗುತ್ತಿಗೆದಾರರು ಹಲವು ವರ್ಷಗಳಿಂದ ಪಾವತಿಗಾಗಿ ಕಾಯುತ್ತಿದ್ದಾರೆ ಎಂದು ಸಂಘ ಹೇಳಿದೆ.

ನೀರಾವರಿ ಇಲಾಖೆಯಲ್ಲೇ ದೊಡ್ಡ ಮೊತ್ತ ಬಾಕಿ :
ಸಂಘದ ಇತ್ತೀಚಿನ ಲೆಕ್ಕಾಚಾರದ ಪ್ರಕಾರ, ಜಲಸಂಪನೂಲ/ಪ್ರಮುಖ ನೀರಾವರಿ ಇಲಾಖೆಯಲ್ಲಿ ಸುಮಾರು 14,000 ಕೋಟಿ ರೂ., ಲೋಕೋಪಯೋಗಿ ಇಲಾಖೆಯಲ್ಲಿ 8,370 ಕೋಟಿ ರೂ., ಸಣ್ಣ ನೀರಾವರಿಯಲ್ಲಿ 3,600 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ 3,000 ಕೋಟಿ ರೂ., ವಸತಿ ಮತ್ತು ವಕ್‌್ಫ ಕ್ಷೇತ್ರದಲ್ಲಿ 2,600 ಕೋಟಿ ರೂ., ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಲ್ಲಿ 2,600 ಕೋಟಿ ರೂ., ಕಾರ್ಮಿಕ ಇಲಾಖೆಯಲ್ಲಿ 2,000 ಕೋಟಿ ರೂ. ಹಾಗೂ ನಗರಾಭಿವೃದ್ಧಿ ಇಲಾಖೆಯಲ್ಲಿ 1,800 ಕೋಟಿ ರೂ. ಬಾಕಿ ಇದೆ ಎಂದು ಸಂಘ ಹೇಳಿದೆ. ಈ ಮೊತ್ತಗಳು ಒಟ್ಟಾಗಿ ಸುಮಾರು 38,000 ಕೋಟಿ ರೂ.ಗೆ ಸಮೀಪಿಸುತ್ತವೆ.

ಆದರೆ, ಗುತ್ತಿಗೆದಾರರ ಸಂಘದ ಅಂಕಿಅಂಶಗಳು ಮತ್ತು ಸರ್ಕಾರದ ಅಧಿಕೃತ ಬಾಕಿ ಲೆಕ್ಕ ಒಂದೇ ಆಗಿಲ್ಲ ಎಂಬುದು ಗಮನಾರ್ಹ. ಸಂಘದ ಲೆಕ್ಕದಲ್ಲಿ ಕೆಲವು ಪ್ರಗತಿಯಲ್ಲಿರುವ ಕಾಮಗಾರಿಗಳ ಅಂದಾಜು ಮೊತ್ತವೂ ಸೇರಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ನಿಜವಾಗಿ ಪಾವತಿಸಬೇಕಿರುವ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಮೊತ್ತವನ್ನು ಪ್ರತ್ಯೇಕವಾಗಿ ನಿರ್ಧರಿಸುವ ಅಗತ್ಯ ಎದುರಾಗಿದೆ.

ನೀರಾವರಿ ಇಲಾಖೆಯ ಬಾಕಿ ಬಿಲ್‌ಗಳ ಪಾವತಿಗಾಗಿ ಸರ್ಕಾರ ಈಗಾಗಲೇ 1,400 ಕೋಟಿ ರೂ. ಮೀಸಲಿಟ್ಟಿತ್ತು. ಇದೀಗ ಹೆಚ್ಚುವರಿಯಾಗಿ 2,400 ಕೋಟಿ ರೂ. ಬಿಡುಗಡೆ ಮಾಡಿರುವುದರಿಂದ ಪಾವತಿ ಪ್ರಕ್ರಿಯೆಗೆ ವೇಗ ಸಿಗುವ ನಿರೀಕ್ಷೆಯಿದೆ.ಆದರೆ, 1,400 ಕೋಟಿ ರೂ. ಮೊತ್ತವನ್ನು ಬಿಲ್‌ಗಳ ಹಿರಿಯತನದ ಆಧಾರದ ಮೇಲೆ ಪಾವತಿಸಲು ಸರ್ಕಾರ ಮುಂದಾಗಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ.

ಇದರಿಂದ ದೊಡ್ಡ ಗುತ್ತಿಗೆದಾರರಿಗೆ ಮೊದಲು ಹಣ ಸಿಗುವ ಸಾಧ್ಯತೆ ಇದ್ದು, ಸಣ್ಣ ಗುತ್ತಿಗೆದಾರರು ಇನ್ನಷ್ಟು ಕಾಯಬೇಕಾಗಬಹುದು ಎಂಬ ಆತಂಕವನ್ನು ಸಂಘ ವ್ಯಕ್ತಪಡಿಸಿದೆ. ಪಾವತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು ಹಾಗೂ ಅರ್ಹತೆಯ ಆಧಾರದ ಮೇಲೆ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಸಂಘ ಆಗ್ರಹಿಸಿದೆ.

ಪಿಡಬ್ಲ್ಯೂಡಿ ಬಾಕಿಗೂ ಹಣ ಬಿಡುಗಡೆ ಸಾಧ್ಯತೆ :
ನೀರಾವರಿ ಇಲಾಖೆಯ ನಂತರ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಬಾಕಿ ಬಿಲ್‌ಗಳಿಗೂ ಇದೇ ರೀತಿಯಲ್ಲಿ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸು ಇಲಾಖೆ ಅಗತ್ಯ ನಿರಾಕ್ಷೇಪಣಾ ಪತ್ರ ನೀಡಿದ ಬಳಿಕ ಪಾವತಿ ಪ್ರಕ್ರಿಯೆ ಆರಂಭವಾಗಬಹುದು.

ಬಾಕಿ ಹಣದ ವಿಚಾರ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಚೇರಿ ಗುತ್ತಿಗೆದಾರರ ಸಂಘದೊಂದಿಗೆ ಸಭೆ ನಡೆಸಲು ಮುಂದಾಗಿದೆ. ಇದೇ ವೇಳೆ ಡಿ.ಕೆ. ಶಿವಕುಮಾರ್‌ ಅವರು ಸೆಪ್ಟೆಂಬರ್‌ ಅಂತ್ಯದಲ್ಲಿ ಗುತ್ತಿಗೆದಾರರೊಂದಿಗೆ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಿದ್ಧತೆ ವ್ಯಕ್ತಪಡಿಸಿದ್ದರು.

ಮತ್ತೊಂದೆಡೆ, ಬಾಕಿ ಹಣ ಬಿಡುಗಡೆ ಆಗದಿದ್ದರೆ ನವೆಂಬರ್‌ನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಗುತ್ತಿಗೆದಾರರ ಸಂಘ ಗಡುವು ನೀಡಿದೆ. ಬಾಕಿ ಪಾವತಿಯಾಗದಿದ್ದರೆ ಡಿಸೆಂಬರ್‌ನಲ್ಲಿ ಟೆಂಡರ್‌ಗಳಲ್ಲಿ ಕಮಿಷನ್‌ ಪಡೆದಿರುವವರ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಸಂಘ ಎಚ್ಚರಿಸಿರುವುದು ವಿವಾದಕ್ಕೆ ಮತ್ತಷ್ಟು ರಾಜಕೀಯ ಆಯಾಮ ನೀಡಿದೆ.

RELATED ARTICLES
spot_img

Latest News