ಬೆಂಗಳೂರು, ಅ.2 – ನಗರದ ಮಳೆ ನೀರು ಹರಿವಿಗೆ ಅಡ್ಡಿಯಾಗಿದ್ದ ರಾಜಕಾಲುವೆ ಜಾಗದ ಒತ್ತುವರಿ ತೆರವುಗೊಳಿಸಿ ಸುಮಾರು 6 ಕೋಟಿ ಮೌಲ್ಯದ 6 ಗುಂಟೆ ಸರ್ಕಾರಿ ಜಾಗವನ್ನು ಬೆಂಗಳೂರು ದಕ್ಷಿಣ ಪಾಲಿಕೆ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಬೊಮನಹಳ್ಳಿ ವಲಯ-2ರ ಎಚ್ಎಸ್ಆರ್ ವಿಭಾಗ, ಕೂಡ್ಲು ಉಪವಿಭಾಗ ವ್ಯಾಪ್ತಿಯ ಹರಳೂರು ಗ್ರಾಮದ ಸರ್ವೆ ನಂ. 2/1ರಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಸುಮಾರು 6,534 ಚದರ ಅಡಿ ವಿಸ್ತೀರ್ಣದ ಬಿ-ಖರಾಬ್ ರಾಜಕಾಲುವೆ ಹಾಗೂ ಹಳ್ಳದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಹಾಗೂ ಶೆಡ್ಗಳನ್ನು ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒತ್ತುವರಿ ತೆರವು ಸಂಬಂಧ ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರ ಹಾಗೂ ಲಕ್ಷ್ಮಿನಾರಾ ಯಣ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖ ಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ರಾಜಕಾಲುವೆ ಹಾಗೂ ಹಳ್ಳದ ಖರಾಬ್ ಜಾಗದಲ್ಲಿನ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿತ್ತು. ಒತ್ತುವರಿದಾರರು ತೆರವುಗೊಳಿಸಲು ವಿಫಲವಾದಲ್ಲಿ ಪಾಲಿಕೆ ವತಿಯಿಂದಲೇ ತೆರವು ಕಾರ್ಯಾಚರಣೆ ನಡೆಸುವಂತೆ ಆದೇಶ ನೀಡಲಾಗಿತ್ತು.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕೂಡ್ಲು ವಿಭಾಗದ ಪಾಲಿಕೆ ಅಭಿಯಂತರರು, ಸರ್ವೇಯರ್ಗಳು ಹಾಗೂ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಹಾಗೂ ಶೆಡ್ಗಳನ್ನು ತೆರವುಗೊಳಿಸಿ 6 ಗುಂಟೆ ಜಾಗವನ್ನು ಪಾಲಿಕೆಯ ವಶಕ್ಕೆ ಪಡೆಯ ಲಾಯಿತು.
ಮಳೆನೀರು ಹರಿವಿಗೆ ಅನುಕೂಲ:
ರಾಜಕಾಲುವೆಯ ನೈಸರ್ಗಿಕ ಹರಿವನ್ನು ಸಂರಕ್ಷಿಸುವುದು ಹಾಗೂ ಮಳೆ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವ ಉದ್ದೇಶದಿಂದ ಕಾರ್ಯಾಚರಣೆ ನಡೆಸಲಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.ಸಾರ್ವಜನಿಕ ಬಳಕೆಯ ರಾಜಕಾಲುವೆ ಹಾಗೂ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡುವವರ ವಿರುದ್ಧ ಮುಂದಿನ ದಿನಗಳಲ್ಲಿಯೂ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
