ನೆಲಮಂಗಲ,ಆ.18- ಆಡಳಿದಲ್ಲಿ ಪಾರದರ್ಶಕತೆ ತರಬೇಕು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಹಾಗೂ ಇ-ಆಫೀಸ್ ಯೋಜನೆಗೆ ನೆಲಮಂಗಲ ಯೋಜನಾ ಪ್ರಾಧಿಕಾರದಲ್ಲಿ ಯಾವುದೇ ಕಿಮತ್ತಿಲ್ಲ.
ಇಲ್ಲಿ ಕಡತಗಳದ್ದೇ ಕಳ್ಳಾಟ. ಸಕಾಲ, ಇ-ಆಫೀಸ್ ಆದೇಶಕ್ಕೆ ಇಲ್ಲಿನ ಅಧಿಕಾರಿಗಳು ಡೋಂಟ್ ಕೇರ್..! ಸಿಎಂ ಉಸ್ತುವಾರಿಯ ಸಕಾಲ ಹಾಗೂ ಇ-ಆಫೀಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ವರ್ಷಗಳೇ ಕಳೆದಿದ್ದರೂ, ನಗರಾಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ನೆಲಮಂಗಲ ಯೋಜನಾ ಪ್ರಾಧಿಕಾರ ಮಾತ್ರ ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಬೆಲೆ ನೀಡದೆ ಕತ್ತಲಲ್ಲೇ ಆಡಳಿತ ನಡೆಸುತ್ತಿರುವುದು ನಾಗರೀಕರಲ್ಲಿ ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.
ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಸೇವೆ ಒದಗಿಸಲು 2012ರಲ್ಲೇ ಸಕಾಲ ಸೇವೆ ಜಾರಿಯಾಗಿದೆ. 2021ರಲ್ಲೇ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ವ್ಯವಸ್ಥೆ ಕಡ್ಡಾಯಗೊಳಿಸಿ, ಕಡತಗಳ ಚಲನೆ ಕೇವಲ ಆನ್‌ಲೈನ್ ಮೂಲಕವೇ ನಡೆಯಬೇಕು ಎಂದು ಸರ್ಕಾರ ಖಡಕ್ ಆದೇಶ ಹೊರಡಿಸಿದೆ.
ಆದರೆ, ನೆಲಮಂಗಲ ಯೋಜನಾ ಪ್ರಾಧಿಕಾರ ಮಾತ್ರ ಇಂದಿಗೂ ಈ ಎರಡೂ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳದೆ ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿದೆ.ಇಲ್ಲಿ ಭೌತಿಕ ಕಡತಗಳದ್ದೇ ದರ್ಬಾರು! ನೆಲಮಂಗಲ ಯೋಜನಾ ಪ್ರಾಧಿಕಾರದಿಂದ ಬಿಎಂಆರ್‌ಡಿಎ ಹಾಗೂ ನಗರಾಭಿವೃದ್ಧಿ ಇಲಾಖೆಗೆ ನಿತ್ಯವೂ ಕಡತಗಳು ರವಾನೆಯಾಗುತ್ತವೆ. ಆದರೆ, ಇಂದಿಗೂ ಈ ಪತ್ರ ವ್ಯವಹಾರ ಹಾಗೂ ಕಡತಗಳ ರವಾನೆ ಹಳೆಯ ಭೌತಿಕ ಕಡತಗಳ ಮೂಲಕವೇ ನಡೆಯುತ್ತಿದೆ.
ಈ ಎರಡೂ ಅತ್ಯಗತ್ಯ ಸೇವೆಗಳನ್ನು ಅಳವಡಿಸಿಕೊಳ್ಳದಿದ್ದರೂ ಬಿಎಂಆರ್‌ಡಿಎ ಅಧಿಕಾರಿಗಳಾಗಲಿ ಅಥವಾ ಸರ್ಕಾರದ ಮಟ್ಟದಲ್ಲಾಗಲಿ ಯಾರೊಬ್ಬರೂ ಈ ಬಗ್ಗೆ ಪ್ರಶ್ನಿಸದೆ ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಭ್ರಷ್ಟಾಚಾರಕ್ಕೆ ಆಹ್ವಾನ? ಇ-ಆಫೀಸ್ ಅಳವಡಿಸಿಕೊಂಡರೆ ಕಡತಗಳ ವಿಲೇವಾರಿ ವೇಗವಾಗಿ ಆಗುತ್ತದೆ, ಯಾವ ಅಧಿಕಾರಿಯ ಟೇಬಲ್ ಮೇಲೆ ಕಡತ ಎಷ್ಟು ದಿನ ಬಾಕಿ ಇದೆ ಎಂಬುದು ಆನ್‌ಲೈನ್‌ನಲ್ಲಿ ಪಾರದರ್ಶಕವಾಗಿ ದಾಖಲಾಗುತ್ತದೆ. ಇದರಿಂದ ಲಂಚಗುಳಿತನ ಹಾಗೂ ಅನಗತ್ಯ ವಿಳಂಬಕ್ಕೆ ಕಡಿವಾಣ ಬೀಳುತ್ತದೆ. ಆದರೆ, ಇದನ್ನು ಮರೆಮಾಚಿ ಅಕ್ರಮಗಳಿಗೆ ದಾರಿ ಮಾಡಿಕೊಡುವ ಉದ್ದೇಶದಿಂದಲೇ ಪ್ರಾಧಿಕಾರದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಇ-ಆಫೀಸ್ ಅಳವಡಿಕೆಯಿಂದ ದೂರ ಉಳಿದಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ.
ಮುಖ್ಯಮಂತ್ರಿಗಳು ಬ್ರೇಕ್ ಹಾಕುವರೇ? ನಗರಾಭಿವೃದ್ಧಿ ಇಲಾಖೆಯ ಹೊಣೆಯನ್ನು ಖುದ್ದು ಮುಖ್ಯಮಂತ್ರಿಗಳೇ ಹೊತ್ತಿದ್ದಾರೆ. ತಮದೇ ಇಲಾಖೆಯ ಅಧೀನದಲ್ಲಿರುವ ಪ್ರಾಧಿಕಾರವೊಂದು ಸರ್ಕಾರದ ಆದೇಶವನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿದ್ದರೂ, ಕಟ್ಟುನಿಟ್ಟಿನ ಕ್ರಮ ಜರುಗಿಸದಿರುವುದು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.
ಇನ್ನಾದರೂ ಮುಖ್ಯಮಂತ್ರಿಗಳು ಹಾಗೂ ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ. ಕೂಡಲೇ ನೆಲಮಂಗಲ ಯೋಜನಾ ಪ್ರಾಧಿಕಾರದಲ್ಲಿ ಶೇ.100ರಷ್ಟು ಇ-ಆಫೀಸ್ ಹಾಗೂ ಸಕಾಲ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ, ಭೌತಿಕ ಕಡತಗಳ ಓಡಾಟಕ್ಕೆ ಬ್ರೇಕ್ ಹಾಕುವ ಮೂಲಕ ಅಲ್ಲಿನ ಭ್ರಷ್ಟಾಚಾರಕ್ಕೆ ಫುಲ್ ಸ್ಟಾಪ್ ಇಡಬೇಕಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಸೆಯಾಗಿದೆ.
