Homeರಾಜ್ಯಉಸಿರುಗಟ್ಟಿಸುತ್ತಿರುವ ಗ್ಯಾರಂಟಿ ಪರಿಷ್ಕರಣೆ : ಸರ್ಕಾರದ ದಿನಕ್ಕೊಂದು ನಿರ್ಧಾರಕ್ಕೆ ರೋಸಿಹೋದ ಜನ

ಉಸಿರುಗಟ್ಟಿಸುತ್ತಿರುವ ಗ್ಯಾರಂಟಿ ಪರಿಷ್ಕರಣೆ : ಸರ್ಕಾರದ ದಿನಕ್ಕೊಂದು ನಿರ್ಧಾರಕ್ಕೆ ರೋಸಿಹೋದ ಜನ

Confusion over guarantee schemes: People angry over government

ಬೆಂಗಳೂರು, ಜು.1- ರಾಜ್ಯ ಸರ್ಕಾರ ದಿನೇದಿನೇ ಹೊಸದಾಗಿ ಜಾರಿಗೊಳಿಸುತ್ತಿರುವ ನಿಯಮಗಳು, ಕಟ್ಟುಪಾಡು ಗಳು ಜನ ಸಾಮಾನ್ಯರನ್ನು ಉಸಿರು ಗಟ್ಟಿಸಲಾರಂಭಿಸಿವೆ.ವಿಧಾನಸಭೆ ಚುನಾವಣೆಗೂ ಮುನ್ನ ಗೆಲ್ಲಲೇ ಬೇಕು ಎಂಬ ಜಿದ್ದಿಗೆ ಬಿದ್ದು, ಯಾರೂ ಕೇಳದೇ ಇದ್ದರೂ, ಸಾರಿಗೆ ಬಸ್‌‍ಗಳಲ್ಲಿ ಉಚಿತ ಪ್ರಯಾಣಕ್ಕೆ ಶಕ್ತಿ, 200 ಯೂನಿಟ್‌ ಉಚಿತ ವಿದ್ಯುತ್‌ನ ಗೃಹಜ್ಯೋತಿ, ಮನೆ ಯಜಮಾನಿಯರಿಗೆ 2 ಸಾವಿರ ರೂ. ಮಾಸಾನದ ಗೃಹಲಕ್ಷ್ಮಿ, 10 ಕೆ.ಜಿ.ಯ ವರೆಗೂ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ, ವಿದ್ಯಾರ್ಥಿಗಳ ಮಾಸಾಶನದ ಯುವನಿಧಿಯಂತಹ ಭರವಸೆಗಳನ್ನು ಘೋಷಣೆ ಮಾಡಿತ್ತು.

ಈ ಹಿಂದಿನ ಬಿಜೆಪಿ ಸರ್ಕಾರದ ಕೆಲ ನೀತಿಗಳು ಹಾಗೂ ಕಾನೂನು ಸುವ್ಯವಸ್ಥೆಯಂತಹ ಗಂಭೀರ ವಿಚಾರಗಳಿಂದ ಬೇಸತ್ತಿದ್ದ ಜನ, ಪರ್ಯಾಯ ಆಯ್ಕೆಯ ಬಗ್ಗೆ ಚಿಂತನೆ ನಡೆಸಿದ್ದರು. ಅಂತಹ ವೇಳೆ ಜನರಿಗೆ ಆಶಾಗೋಪುರ ತೋರಿಸುವ ಕಾಂಗ್ರೆಸ್‌‍ನ ಗ್ಯಾರಂಟಿ ಯೋಜನೆಗಳು ಮತ್ತಷ್ಟು ಆಸೆ ಹುಟ್ಟಿಸಿದ್ದವು. ಚುನಾವಣೆಯಲ್ಲಿ ನಿರೀಕ್ಷೆ ಮೀರಿ 135 ಕಾಂಗ್ರೆಸ್‌‍ ಶಾಸಕರು ಗೆಲುವು ಕಂಡರು, ಭರ್ಜರಿ ಬಹುಮತದ ಸರ್ಕಾರಕ್ಕೆ ಹೈಕಮಾಂಡ್‌ನ ಕೃಪಾಶೀರ್ವಾದದಿಂದ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯಾದರು.

13 ಬಜೆಟ್‌ಗಳನ್ನು ಮಂಡಿಸಿ ಆರ್ಥಿಕತೆಯ ಮೇಲೆ ಹಿಡಿತ ಹೊಂದಿದ ಸಿದ್ದರಾಮಯ್ಯ, ಯಾವುದೇ ಮುಲಾಜು ನೋಡದೆ, ಸರಳ ವಿಧಾನಗಳ ಮೂಲಕ ಅರ್ಜಿ ಸ್ವೀಕರಿಸಿ ಚುನಾವಣೆಯಲ್ಲಿ ನೀಡಿದ ವಾಗ್ದಾನದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದರು. 200 ಯೂನಿಟ್‌ ಉಚಿತ ವಿದ್ಯುತ್‌ ಎಂಬ ಘೋಷಣೆಯಲ್ಲಿ ಕೊಂಚ ಬದಲಾವಣೆ ಮಾಡಿ, 200 ಯೂನಿಟ್‌ಗಳವರೆಗೂ ಎಂದು ಮಾರ್ಪಡಿಸಿದ್ದನ್ನು ಬಿಟ್ಟರೆ, ಉಳಿದೆಲ್ಲಾ ಗ್ಯಾರಂಟಿಗಳನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸಿದ್ದರು.

ಸುಮಾರು ಎರಡೂವರೆ ವರ್ಷಗಳ ಕಾಲ ಜನರಿಗೆ ಯಾವುದೇ ತಲೆ ನೋವಿಲ್ಲದೆ ಯೋಜನೆಗಳ ಲಾಭ ದೊರೆಕಿತ್ತು. ವಿರೋಧ ಪಕ್ಷಗಳು ಎಷ್ಟೇ ಟೀಕೆ, ಅಪಪ್ರಚಾರ ಮಾಡಿದ್ದರೂ, ಗ್ಯಾರಂಟಿಗಳ ಫಲಾನುಭವಿಗಳು ಮಾತ್ರ ಖುಷಿಯಾಗಿದ್ದರು. ಅಭಿವೃದ್ಧಿ ಕಾರ್ಯಗಳಿಗೆ ಹಣ ಸಿಗುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಅವಲತ್ತುಕೊಂಡರೂ, ಸಿದ್ದರಾಮಯ್ಯ ತಲೆ ಕೆಡಿಸಿಕೊಂಡಿರಲಿಲ್ಲ, ಗ್ಯಾರಂಟಿಗಳಿಗೆ ಕತ್ತರಿ ಪ್ರಯೋಗ ಮಾಡಿರಲಿಲ್ಲ.

ನಾಯಕತ್ವ ಬದಲಾವಣೆಯಾಗಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಿದ್ದಂತೆ ಹೊಸ ಹೊಸ ನಿಯಮಗಳು, ಕಟ್ಟುಪಾಡುಗಳು ಫಲಾನುಭವಿಗಳನ್ನು ರೇಜಿಗೆ ಹಿಡಿಸಿವೆ. ಈ ಮೊದಲು ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೇ ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಸಿದ್ದರಾಮಯ್ಯ ಸರ್ಕಾರ ಆರಂಭದಲ್ಲಿ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸಮಯಾವಕಾಶ ತೆಗೆದುಕೊಂಡಾಗ, ಇದೇ ಡಿ.ಕೆ.ಶಿವಕುಮಾರ್‌ ಕುತ್ತಿಗೆ ಮೇಲೆ ಕೂತವರಂತೆ ಒತ್ತಡ ತಂದು ಗ್ಯಾರಂಟಿಗಳ ಅನುಷ್ಠಾನಕ್ಕೆ ಕಾರಣಕರ್ತರಾದರು. ಈಗ ತಮದೇ ನೇತೃತ್ವದ ಸರ್ಕಾರದಲ್ಲಿ ಗ್ಯಾರಂಟಿಗಳ ಫಲಾನುಭವಿಗಳು ಫಜೀತಿಗೊಳಗಾಗುವಂತೆ ಮಾಡುತ್ತಿದ್ದಾರೆ.

ರಾಜ್ಯಾದ್ಯಂತ ಇಂದಿನಿಂದ ಗೃಹಜ್ಯೋತಿಯ ಯೋಜನೆಯ ಮರು ಪರಿಶೀಲನೆ ಶುರುವಾಗಿದೆ. ಫಲಾನುಭವಿಗಳು ಮನೆಯ ದಾಖಲೆ ಪತ್ರ, ಬಾಡಿಗೆ ಅಥವಾ ಭೋಗ್ಯದ ಪತ್ರ, ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಆದಾಯ ಅಥವಾ ಜಾತಿ ಪ್ರಮಾಣ ಪತ್ರದಂತಹ ದಾಖಲೆಗಳನ್ನು ಮನೆ ಬಾಗಿಲಿಗೆ ಬರುವ ಮೀಟರ್‌ ರೀಡರ್‌ಗಳಿಗೆ ಹಾಜರು ಪಡಿಸಬೇಕಿದೆ. ಫಲಾನುಭವಿ ಆದಾಯತೆರಿಗೆ ಪಾವತಿದಾರರೇ? ಸರ್ಕಾರಿ ನೌಕರರೇ? ಎಂಬೆಲ್ಲಾ ವಿವರಗಳನ್ನು ಪರಿಶೀಲಿಸುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಯೋಜನೆಗಳಿಗೆ ಕತ್ತರಿ ಪ್ರಯೋಗವಾಗುವ ಸಾಧ್ಯತೆಗಳಿವೆ.

ಗೃಹಲಕ್ಷ್ಮಿ ಯೋಜನೆಗೂ ಇದೇ ರೀತಿಯ ದಾಖಲೆಗಳನ್ನು ಕೇಳಲಾಗುತ್ತದೆ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯ ಎಂಬ ನೋಟೀಸ್‌‍ ಬೋರ್ಡ್‌ಗಳು ಕಾಣಿಸುತ್ತಿವೆ. ಶಕ್ತಿ ಯೋಜನೆಗೆ ಸಾರ್ಟ್‌ ಕಾರ್ಡ್‌ ವ್ಯವಸ್ಥೆ ಜಾರಿಗೆ ಬರಲಿದೆ. ವಿದ್ಯಾರ್ಥಿಗಳ ಮಾಸಾಸನ ಯುವನಿಧಿಗೆ ಹೊರತು ಪಡಿಸಿ, ಅಧಿಕ ಹಣಕಾಸಿನ ವೆಚ್ಚ ಭರಿಸುವ ಎಲ್ಲಾ ಯೋಜನೆಗಳನ್ನು ಪರಿಷ್ಕರಿಸಲಾಗುತ್ತಿದೆ.

ಸಿದ್ದರಾಮಯ್ಯ ಅವರ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಅನರ್ಹರನ್ನು ಪತ್ತೆ ಹಚ್ಚಲು ಮುಂದಾದಾಗ ದೊಡ್ಡ ಗಲಾಟೆಗಳಾಗಿತ್ತು. ಈಗ ಎಲ್ಲಾ ಗ್ಯಾರಂಟಿಗಳು ಪುನರ್‌ ಪರಿಶೀಲನೆಗೊಳಗಾಗುತ್ತಿವೆ. ಅದರಲ್ಲೂ ಹಿಂದೆಂದೂ ಇಲ್ಲದಷ್ಟು ದಾಖಲೆಗಳನ್ನು ಕೇಳಿ ಜನರನ್ನು ಹೈರಾಣಾಗಿಸಲಾಗುತ್ತಿದೆ.

ಒಂದೆಡೆ ಇಂದಿನಿಂದ ಫುಟ್‌ಪಾತ್‌ ತೆರವು ಕಾರ್ಯಾಚರಣೆ ಹೆಸರಿನಲ್ಲಿ ಬೀದಿಬದಿಯ ವ್ಯಾಪಾರಿಗಳ ಹೊಟ್ಟೆಪಾಡಿಗೆ ಕಂಟಕ ತರಲಾಗುತ್ತಿದೆ.ಮತ್ತೊಂದೆಡೆ ಬೆಂಗಳೂರಿನಲ್ಲಿ ರಸ್ತೆಯ ಬದಿಯ ವಾಹನ ನಿಲುಗಡೆಗೆ ಶುಲ್ಕ ವಿಧಿಸುವ ಜನವಿರೋಧಿ ನೀತಿ ರೂಪಿಸಲು ಸರ್ಕಾರ ಮುಂದಾಗಿದೆ.

ಅಧಿಕಾರ ಇಲ್ಲದೇ ಇದ್ದಾಗ ಬೀದಿಬದಿ ವ್ಯಾಪಾರಸ್ಥರ ವಿಚಾರದಲ್ಲಿ ಮೊಸಳೆ ಕಣ್ಣೀರು ಸುರಿಸಿ ಬೆಂಬಲ ವ್ಯಕ್ತಪಡಿಸಿದ್ದ ಕಾಂಗ್ರೆಸ್‌‍ ಪಕ್ಷ, ಅಧಿಕಾರ ಸಿಗುತ್ತಿದ್ದಂತೆ ಜೀವನೋಪಾಯದ ಮೇಲೆ ಪೆಟ್ಟು ನೀಡಲು ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.ಜನಸಾಮಾನ್ಯರಿಗೆ ಕಂಟಕವಾಗಿರುವ ರಾಜ್ಯ ಸರ್ಕಾರದ ನೀತಿಗಳ ವಿರುದ್ಧ, ವಿರೋಧ ಪಕ್ಷಗಳು ಮೌನವಹಿಸಿರುವುದು ನಾನಾ ರೀತಿಯ ಅನುಮಾನಗಳನ್ನು ಹುಟ್ಟುಹಾಕಿವೆ.

RELATED ARTICLES

Latest News