Homeರಾಜ್ಯಮಸೀದಿಗಳಲ್ಲಿ ಎಸ್‌‍ಐಆರ್‌ : ರಾಜ್ಯ ಸರ್ಕಾರದ ವ್ಯವಸ್ಥಿತ ಷಡ್ಯಂತ್ರ ಎಂದ ವಿಜಯೇಂದ್ರ

ಮಸೀದಿಗಳಲ್ಲಿ ಎಸ್‌‍ಐಆರ್‌ : ರಾಜ್ಯ ಸರ್ಕಾರದ ವ್ಯವಸ್ಥಿತ ಷಡ್ಯಂತ್ರ ಎಂದ ವಿಜಯೇಂದ್ರ

SIR in mosques: A systematic conspiracy by the state government, says Vijayendra

ಬೆಂಗಳೂರು,ಜು.3- ರಾಜ್ಯ ಸರ್ಕಾರವೇ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಿ ಮಸೀದಿಗಳಲ್ಲಿ ಬೂತ್‌ ಮಟ್ಟದ ಅಧಿಕಾರಿ(ಬಿಎಲ್‌ಒ)ಗಳನ್ನು ಕೂರಿಸಿ ಮತದಾರರ ವಿಶೇಷ ಪರಿಷ್ಕರಣೆ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಮಸೀದಿಗಳು ಮತ್ತು ಕಲ್ಯಾಣ ಮಂಟಪಗಳಲ್ಲಿ ಅಲ್ಪಸಂಖ್ಯಾತರನ್ನು ಗುಡ್ಡೆ ಹಾಕಿಕೊಂಡು ಎಸ್‌‍ಐಆರ್‌ ನಡೆಸುವಂತೆ ಒತ್ತಡ ಹಾಕಲಾಗುತ್ತಿದೆ. ಪರಿಣಾಮ ಹಿಂದೂಗಳು ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಕೂಡಲೇ ಚುನಾವಣಾ ಆಯೋಗ ಸರಿಪಡಿಸಬೇಕೆಂದು ಒತ್ತಾಯಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಎಲ್‌ಒಗಳು ಕಾಂಗ್ರೆಸ್‌‍ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ. ಇದು ಎಸ್‌‍ಐಆರ್‌ ಉದ್ದೇಶವನ್ನು ಹಾಳು ಮಾಡುವುದೇ ಆಗಿದೆ. ಕಾಂಗ್ರೆಸ್‌‍ ಪಕ್ಷಕ್ಕೆ ಇಬ್ಬಿಬ್ಬರು ಬಿಎಲ್‌ಒಗಳನ್ನು ಏಕೆ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು. ಕಾಂಗ್ರೆಸ್‌‍ ಪಕ್ಷದವರು ಬಿಎಲ್‌ಒಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಮಸೀದಿ, ಕಲ್ಯಾಣ ಮಂಟಪಗಳಲ್ಲಿ ನಮ ಹಿಂದೂಗಳು ಒಳಗೆ ಹೋಗದೆ ದೂರ ಉಳಿಯುತ್ತಿದ್ದಾರೆ. ಚುನಾವಣಾ ಆಯೋಗ ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈಗಾಗಲೇ ನಾವು ಇದಕ್ಕೆ ಸಂಬಂಧಿಸಿದಂತೆ ಆಯೋಗಕ್ಕೆ ದೂರು ನೀಡಿದ್ದೇವೆ. ನಿಜವಾದ ಮತದಾರರು ಪಟ್ಟಿಗೆ ಸೇರ್ಪಡೆಯಾದರೆ ಅಭ್ಯಂತರವಿಲ್ಲ. ಆದರೆ ಅಕ್ರಮವಾಗಿ ಬಂದಿರುವ ವಲಸಿಗರು ಪಟ್ಟಿಗೆ ಸೇರ್ಪಡೆಯಾಗುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನೆ ಮಾಡಿದರು.ಇದು ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಗಾಲದ ಪರಿಸ್ಥಿತಿ ಮತ್ತು ಮಳೆಯ ಕೊರತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಗೆ ವಿಜಯೇಂದ್ರ ಇದೇ ವೇಳೆ ಕಿಡಿಕಾರಿದರು.

ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ತಗ್ಗಿರುವ ಹಿನ್ನೆಲೆಯಲ್ಲಿ, ರೈತರು ಬೆಳೆ ಬೆಳೆಯಬೇಡಿ ಎಂದು ಮುಖ್ಯಮಂತ್ರಿಗಳು ನೀಡಿರುವ ಸಲಹೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳು ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ರೈತರಿಗೆ ಧೈರ್ಯ ತುಂಬುವ ಬದಲು, ಬಿತ್ತನೆ ಮಾಡಬೇಡಿ ಎಂದ್ಹೇಳಿ ಅನ್ನದಾತರ ಆತಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿರುವಾಗ, ಸಿಎಂ ಈ ಹೇಳಿಕೆ ರೈತರಲ್ಲಿ ಗೊಂದಲ ಮೂಡಿಸಿದೆ. ಒಂದು ವೇಳೆ ಮುಂಬರುವ ದಿನಗಳಲ್ಲಿ ಮಳೆಯಾಗಿ ಬೆಳೆ ಬಂದರೆ, ಅದಕ್ಕೆ ಸರ್ಕಾರದ ನಿಲುವು ಹೊಣೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ವಿಜಯೇಂದ್ರ, ಕೆಲವು ಪ್ರಮುಖ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.ಅನುದಾನ ಬಿಡುಗಡೆ: ಜಿಲ್ಲಾಧಿಕಾರಿಗಳ ಖಾತೆಗೆ ತುರ್ತು ಪರಿಹಾರಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆಯೇ? ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲು ಕೈಗೊಂಡ ಕ್ರಮಗಳೇನು? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ಅತಿಯಾಗಿ ನೀರು ಬಿಟ್ಟಿರುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಮಹಾರಾಷ್ಟ್ರದೊಂದಿಗೆ ಮಾತುಕತೆ ನಡೆಸಿ ರಾಜ್ಯದ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ.ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಕಾಳಜಿ ಇರುವವರು ಅಧಿಕಾರ ನಡೆಸಿದರೆ, ರಾಜ್ಯದ ಹಣೆಬರಹ ಹೀಗೆಯೇ ಇರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಂಗಾರು ಅಧಿವೇಶನವನ್ನು ಆಗಸ್ಟ್‌ ಮಧ್ಯಕ್ಕೆ ಮುಂದೂಡಿರುವುದನ್ನು ವಿರೋಧಿಸಿದ ಅವರು, ಕಾಂಗ್ರೆಸ್‌‍ ಆಂತರಿಕ ಕಚ್ಚಾಟ ಮತ್ತು ಸಚಿವ ಸ್ಥಾನದ ರೇಟ್‌ ಫಿಕ್ಸ್ ವಿಚಾರಗಳಿಂದಾಗಿ ಸರ್ಕಾರದ ಆಡಳಿತ ಯಂತ್ರ ಸ್ಥಗಿತಗೊಂಡಿದೆ ಎಂದು ದೂರಿದ್ದಾರೆ. ಶಾಸಕರು ತಮ ಕ್ಷೇತ್ರಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು, ಆಂತರಿಕ ರಾಜಕೀಯದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿನ ಇತ್ತೀಚಿನ ಹಲ್ಲೆ ಪ್ರಕರಣಗಳು ಮತ್ತು ಕೊಲೆ ಘಟನೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ವಿಜಯೇಂದ್ರ, ಹಾನಗಲ್‌ನ ನರೇಗಲ್‌ನಲ್ಲಿ ನಡೆದ ಹಾಲುಮತಸ್ತ ಸಮುದಾಯದವರ ಮೇಲಿನ ಹಲ್ಲೆ ಹಾಗೂ ರಟ್ಟೆಹಳ್ಳಿಯ ಶಿವಾಜಿರಾವ್‌ ಹತ್ಯೆಯ ಪ್ರಕರಣಗಳನ್ನು ಪ್ರಸ್ತಾಪಿಸಿದರು.ಅಲ್ಪಸಂಖ್ಯಾತರ ಓಲೈಕೆಯಿಂದಾಗಿ ರಾಜ್ಯದಲ್ಲಿ ಮತೀಯ ಶಕ್ತಿಗಳಿಗೆ ಉತ್ತೇಜನ ಸಿಗುತ್ತಿದೆ ಎಂದು ಆರೋಪಿಸಿದ್ದಾರೆ.

ಡಿಕೆಶಿ ಅವರ ಸಾಫ್‌್ಟ ಹಿಂದುತ್ವ ಮತ್ತು ಪಕ್ಷದ ಇತರ ನಾಯಕರ ಹಿಂದೂ ವಿರೋಧಿ ಹೇಳಿಕೆಗಳು ಇಂತಹ ಘಟನೆಗಳಿಗೆ ಪ್ರೇರಣೆಯಾಗುತ್ತಿವೆ. ಮತೀಯ ಶಕ್ತಿಗಳನ್ನು ಬೆಂಬಲಿಸುವ ಕೆಲಸವನ್ನು ಕಾಂಗ್ರೆಸ್‌‍ ಸರ್ಕಾರ ಮಾಡುತ್ತಿದೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.

RELATED ARTICLES

Latest News