ಬೆಂಗಳೂರು, ಜು.3- ಮಹತ್ವದ ಬೆಳವಣಿಗೆ ಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಉಪಾಹಾರ ಕೂಟ ನಡೆಸಿದ್ದಾರೆ. ನಾಯಕತ್ವ ಬದಲಾದ ಬಳಿಕ ಡಿ.ಕೆ.ಶಿವಕುಮಾರ್ ಕುಟುಂಬ ಮತ್ತು ಸಿದ್ದರಾಮಯ್ಯ ಅವರ ಮೊದಲ ಭೇಟಿ ಇದಾಗಿದೆ. 8 ವರ್ಷ ಕಾಲ ಮುಖ್ಯಮಂತ್ರಿ ಯಾಗಿದ್ದ ಸಿದ್ದರಾಮಯ್ಯ ಅವರು ಯಾವುದೇ ತಗಾದೆ ಇಲ್ಲದೇ ನಿರಾಳವಾಗಿ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಟ್ಟಿದ್ದರು.
ಅಧಿಕಾರ ಹಸ್ತಾಂತರಕ್ಕೂ ಮುನ್ನ ರಾಜ್ಯದಲ್ಲಿ ಈ ವಿಚಾರಗಳ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಿತಿ ದಾಟದಂತೆ ಇಬ್ಬರು ನಾಯಕರಿಗೂ ಸೂಚನೆ ನೀಡಿತ್ತು. ಒಂದು ಹಂತದಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ಡಿ.ಕೆ.ಶೀವಕುಮಾರ್, ಸಿದ್ದರಾಮಯ್ಯ ಅವರ ಮನೆಗೆ, ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ಉಪಾಹಾರ ಕೂಟ ನಡೆಸಿದ್ದರು. ಆ ವೇಳೆ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ನೀಡುವ ಸೂಚನೆಗೆ ಬದ್ಧರಾಗಿ ನಡೆದುಕೊಳ್ಳುವುದಾಗಿ ಇಬ್ಬರು ನಾಯಕರೂ ಹೇಳಿದ್ದರು.
ಅಧಿಕಾರ ತ್ಯಾಗದ ಬಳಿಕ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಸಣ್ಣ ಮಟ್ಟದ ಅಪಸ್ವರಗಳು ಅಲ್ಲಲ್ಲಿ ಕಂಡು ಬರುತ್ತಿದೆ. ಇದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಕುಟುಂಬ ಸಮೇತರಾಗಿ ಸಿದ್ದರಾಮಯ್ಯಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಜೊತೆಯಲ್ಲೇ ಉಪಾಹಾರ ಸೇವಿಸಿದ್ದಾರೆ.
ಈ ವೇಳೆ ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ, ಸಹೋದರ ಡಿ.ಕೆ.ಸುರೇಶ್ ಉಪಸ್ಥಿತರಿದ್ದರು. ಇದೊಂದು ಸೌಜನ್ಯದ ಭೇಟಿ ಎಂದು ಹೇಳಲಾಗುತ್ತಿದೆ. ಆದರೂ ಸಚಿವ ಸಂಪುಟ ವಿಸ್ತರಣೆಯ ಹಂತದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.
ರಾಷ್ಟ್ರ ರಾಜಕಾರಣದಲ್ಲೇ ಇಷ್ಟು ಸುಲಲಿತವಾಗಿ ಅಧಿಕಾರ ಹಸ್ತಾಂತರವಾದ ಪ್ರಕರಣ ಮತ್ತೊಂದಿಲ್ಲ. ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿ, 30 ದಿನಗಳಾದ ಸಂದರ್ಭದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು, ಡಿ.ಕೆ.ಶಿವಕುಮಾರ್‌ರವರ ಕುಟುಂಬದ ಜೊತೆ ಸಂತೋಷದ ಮಾತುಕತೆ ನಡೆಸಿ ಶುಭ ಹಾರೈಸಿದ್ದಾರೆ.
