Homeರಾಜ್ಯಕರಾವಳಿಯಲ್ಲಿ ಮುಂದುವರೆದ ವರುಣನ ಆರ್ಭಟ, ಮತ್ತಷ್ಟು ಮಳೆ ಹೆಚ್ಚಾಗುವ ಮುನ್ನೆಚ್ಚರಿಕೆ

ಕರಾವಳಿಯಲ್ಲಿ ಮುಂದುವರೆದ ವರುಣನ ಆರ್ಭಟ, ಮತ್ತಷ್ಟು ಮಳೆ ಹೆಚ್ಚಾಗುವ ಮುನ್ನೆಚ್ಚರಿಕೆ

Rain Alert

ಬೆಂಗಳೂರು, ಜು.5-ಜೂನ್‌ ತಿಂಗಳಲ್ಲಿ ದುರ್ಬಲಗೊಂಡಿದ್ದ ನೈರುತ್ಯ ಮುಂಗಾರು ಕರಾವಳಿ, ಮಲೆನಾಡು ಭಾಗದಲ್ಲಿ ಚುರುಕಾಗಿದ್ದು, ಭಾರಿ ಮಳೆಯಾಗುತ್ತಿದೆ. ಮುಂದಿನ ಮೂರು ದಿನಗಳ ಕಾಲ ಈ ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ. ಕಳೆದ ಮೂರು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುತ್ತಿದ್ದು ಜನ ಜೀವನ ತತ್ತರಿಸುವಂತಾಗಿದೆ.

ಅದೇ ರೀತಿ ಮಲೆನಾಡು ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲೂ ಹೆಚ್ಚಿನ ಮಳೆಯಾಗುತ್ತಿದೆ. ಕರಾವಳಿ ಭಾಗದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯು ಆರೇಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಲಕ್ಷಣಗಳಿದ್ದು, ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಆಗಾಗ್ಗೆ ಮೇಲೈ ಬಲವಾದ ಗಾಳಿ ಸಹಿತ ಮಳೆಯಾಗಲಿದೆ. ಉಳಿದಂತೆ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಚದುರಿದಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಆಗಾಗ್ಗೆ ಮೇಲೈ ಗಾಳಿ ಬೀಸಲಿದ್ದು, ಭಾರಿ ಮಳೆಯಾಗುವ ಮುನ್ಸೂಚನೆಗಳಿಲ್ಲ.

ಜೂನ್‌ ತಿಂಗಳಲ್ಲಿ ಮುಂಗಾರು ದುರ್ಬಲಗೊಂಡ ಪರಿಣಾಮ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆಯಾಗಿದೆ. ಆದರೆ, ಜುಲೈ ತಿಂಗಳ ಮೊದಲ ವಾರದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಚೇತರಿಸಿಕೊಂಡಿದ್ದು, ವಾಡಿಕೆ ಪ್ರಮಾಣದ ಮಳೆಯಾಗುತ್ತಿದೆ. ಒಳನಾಡಿನಲ್ಲಿ ಮುಂಗಾರು ದುರ್ಬಲಗೊಂಡಿರುವ ಪರಿಣಾಮ ವಾಡಿಕೆ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಇದರಿಂದ ಬಿತ್ತನೆ ಮಾಡಲು ರೈತರು ಉತ್ತಮ ಮಳೆಯನ್ನೇ ಎದುರು ನೋಡುತ್ತಿದ್ದಾರೆ.

ಮಲೆನಾಡು ಭಾಗದಲ್ಲಿ ಮುಂಗಾರು ಚುರುಕಾಗಿರುವುದರಿಂದ ನೀರಿಲ್ಲದೆ, ಬರಿದಾಗುತ್ತಿದ್ದ ಪ್ರಮುಖ ನದಿ ಹಾಗೂ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ತುಸು ಸಮಾಧಾನ ತಂದಿದೆ. ಇದೇ ರೀತಿ ಮಳೆ ಮುಂದುವರೆದರೆ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಲಿದೆ. ಮುಂಗಾರು ಮಳೆ ಕೊರತೆಯಾಗಿರುವ ಬಹುತೇಕ ಕಡೆಗಳಲ್ಲಿ ಬರದ ಛಾಯೆ ಆವರಿಸತೊಡಗಿದೆ. ಕೃಷಿ ಇಲಾಖೆ ಪರ್ಯಾಯ ಹಾಗೂ ಅಲ್ಪಾವಧಿ ಬೆಳೆ ಬೆಳೆಯಲು ರೈತರಿಗೆ ಸಲಹೆ ಮಾಡಿದ್ದು, ಬರ ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಡಳಿತಗಳಿಗೆ ಕಂದಾಯ ಇಲಾಖೆ ನಿರ್ದೇಶನ ನೀಡಿದೆ.

RELATED ARTICLES
spot_img

Latest News