ಹೈದರಾಬಾದ್,ಆ.23- ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದ ವೇಳೆ ಕೆಲ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಗಾಯಗೊಂಡಿದ್ದಾರೆ. ಆಗಸ್ಟ್ 26ರಂದು ಟಾಕ್ಸಿಕ್ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಬೃಹತ್ ಪ್ರೀ-ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯಶ್ ವೇದಿಕೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ವೇದಿಕೆ ಸಮೀಪದಲ್ಲಿದ್ದ ಬೃಹತ್ ಸೌಂಡ್‌ಬಾಕ್ಸ್ ಹಾಗೂ ಫ್ಲಡ್‌ಲೈಟ್ ಕಂಬ ಏಕಾಏಕಿ ಕುಸಿದುಬಿದ್ದಿದೆ. ಪರಿಣಾಮ, ಅಲ್ಲಿದ್ದ ಕೆಲವು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳಿಗೆ ಗಾಯಗಳಾಗಿವೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎನ್ನಲಾಗಿದೆ.
ಗಾಯಾಳುಗಳನ್ನು ಕೂಡಲೇ ಆಂಬುಲೆನ್ಸ್ ಗಳ ಮೂಲಕ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆನೀಡಲಾಗಿದೆ. ಗಾಯಗೊಂಡವರ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ದುರ್ಘಟನೆ ಸಂಭವಿಸುತ್ತಿದ್ದಂತೆಯೇ ವೇದಿಕೆಯಲ್ಲಿದ್ದ ಯಶ್ ತಮ ಮಾತನ್ನು ನಿಲ್ಲಿಸಿ ಕಳವಳ ವ್ಯಕ್ತಪಡಿಸಿದರು. ಗಾಯಗೊಂಡ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದ ಅವರು, ಪ್ರೇಕ್ಷಕರು ಶಾಂತವಾಗಿ ಕುಳಿತುಕೊಳ್ಳುವಂತೆ ಹಾಗೂ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.
ಆಯೋಜಕರಿಂದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡ ಯಶ್, ಕಾರ್ಯಕ್ರಮದಲ್ಲಿ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದರು ಎನ್ನಲಾಗಿದೆ.
ವೇದಿಕೆಯ ಸಮೀಪಕ್ಕೆ ತೆರಳಲು ಕೆಲ ವಿದ್ಯಾರ್ಥಿಗಳು ಸೌಂಡ್‌ಬಾಕ್‌್ಸಗಳು ಹಾಗೂ ಇತರ ಉಪಕರಣಗಳನ್ನು ಅಳವಡಿಸಿದ್ದ ಕಂಬಗಳನ್ನು ಹತ್ತಲು ಯತ್ನಿಸಿದ್ದರಿಂದ ಅವು ಕುಸಿದಿರಬಹುದು ಎಂದು ಹೇಳಲಾಗಿದೆ.
ಘಟನೆಗೂ ಮುನ್ನವೇ ಜನಸಂದಣಿ ನಿಯಂತ್ರಿಸಲು ಪೊಲೀಸರು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳನ್ನು ಹಿಂದೆ ಸರಿಯುವಂತೆ ಸೂಚಿಸಿದ್ದರು. ಆದರೆ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಜನದಟ್ಟಣೆ ನಿಯಂತ್ರಿಸುವುದು ಸವಾಲಾಗಿತ್ತು ಎನ್ನಲಾಗಿದೆ.
