ಮೀರತ್,ಜು.4-ಉತ್ತರ ಪ್ರದೇಶದ ಮೀರತ್ ಮತ್ತು ಸಹಾರನ್ಪುರ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಬ್ಬ ಯುವತಿ ಮತ್ತು ಒಬ್ಬ ವ್ಯಕ್ತಿ ಹತ್ಯೆಯಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೀರತ್ನ ಲೋಹಿಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಾಕಿರ್ ಕಾಲೋನಿಯಲ್ಲಿ ಅಫ್ಶಾ (23)ಎಂಬಾತ ತನ್ನ ಸಹೋದರಿ ಅಕ್ಸಾ(21) ಮಲಗಿದ್ದಾಗ ದೇಶೀ ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಅಕ್ಸಾಳನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಫಲಕಾರಿಯಾಗದೆ ಮೃತಪಟ್ಟರು.ಆಸ್ಪತ್ರೆಯಿಂದ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಬಳಸಲಾಗಿದೆ ಎನ್ನಲಾದ ದೇಶೀ ಪಿಸ್ತೂಲ್ನನ್ನೂ ವಶಪಡಿಸಿಕೊಂಡಿದ್ದಾರೆ.
ಕೊತ್ವಾಲಿ ವಲಯದ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಅವರ ಪ್ರಕಾರ, ತನ್ನ ಸಹೋದರಿಯ ನಡತೆ ಸರಿಯಿಲ್ಲ ಎಂಬ ಅನುಮಾನದಿಂದಲೇ ಆಕೆಯನ್ನು ಕೊಂದಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಪ್ರಕರಣದ ಎಲ್ಲ ಆಯಾಮಗಳ ಕುರಿತು ತನಿಖೆ ಮುಂದುವರಿದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ, ಸಹಾರನ್ಪುರದ ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ನವಾಡಾ ರಸ್ತೆಯ ಸನ್ಶೈನ್ ಶಾಲೆ ಸಮೀಪದ ಬಾಡಿಗೆ ಮನೆಯಲ್ಲಿ ರಾತ್ರಿ 50,000 ಸಾಲದ ಹಣವನ್ನು ಹಿಂತಿರುಗಿಸುವ ವಿಚಾರವಾಗಿ ಉಂಟಾದ ಜಗಳದಲ್ಲಿ ಸುರೇಂದ್ರ (40)ಎಂಬಾತನನ್ನು ಆತನ ಸಂಬಂಧಿ ಅನುಜ್ ಮರದ ಹಲಗೆಯಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಪುರ ಗ್ರಾಮದ ನಿವಾಸಿಯಾಗಿದ್ದ ಸುರೇಂದ್ರ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆತ ತನ್ನ ಸಂಬಂಧಿ ಅನುಜ್ಗೆ 50,000 ಸಾಲ ನೀಡಿದ್ದನು.
ಕಳೆದ ರಾತ್ರಿ ಇಬ್ಬರೂ ಮದ್ಯಪಾನ ಮಾಡಿದ ಬಳಿಕ ಸಾಲ ಮರುಪಾವತಿ ವಿಚಾರವಾಗಿ ವಾಗ್ವಾದ ನಡೆದಿದೆ. ಈ ವೇಳೆ ಅನುಜ್ ಮರದ ಹಲಗೆಯಿಂದ ಸುರೇಂದ್ರನ ತಲೆ ಹಾಗೂ ದೇಹಕ್ಕೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.ಗಾಯಗೊಂಡಿದ್ದ ಸುರೇಂದ್ರನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.ಆರೋಪಿ ಅನುಜ್ನನ್ನು ಬಂಧಿಸಿರುವ ಪೊಲೀಸರು, ಹಲ್ಲೆಗೆ ಬಳಸಲಾಗಿದೆ ಎನ್ನಲಾದ ಮರದ ಹಲಗೆಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
