ದೊಡ್ಡಬಳ್ಳಾಪುರ, ಜು.9- ಹಾಲು ಮತ್ತು ಪೆಟ್ರೋಲ್ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಎರಡು ವಾಹನಗಳಿಗೂ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಭಾರೀ ಅನಾಹುತ ತಪ್ಪಿದೆ.
ತಾಲ್ಲೂಕಿನ ಮಲ್ಲೋಹಳ್ಳಿ ಕಾಲೋನಿ ಗೇಟ್ ಸಮೀಪ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದೆ. ಎರಡೂ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿಯಾಗಿ ನಂತರ ಪೆಟ್ರೋಲ್ ಟ್ಯಾಂಕರ್ ಮರಕ್ಕೆ ಗುದ್ದಿದೆ. ಈ ವೇಳೆ ಕ್ಷಣಾರ್ಧದಲ್ಲೇ ಎರಡೂ ವಾಹನಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದಿವೆ.
ಪೆಟ್ರೋಲ್ ಟ್ಯಾಂಕರ್‌ಗೆ ಬೆಂಕಿ ತಗುಲಿದ ಪರಿಣಾಮ ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಇತರ ವಾಹನ ಸವಾರರಿಗೂ ಭಾರೀ ತೊಂದರೆಯಾಗಿ ಕೆಲಕಾಲ ಸಂಚಾರ ಅಸ್ತವ್ಯವಸ್ತಗೊಂಡಿತ್ತು. ಎರಡೂ ಟ್ಯಾಂಕರ್‌ಗಳ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾವಿರಾರು ಲೀಟರ್ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಬೆಂಕಿಯಿಂದ ಸ್ಫೋಟಗೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹತ್ತಿರ ಕೂಡ ಹೋಗದಷ್ಟು ಬೆಂಕಿಯ ಕೆನ್ನಾಲಿಗೆಯ ತೀವ್ರತೆ ಹೆಚ್ಚಾಗಿತ್ತು. ಹರಸಾಹಸ ಪಟ್ಟು ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಒಟ್ಟಾರೆ ಇಂದು ಹಾಲು ಮತ್ತು ಪೆಟ್ರೋಲ್ ಟ್ಯಾಂಕರ್‌ಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದು, ಭಾರೀ ಅನಾಹುತ ಸಂಭವಿಸಿಲ್ಲ.ದೊಡ್ಡಬೆಳವಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
