ಬೆಂಗಳೂರು, ಜು.10- ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಕಾಂಗ್ರೆಸ್ ವಲಯದಲ್ಲಿ ಅಸಹನೆ ಹಾಗೂ ಚಡಪಡಿಕೆಗಳು ಶುರುವಾಗಿವೆ.ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಸರ್ಕಾರದ ಬುಡ ಅಲುಗಾಡಲಿದೆ ಎಂದು ವಿರೋಧ ಪಕ್ಷಗಳು ಭವಿಷ್ಯ ನುಡಿದಿವೆ. ಅದನ್ನು ತಳ್ಳಿಹಾಕುವ ಬದಲಾಗಿ ಮೂರ್ನಾಲ್ಕು ದಿನ ಗೊಂದಲಗಳಾಗುವುದು ನಿಜ ಎಂದು ಸಚಿವ ಸತೀಶ್ ಜಾರಕಿಹೊಳಿಯವರೇ ಒಪ್ಪಿಕೊಂಡಿದ್ದಾರೆ. ಬುಡ ಅಲುಗಾಟದ ಭಯದಿಂದಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಿದ್ದಾರೆಯೇ ಎಂಬ ಅನುಮಾನಗಳು ಕಾಡಲಾರಂಭಿಸಿವೆ.
ಸಿದ್ದರಾಮಯ್ಯಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಜೂನ್ 3ರಂದು ಡಿ.ಕೆ.ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರೊಂದಿಗೆ 13 ಸಚಿವರು ಸಂಪುಟ ಸೇರಿದ್ದಾರೆ.
ಸುಮಾರು 16 ಪ್ರಮುಖ ಇಲಾಖೆಗಳಿಗೆ ಸಚಿವರ ನಿಯೋಜನೆಯಾಗಿದೆ. ಉಳಿದಂತೆ ಬಹುತೇಕ ಇಲಾಖೆಗಳು ಮುಖ್ಯಮಂತ್ರಿಯವರ ವ್ಯಾಪ್ತಿಯಲ್ಲೇ ಇವೆ. ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಕೃಷಿ, ಸಹಕಾರ, ತೋಟಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅರಣ್ಯ ಸೇರಿದಂತೆ ಪ್ರಮುಖ ಇಲಾಖೆಗಳಿಗೆ ಸಚಿವರಿಲ್ಲ.
ಶೈಕ್ಷಣಿಕ ವರ್ಷ ಆರಂಭವಾಗಿದ್ದು, ನಾನಾ ರೀತಿಯ ಸಮಸ್ಯೆಗಳು ಪೋಷಕರನ್ನು ಕಾಡುತ್ತಿವೆ. ಕೃಷಿ ಚಟುವಟಿಕೆಗಳ ವಿಚಾರದಲ್ಲೂ ಹಲವಾರು ಸಮಸ್ಯೆಗಳಿವೆ. ಇದರ ಬಗ್ಗೆ ಗಮನ ಹರಿಸಲು ಸಚಿವರಿಲ್ಲದೇ ಇರುವುದು ಸಮಸ್ಯೆಗೆ ಕಾರಣವಾಗಿದೆ.
ಜುಲೈ 10ರಂದು ಎಂದರೆ ಇಂದು ಸಚಿವ ಸಂಪುಟ ವಿಸ್ತರಣೆಯಾಗಬಹುದು ಎಂದು ಹೇಳಲಾಗಿತ್ತು. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ವಿದೇಶ ಪ್ರವಾಸದಲ್ಲಿರುವುದರಿಂದ ಅವರೊಂದಿಗೆ ಚರ್ಚೆ ಸಾಧ್ಯವಾಗಿಲ್ಲ. ಸಂಪುಟ ವಿಸ್ತರಣೆಯೂ ಮತ್ತಷ್ಟು ಮುಂದೂಡಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಜುಲೈ 14ರಿಂದ ಆಷಾಢ ಮಾಸ ಶುರುವಾಗಲಿದೆ. ಬಹುತೇಕರು ಆಷಾಢ ಮಾಸದಲ್ಲಿ ಹೊಸ ಕೆಲಸ ಅಥವಾ ಜವಾಬ್ದಾರಿಗಳಿಗೆ ಕೈ ಹಾಕಲು ಹಿಂದೇಟು ಹಾಕುತ್ತಾರೆ. ಒಂದು ವೇಳೆ ಸಂಪುಟ ವಿಸ್ತರಣೆಯಾದರೆ, ಅವಕಾಶ ಗಿಟ್ಟಿಸುವವರು ಅರೆ ಮನಸ್ಸಿನಿಂದಲೇ ಒಪ್ಪಿಕೊಳ್ಳಬೇಕಾಗುತ್ತದೆ. ಈ ಬಾರಿಯ ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳುತ್ತಿರುವುದರಿಂದ ಮೊದಲ ಬಾರಿಗೆ ಸಚಿವರಾಗುವವರಿಗೆ ಆಷಾಢ ಇರಿಸು-ಮುರಿಸು ಉಂಟು ಮಾಡುವ ಸಾಧ್ಯತೆ ಇದೆ.
ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿ, ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ರಾಹುಲ್ಗಾಂಧಿಯವರ ಅಂಕಿತ ದೊರೆತರೆ ಸಂಪುಟ ವಿಸ್ತರಣೆ ತಕ್ಷಣವೇ ನಡೆಯಲಿದೆ ಎಂದು ಹೇಳಲಾಗುತ್ತದೆ.
ರಾಹುಲ್ ಗಾಂಧಿ ಜುಲೈ 12 ರಂದು ವಿದೇಶ ಪ್ರವಾಸದಿಂದ ಮರಳಲಿದ್ದಾರೆ. ಬಹುತೇಕ ಅಂದು ಅಥವಾ ಮಾರನೇ ದಿನ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿ ಚರ್ಚೆ ನಡೆಸುವ ಸಾಧ್ಯತೆ ಇದ್ದು, ಆಷಾಢ ಮಾಸ ಆರಂಭವಾಗುವ ಮುನ್ನವೇ ಸಂಪುಟ ವಿಸ್ತರಣೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಸಾಕಷ್ಟು ಕಸರತ್ತು ನಡೆಸುತ್ತಿರುವವರಿಗೆ ವಿಳಂಬ ನೀತಿ, ಇರಿಸು-ಮುರಿಸು ಉಂಟು ಮಾಡಿದೆ. ಈಗಾಗಲೇ 3 ವರ್ಷ ಕಳೆದುಹೋಗಿದ್ದು, ಬಾಕಿ ಉಳಿದಿರುವ 1 ವರ್ಷ 10 ತಿಂಗಳಿಗಾದರೂ ಸಚಿವರಾಗಬೇಕೆಂದು ಕಾದು ಕುಳಿತವರಿಗೆ ಇಂದು, ನಾಳೆ ಎಂದು ಮುಖಂಡರು ಕನ್ನಡಿಯ ಗಂಟು ತೋರಿಸುತ್ತಿದ್ದಾರೆ ಎಂಬ ಅಸಮಾಧಾನಗಳು ವ್ಯಕ್ತವಾಗಿವೆ.
ಆದಷ್ಟು ಶೀಘ್ರ ಸಂಪುಟ ವಿಸ್ತರಣೆಯಾಗಬೇಕು. ಪ್ರಮುಖ ಇಲಾಖೆಗಳ ಜವಾಬ್ದಾರಿ ಹಂಚಿಕೆಯಾಗಿ ಸರ್ಕಾರಿ ಕಾರ್ಯನಿರ್ವಹಣೆಗೆ ತ್ವರಿತ ಆದ್ಯತೆಗಳು ದೊರೆಯಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ.
