Homeಬೆಂಗಳೂರುಬೆಂಗಳೂರಿನ ವಾಹನ ಸವಾರರೇ ಹುಷಾರ್, ಮೊಬೈಲ್‌ ಬಳಸಿದರೆ ದಂಡ ಗ್ಯಾರಂಟಿ

ಬೆಂಗಳೂರಿನ ವಾಹನ ಸವಾರರೇ ಹುಷಾರ್, ಮೊಬೈಲ್‌ ಬಳಸಿದರೆ ದಂಡ ಗ್ಯಾರಂಟಿ

ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆಗಳು ತ್ವರಿತಗತಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ಸಂಚಾರದಟ್ಟಣೆ ಉಂಟಾಗುತ್ತಿದೆ. ಇದಲ್ಲದೆ ನಿಯಮ ಉಲ್ಲಂಘನೆ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ.ಇದರಿಂದ ಪ್ರತಿನಿತ್ಯ ಸಂಚಾರಿ ಸಮಸ್ಯೆಗಳನ್ನು ಸಮರ್ಪಕವಾಗಿ ನಿಭಾಯಿಸಲು ಬೆಂಗಳೂರು ನಗರ ಸಂಚಾರಿ ಪೊಲೀಸರಿಗೆ ದೊಡ್ಡ ಸವಾಲಾಗಿದೆ.

ಇದರ ಜೊತೆಗೆ ಬಹುತೇಕ ವಾಹನ ಸವಾರರು/ಚಾಲಕರು ಸಂಚಾರ ನಿಯಮಗಳನ್ನು ಪ್ರತಿದಿನ ಉಲ್ಲಂಘನೆ ಮಾಡುತ್ತಿರುವುದರಿಂದ ಪ್ರಕರಣಗಳ ಸಂಖ್ಯೆಯೂ ಸಹ ಹೆಚ್ಚಾಗುತ್ತಿವೆ.
ಸಂಚಾರಿ ನಿಯಮಗಳ ಉಲ್ಲಂಘನೆ ಯನ್ನು ತಡೆಗಟ್ಟಲು ಸಂಚಾರಿ ಪೊಲೀಸರು ಇಂಟಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (ಐಟಿಎಂಎಸ್‌‍) ನ ಭಾಗವಾದ ಸ್ವಯಂಚಾಲಿತ ಚಲನಾ ವ್ಯವಸ್ಥೆಯನ್ನು ಈಗಾಗಲೇ ನಗರದ ಬಹುತೇಕ ಸ್ಥಳ/ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದ್ದು, ಅವುಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.

ಸಂಚಾರ ನಿಯಮ ಉಲ್ಲಂಘನೆಯ ಶೇ.97 ರಷ್ಟು ಪ್ರಕರಣಗಳನ್ನು ನವೀನ ತಂತ್ರಜ್ಞಾನದ ಬಳಕೆಯಿಂದ ಬೆಂಗಳೂರು ನಗರ ಸಂಚಾರಿ ಪೊಲೀಸರು ದಾಖಲಿಸುತ್ತಿದ್ದಾರೆ.
ಈಗಾಗಲೇ ಸಾರ್ಟ್‌ ಸಿಟಿ ಹಾಗೂ ಇತರೆ ಯೋಜನೆಗಳಲ್ಲಿ ಅಳವಡಿಸಿರುವ ಕಣ್ಗಾವಲು ಕ್ಯಾಮೆರಾಗಳನ್ನು ಬಳಸಿ ಕೊಂಡು ಸಂಪರ್ಕರಹಿತ ನಿಯಮ ಜಾರಿ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ. ಡಿಜಿಟಲ್‌ ಕ್ಯಾಮೆರಾಗಳು, ಮೊಬೈಲ್‌ ಫೋನ್‌ಗಳಿಂದ ಛಾಯಾಚಿತ್ರವನ್ನು ಸೆರೆಹಿಡಿದು ಸಂಚಾರ ನಿಯಮ ಉಲ್ಲಂಘನೆಯ ಚಲನ್‌ಗಳನ್ನು ವಿತರಿಸುವುದು ಹಾಗೂ ಸಂಬಂಧಪಟ್ಟ ವಾಹನಗಳ ಮಾಲೀಕರಿಗೆ ಅಂಚೆಯ ಮೂಲಕ ದಂಡ ಪಾವತಿಗೆ ನೋಟೀಸ್‌‍ ಕಳುಹಿಸಲಾಗುತ್ತಿದೆ.

ಸಂಚಾರಿ ನಿಯಮ ಉಲ್ಲಂಘನೆಗಳ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಫೀಲ್‌್ಡ ಟ್ರಾಫಿಕ್‌ ವಯಲೇಷನ್‌ ವರದಿ (ಎಫ್‌ಟಿಐಆರ್‌) ಡಿಜಿಟಲ್‌ ತಂತ್ರಾಂಶವನ್ನು ಹೊಸದಾಗಿ ಬಿಟಿಪಿ ಅಸ್ರಂ ಆ್ಯಪ್‌ ಮೂಲಕ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಜಾಲಹಳ್ಳಿ ಸಂಚಾರಿ ಠಾಣೆ ಪೊಲೀಸರು 2024ರಲ್ಲಿ 83, 2025 ರಲ್ಲಿ 640, 2026 ರ ಮೇವರೆಗೆ 53 ಪ್ರಕರಣ ದಾಖಲಿಸಿಕೊಂಡು, 2024ರಲ್ಲಿ 99,400 ರೂ. 2025ರಲ್ಲಿ 3,88,400 ರೂ. ಹಾಗೂ ಈ ವರ್ಷದ ಮೇ ವರೆಗೆ 69,000 ರೂ. ದಂಡ ವಿಧಿಸಿದ್ದಾರೆ.ಜ್ಞಾನಭಾರತಿ ಸಂಚಾರಿ ಠಾಣೆ ಪೊಲೀಸರು 2025 ರಲ್ಲಿ 1646 ಪ್ರಕರಣ ದಾಖಲಿಸಿಕೊಂಡು 16,46,000 ರೂ. ಹಾಗೂ ಈ ವರ್ಷದ ಮೇವರೆಗೆ 464 ಪ್ರಕರಣ ದಾಖಲಿಸಿಕೊಂಡು 6,96,000 ರೂ. ದಂಡ ವಿಧಿಸಿದ್ದಾರೆ.

ಮಡಿವಾಳ ಸಂಚಾರಿ ಠಾಣೆ ಪೊಲೀಸರು 2024ರಲ್ಲಿ 148, 2025ರಲ್ಲಿ 862, ಈ ವರ್ಷದ ಮೇ ಅಂತ್ಯಕ್ಕೆ 116 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಬೆಳ್ಳಂದೂರು ಠಾಣೆ ಪೊಲೀಸರು 2025ರಲ್ಲಿ 579, ಈ ವರ್ಷದ ಮೇ ಅಂತ್ಯದವರೆಗೆ 303 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದಾಶಿವ ನಗರ ಠಾಣೆ ಪೊಲೀಸರು 2024 ರಲ್ಲಿ 117, 2025 ರಲ್ಲಿ 1105, ಈ ವರ್ಷದ ಮೇವರೆಗೆ 97 ಪ್ರಕರಣಗಳನ್ನು ನೋಂದಾಯಿಸಿಕೊಂಡಿದ್ದಾರೆ.

ಈ ವರ್ಷದ ಮೇವರೆಗೆ ಎಲೆಕ್ಟ್ರಾನಿಕ್‌ ಸಿಟಿ ಸಂಚಾರಿ ಠಾಣೆ ಪೊಲೀಸರು 55, ಹಲಸೂರು 36, ಆಡುಗೋಡಿ 56, ಸಂಜಯನಗರ 66, ಎಚ್‌ಎಸ್‌‍ಆರ್‌ ಲೇಔಟ್‌ 65, ಅಶೋಕನಗರ 68, ಹೆಣ್ಣೂರು 58 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಅಂಕಿ ಅಂಶಗಳನ್ನು ನೋಡಿದರೆ ವಾಹನ ಚಾಲನೆ ಮಾಡುವಾಗ ಮೊಬೈಲ್‌ ಬಳಸುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಲ್ಲದೆ ತಿಂಗಳುಗಳಿಂದ ತಿಂಗಳುಗಳಿಗೆ ಹೆಚ್ಚಾಗುತ್ತಿದೆ.

ಸಂಚಾರಿ ನಿಯಮಗಳನ್ನು ಪಾಲಿಸದೇ, ಪ್ರಾಣ ಲೆಕ್ಕಿಸದೆ ಈ ರೀತಿ ಮೊಬೈಲ್‌ಗಳಲ್ಲಿ ಮಾತನಾಡುತ್ತಿರುವುದು ನಾಗರಿಕ ಸಮಾಜದಲ್ಲಿ ಒಳ್ಳೆಯ ಲಕ್ಷಣವಲ್ಲ.ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು, ಅಪಘಾತಗಳನ್ನು ತಗ್ಗಿಸುವುದು ಹಾಗೂ ಸಂಚಾರ ಶಿಸ್ತು ಮೂಡಿಸುವುದು ನಗರ ಸಂಚಾರಿ ಪೊಲೀಸರ ಉದ್ದೇಶವಾಗಿದೆ. ಆದುದರಿಂದ ವಾಹನ ಸವಾರರು/ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷಿತ ಸಂಚಾರಕ್ಕೆ ಸಹಕರಿಸಬೇಕೆಂದು ನಗರ ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News