Homeರಾಷ್ಟ್ರೀಯರಾಮ ಮಂದಿರದ ಹುಂಡಿ ಹಣ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ರಾಮ ಮಂದಿರದ ಹುಂಡಿ ಹಣ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಅಯೋಧ್ಯೆ,(ಉತ್ತರಪ್ರದೇಶ)ಜು.10- ದೇಶದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಅಯೋಧ್ಯೆಯಶ್ರೀರಾಮ ಮಂದಿರದ ಹುಂಡಿ ಹಣ ಕಳ್ಳತನ ಪ್ರಕರಣದಲ್ಲಿ ತನಿಖೆಗೆ ಮಹತ್ವದ ತಿರುವು ಸಿಕ್ಕಿದೆ. ಈಗಾಗಲೇ ಬಂಧಿತರಾಗಿರುವ ಎಂಟು ಆರೋಪಿಗಳ ಪೈಕಿ ನಾಲ್ವರು ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಹಗರಣವು ಕೇವಲ 500 ರೂ. ನೋಟಿನಿಂದ ಆರಂಭವಾಗಿ ಕೋಟ್ಯಂತರ ರೂ ವ್ಯವಹಾರವರೆಗೂ ತಲುಪಿದೆ.

ಕೋರ್ಟ್‌ ಅನುಮತಿ ಮೇರೆಗೆ ಜೈಲಿನಲ್ಲೇ ಆರೋಪಿಗಳಾದ ಅನುಕಲ್ಪ್ ಮಿಶ್ರಾ, ಲವಕುಶ ಮಿಶ್ರಾ ಮತ್ತು ಕರುಣೇಶ್‌ ಪಾಂಡೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದಕ್ಕೂ ಮೊದಲು ಆರೋಪಿ ಅವಿನಾಶ್‌ ಶುಕ್ಲಾ ಕೂಡ ತಪ್ಪೊಪ್ಪಿಕೊಂಡಿದ್ದ. ವಿಚಾರಣೆ ವೇಳೆ ನಾಲ್ವರೂ ಸೇರಿ ಹುಂಡಿ ಹಣ ಕಳ್ಳತನದ ಸಂಪೂರ್ಣ ಮಾಹಿತಿ ನೀಡಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ತಮ ಸಹಚರರ ಮೂಲಕ ಹೇಗೆ ಈ ದೊಡ್ಡ ಮಟ್ಟದ ಕಳ್ಳತನ ಮಾಡಿದ್ದು ಮತ್ತು ಅದರ ಹಣವನ್ನು ಹೇಗೆ ಮರೆಮಾಚಿದ್ದು ಎಂಬ ಬಗ್ಗೆ ಆರೋಪಿಗಳು ವಿವರ ನೀಡಿದ್ದಾರೆ.ತನಿಖೆಯಲ್ಲಿ ಬಯಲಾದ ವಿವರಗಳ ಪ್ರಕಾರ, ಟಿನ್ನು ಯಾದವ್‌ ಮತ್ತು ಮೇಲ್ವಿಚಾರಣೆಯಲ್ಲಿದ್ದ ಸುಭಾಷ್‌ ಶ್ರೀವಾಸ್ತವ್‌ ಅವರ ಸಹಕಾರದಿಂದ ಈ ಕಳ್ಳತನ ನಡೆಯುತ್ತಿತ್ತು. ಟಿನ್ನು ಯಾದವ್‌ ಬಳಿ ಹುಂಡಿ ಎಣಿಕೆ ಕೇಂದ್ರದ ಕೀ ಇದ್ದ ಕಾರಣ ಹಣ ಕಳವು ಮಾಡುವುದು ಸುಲಭವಾಗುತ್ತಿತ್ತು. ಆರಂಭದಲ್ಲಿ ಸ್ವಲ್ಪ ಪ್ರಮಾಣದ ಹಣ ಕದ್ದಿದ್ದ ಆರೋಪಿಗಳು, ನಂತರ ಕೋಟಿ ಕೋಟಿ ಹಣ ಎಗರಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆರಂಭದಲ್ಲಿ ಕೇವಲ 500 ರೂ. ನೋಟುಗಳಿಂದ ಆರಂಭವಾದ ಈ ಕಳ್ಳತನ ಕ್ರಮೇಣ 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ದೇಣಿಗೆ ಹಣದ ಕಳ್ಳತನಕ್ಕೆ ಕಾರಣವಾಯಿತು.ಕದ್ದ ಹಣದ ಮೂಲ ಪತ್ತೆಯಾಗದಂತೆ ಮಾಡಲು ಆರೋಪಿಗಳು ಬೇರೆ ಪ್ಲ್ಯಾನ್‌ ಮಾಡಿದ್ದರು. ಹಣವನ್ನು ತಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ನೀಡಿ, ಬಳಿಕ ವಿವಿಧ ಬ್ಯಾಂಕ್‌ ಖಾತೆಗಳ ಮೂಲಕ ವರ್ಗಾವಣೆ ಮಾಡುತ್ತಿದ್ದರು. ಹಣದ ಮೂಲವನ್ನು ಮರೆಮಾಚಲು ಈ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಇದಷ್ಟೇ ಅಲ್ಲ ತನಿಖೆ ವೇಳೆ ಮತ್ತೊಂದು ಶಾಕಿಂಗ್‌ ಮಾಹಿತಿ ಹೊರಬಿದ್ದಿದೆ. ದೇಣಿಗೆ ನೀಡಲು ಬಂದ ಭಕ್ತರಿಗೆ ನಕಲಿ ರಶೀದಿಗಳನ್ನು ನೀಡಿ ಅಲ್ಲಿಂದಲೂ ಹಣ ವಸೂಲಿ ಮಾಡಲಾಗುತ್ತಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ನಕಲಿ ರಶೀದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

30 ಬ್ಯಾಂಕ್‌ ಖಾತೆಗಳು ಫ್ರೀಜ್‌
ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಪೊಲೀಸರು ಆರೋಪಿಗಳ ಕುಟುಂಬಸ್ಥರು ಹಾಗೂ ಸ್ನೇಹಿತರ ಸುಮಾರು 30 ಬ್ಯಾಂಕ್‌ ಖಾತೆಗಳನ್ನು ಫ್ರೀಜ್‌ ಮಾಡಿದ್ದಾರೆ. ಈ ಖಾತೆಗಳಲ್ಲಿನ ಹಣದ ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದ್ದು, ಆದಾಯಕ್ಕಿಂತ ಹೆಚ್ಚು ಮೊತ್ತದ ವ್ಯವಹಾರಗಳು ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಸಂಪೂರ್ಣ ಹಣವನ್ನು ಮರಳಿ ಪಡೆಯುವ ಪ್ರಯತ್ನ ನಡೆಯುತ್ತಿದೆ.

ಈ ಮಧ್ಯೆ, ಪ್ರಕರಣದ ಪ್ರಮುಖ ಆರೋಪಿ ಅವಿನಾಶ್‌ ಮಿಶ್ರಾ ವೈಯಕ್ತಿಕ ಬದುಕಿನ ಮೇಲೂ ಈ ಪ್ರಕರಣ ಪರಿಣಾಮ ಬೀರಿದೆ. ಕದ್ದ ಹಣದಲ್ಲಿ ತನ್ನ ನಿಶ್ಚಿತಾರ್ಥದ ಯುವತಿಗೆ ಐಫೋನ್‌ (ಟಿ) ಉಡುಗೊರೆಯಾಗಿ ನೀಡಿದ್ದ ಹಾಗೂ ಆಕೆಯ ಖಾತೆಗೆ ಎರಡು ಲಕ್ಷ ರೂಪಾಯಿಗೂ ಹೆಚ್ಚು ಹಣ ವರ್ಗಾವಣೆ ಮಾಡಿದ್ದ ಆರೋಪ ಕೇಳಿಬಂದಿದೆ. ಈ ವಿಚಾರದ ಬಳಿಕ ಯುವತಿಯ ಕುಟುಂಬ ಮದುವೆಯನ್ನು ರದ್ದುಪಡಿಸಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News