ಬೆಂಗಳೂರು,ಜು.10- ರಾಜ್ಯ ಸರ್ಕಾರ ಅಕ್ರಮ ಬಾಂಗ್ಲಾ ವಲಸಿಗರನ್ನು ರಕ್ಷಿಸುವ ಏಕೈಕ ಉದ್ದೇಶದಿಂದಲೇ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಮುಂದಾಗಿದ್ದು, ಇದು ಅಕ್ರಮ ವಲಸಿಗರಿಗೆ ಅನುಕೂಲ ಮಾಡಿಕೊಡಲು ರೂಪಿಸಿರುವ ಷಡ್ಯಂತ್ರ ಎಂದು ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಬಾಂಗ್ಲಾದಿಂದ ಬಂದ ಅಕ್ರಮ ವಲಸಿಗರನ್ನು ರಕ್ಷಿಸಲು ಶಾಶ್ವತ ನಿವಾಸಿಪತ್ರ ಯೋಜನೆ ಆರಂಭಿಸಿದೆ. ಸಂವಿಧಾನದ 14ನೇ ವಿಧಿಯ ಪ್ರಕಾರ ದೇಶದಲ್ಲಿ ಒಂದು ದೇಶ, ಒಂದು ಪೌರತ್ವೞ ನಿಯಮವಿದ್ದರೂ ಅದಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ಈ ಪ್ರಮಾಣಪತ್ರಗಳನ್ನು ವಿತರಿಸುತ್ತಿರುವುದು ಸಂವಿಧಾನ ಮತ್ತು ಕಾನೂನು ಬಾಹಿರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮೈಸೂರು ಮತ್ತು ಗೋವಿಂದರಾಜನಗರ ಸೇರಿದಂತೆ ವಿವಿಧೆಡೆ ಎನ್ಯುಮರೇಷನ್ ಫಾರ್ಮ್‌ಗಳನ್ನು 50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಸುಶಿಕ್ಷಿತರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು, ಅಕ್ರಮ ವಲಸಿಗರನ್ನು ಸೇರಿಸಿ ಮತಗಳ್ಳತನ ಮಾಡಲು ಸರ್ಕಾರ ದಾರಿ ಹುಡುಕುತ್ತಿದೆ ಎಂದು ದೂರಿದರು.
ಈ ಅಧಿಸೂಚನೆಯು ದೇಶದ ಆಂತರಿಕ ಭದ್ರತೆಗೆ ದೊಡ್ಡ ಸವಾಲಾಗಿದೆ. ಅಕ್ರಮ ವಲಸಿಗರ ಹಾವಳಿಯಿಂದ ಈ ಹಿಂದೆ ರಾಜ್ಯದಲ್ಲಿ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳಾಗಿವೆ. ಇಂತಹ ಸಂದರ್ಭದಲ್ಲಿ ಇವರಿಗೆ ಮಣೆ ಹಾಕುವುದು ದೇಶದ್ರೋಹದ ಕೆಲಸ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರದ ಈ ನಡೆಯನ್ನು ವಿರೋಧಿಸಿ ನಾನು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದೇನೆ. ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ನೀಡಲು ಸಂಸತ್ತಿನಲ್ಲಾಗಲಿ ಅಥವಾ ಸಂವಿಧಾನದಲ್ಲಾಗಲಿ ಯಾವುದೇ ಅವಕಾಶ ಇಲ್ಲ. ಡಿ.ಕೆ. ಶಿವಕುಮಾರ್ ಅವರು ತಾವೇ ಕಾನೂನು ಎಂಬಂತೆ ವರ್ತಿಸುತ್ತಿದ್ದು, ಹೈಕಮಾಂಡ್ ಬೆಂಬಲವಿದೆ ಎಂಬ ಅಹಂಕಾರದಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸರ್ಕಾರಕ್ಕೆ ಬಹುಸಂಖ್ಯಾತರ ಹಿತಾಸಕ್ತಿ ಮುಖ್ಯವಲ್ಲ, ಕೇವಲ ಮತಬ್ಯಾಂಕ್ ಮುಖ್ಯವಾಗಿದೆ. ಅಕ್ರಮ ವಲಸಿಗರನ್ನು ಓಲೈಸುವ ಮೂಲಕ ದೇಶದ ಭದ್ರತೆಯನ್ನು ಪಣಕ್ಕಿಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾಗಿ ಕೆಲಸ ಮಾಡುವ ಬದಲು ಆರ್‌ಎಸ್‌ಎಸ್ ಕುರಿತೇ ಚಿಂತಿಸುತ್ತಿದ್ದಾರೆ. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಕೊಲೆ ಮತ್ತು ಡ್ರಗ್‌್ಸ ದಂಧೆ ಬಗ್ಗೆ ಅವರಿಗೆ ಕಳಕಳಿಯಿಲ್ಲ. ತಮ ಸ್ಥಾನ ಉಳಿಸಿಕೊಳ್ಳಲು ಅವರು ಆರೆಸ್ಸೆಸ್ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಸರ್ಕಾರ ಆಡಳಿತ ನಡೆಸುತ್ತಿಲ್ಲ, ಬದಲಾಗಿ ವಿಧಾನಸೌಧವು ಕೇವಲ ಕಾಂಗ್ರೆಸ್‌ನ ಅಡ್ಡೆಯಾಗಿ ಬದಲಾಗಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಸಿಸಿಟಿವಿ ಅಳವಡಿಸುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಸಚಿವೆ ಶೋಭಾ ಕರಂದ್ಲಾಜೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಸುದ್ದಿಗೋಷ್ಠಿಯಲ್ಲಿ ಪರಿಷತ್ ಸದಸ್ಯ ಲಿಂಗರಾಜ್ ಪಾಟೀಲ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಹಾಗೂ ಹರೀಶ್ ಉಪಸ್ಥಿತರಿದ್ದರು.
