ಬೆಂಗಳೂರು, ಜು.10- ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ಸಭೆ ನಡೆಸಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳು, ಸಮನ್ವಯ ಸಮಿತಿ ರಚನೆ, ಮುಂಬರುವ ಚುನಾವಣೆಗಳ ಸಿದ್ಧತೆ, ಪ್ರಚಲಿತ ರಾಜಕೀಯ ವಿದ್ಯಮಾನಗಳು, ಎಸ್‌ಐಆರ್ ಪ್ರಕ್ರಿಯೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಇಬ್ಬರೂ ನಾಯಕರು ಮಹತ್ವದ ಚರ್ಚೆ ನಡೆಸಿದ್ದಾರೆ.
ಇಂದು ಬೆಳಿಗ್ಗೆ ಖಾಸಗಿ ಹೋಟೆಲ್‌ನಲ್ಲಿ ಇವರಿಬ್ಬರೂ ಪ್ರತ್ಯೇಕವಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಬಹುದಿನಗಳ ಬೇಡಿಕೆಯಾಗಿರುವ ಬಿಜೆಪಿ-ಜೆಡಿಎಸ್ ನಡುವೆ ಸಮನ್ವಯ ಸಮಿತಿ ರಚನೆ ಮಾಡುವ ರೂಪುರೇಷೆ ಬಗ್ಗೆ ಚರ್ಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಸ್ಪರ್ಧೆ ಮಾಡುವ ಬಗ್ಗೆಯೂ ಚರ್ಚೆ ನಡೆಸಿದ್ದು, ಗೆಲುವು-ಸೋಲಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇತ್ತೀಚೆಗೆ ಆರಂಭವಾಗಿರುವ ಎಸ್‌ಐಆರ್ ಪ್ರಕ್ರಿಯೆಯ ದುರ್ಬಳಕೆ ತಡೆಯುವ
ಕುರಿತಂತೆ ಈಗಾಗಲೇ ಜಂಟಿಯಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದು, ರಾಜ್ಯಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ನಡೆಸುವ ಕುರಿತಂತೆಯೂ ಸಮಾಲೋಚನೆ ನಡೆಸಿದ್ದಾರೆ.
ಜಿಬಿಎ ವ್ಯಾಪ್ತಿಯ ನಗರಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧೆಗಿಳಿಯುವ ಬಗ್ಗೆಯೂ ಗಂಭೀರ ಚರ್ಚೆ ನಡೆಸಿದ್ದಾರೆ.
ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಎರಡೂ ಪಕ್ಷಗಳಲ್ಲಿ ಅಡ್ಡಮತದಾನವಾಗಿರುವುದು ಆನಂತರ ಪಕ್ಷದ ಆಂತರಿಕವಾಗಿ ಆಗಿರುವ ಬದಲಾವಣೆಗಳು , ಮುಂದೆ ಮೈತ್ರಿಯನ್ನು ಗಟ್ಟಿಗೊಳಿಸಲು ಉಭಯ ಪಕ್ಷಗಳಲ್ಲಿ ಆಗಬೇಕಾಗಿರುವ ಮಾರ್ಪಾಡುಗಳು ಸೇರಿದಂತೆ ಹಲವು ವಿಚಾರದ ಬಗ್ಗೆ ಸಮಾಲೋಚನೆ ನಡೆಸಿ ಪರಸ್ಪರ ಸಹಕಾರದಿಂದ ಮುನ್ನಡೆಯುವ ಬಗ್ಗೆ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಇಬ್ಬರೂ ನಾಯಕರು ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲವನ್ನು ಕೆರಳಿಸಿದೆ.
