ಬೆಂಗಳೂರು, ಜು.10- ಎನ್ಡಿಎ ಮೈತ್ರಿಕೂಟದ ಮಿತ್ರ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಶೀಘ್ರವೇ ರಚನೆಯಾಗಲಿದೆ.ಉಭಯ ಪಕ್ಷಗಳ ನಾಯಕರು ಸಮನ್ವಯ ಸಮಿತಿ ರಚನೆಗೆ ತೀರ್ಮಾನಿಸಿದ್ದಾರೆ. ಸಮಿತಿಯಲ್ಲಿ ಎರಡೂ ಪಕ್ಷಗಳ ನಾಯಕರು ಸದಸ್ಯರಾಗಿರಲಿದ್ದಾರೆ. ಮೈತ್ರಿ ಮತ್ತಷ್ಟು ಗಟ್ಟಿಯಾಗಲು ಈ ಸಮಿತಿಯ ಅಗತ್ಯವೂ ಇತ್ತು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಹೊಸದಾಗಿ ರಚನೆಯಾಗಲಿರುವ ಸಮನ್ವಯ ಸಮಿತಿಯ ಮೊದಲ ಸಭೆಯೂ ಸದ್ಯದಲ್ಲೇ ನಡೆಯಲಿದ್ದು, ರಾಜ್ಯ ಸರ್ಕಾರದ ವಿರುದ್ಧ ಜಂಟಿ ಹೋರಾಟ, ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳು, ಜಿಲ್ಲಾ, ತಾಲ್ಲೂಕು ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮುಂದುವರೆಸುವ ಬಗ್ಗೆಯೂ ಗಂಭೀರ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಎರಡೂ ಪಕ್ಷಗಳ ನಡುವೆ ಮೈತ್ರಿಯಾದ ನಂತರ ಸಮನ್ವಯ ಸಮಿತಿ ರಚನೆಯಾಗಬೇಕು ಎಂಬ ಒತ್ತಾಯವನ್ನು ಮಾಡಲಾಗುತ್ತಿತ್ತು. ಪರಸ್ಪರ ಸಮನ್ವಯವಿಲ್ಲದಿದ್ದರೆ, ಅಸಮಾಧಾನಕ್ಕೆ ಕಾರಣವಾಗುತ್ತದೆ. ತಳಮಟ್ಟದಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಸಮನ್ವಯ ಸಮಿತಿ ಅಗತ್ಯ ಎಂದು ಜೆಡಿಎಸ್-ಬಿಜೆಪಿ ನಾಯಕರು, ಮುಖಂಡರು ಪ್ರತಿಪಾದಿಸಿದ್ದರು.
ಈಗ ಚುನಾವಣೆಗಳು ಹತ್ತಿರವಾಗುತ್ತಿರುವುದರಿಂದ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಸಮನ್ವಯ ಸಮತಿ ರಚಿಸಲಾಗುತ್ತದೆ. ಈ ಸಮಿತಿ ಎರಡೂ ಪಕ್ಷಗಳ ನಡುವೆ ಅಸಮಾಧಾನ ಉಂಟಾಗದಂತೆ ಕ್ರಮ ಕೈಗೊಳ್ಳಲಿದೆ. ಅಲ್ಲದೆ. ಸಂಘಟಿತವಾಗಿ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಕಾಂಗ್ರೆಸ್ ವಿರುದ್ಧ ಕೈಗೊಳ್ಳಲಿರುವ ಹೋರಾಟದ ರೂಪುರೇಷೆಯ ಬಗ್ಗೆ ಚರ್ಚೆಸಿ ನಿರ್ಣಯ ಕೈಗೊಳ್ಳಲಾಗುತ್ತದೆ.
ಜಂಟಿ ಹೋರಾಟದ ಸ್ಥಳ, ದಿನಾಂಕ, ಸಮಯದ ಬಗ್ಗೆ ಸಮಿತಿ ನಿರ್ಣಯ ಮಾಡುತ್ತದೆ. ಎಸ್ಐಆರ್ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಅಕ್ರಮಕ್ಕೆ ಅವಕಾಶ ನೀಡುತ್ತಿದೆ ಎಂದು ಆರೋಪಿಸಿ ಇತ್ತೀಚೆಗಷ್ಟೇ ಭಾರತೀಯ ಚುನಾವಣಾ ಆಯೋಗಕ್ಕೆ ಉಭಯ ಪಕ್ಷಗಳ ನಾಯಕರು ದೂರು ನೀಡಿದ್ದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನವಾದ ಬಳಿಕ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಗಟ್ಟಿಯಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯಾದ ನಂತರ ಸದನದ ಒಳ-ಹೊರಗೆ ಹಲವು ಹೋರಾಟಗಳನ್ನು ಜಂಟಿಯಾಗಿ ಮಾಡಿವೆ. ಪಕ್ಷ ಸಂಘಟನೆ ಪ್ರತ್ಯೇಕವಾಗಿ ಮಾಡುತ್ತಿರುವಂತೆ ಕೆಲವು ಹೋರಾಟಗಳನ್ನು ಪ್ರತ್ಯೇಕವಾಗಿ ಮಾಡಿದ್ದವು. ಆಗ ಮೈತ್ರಿಯ ಬಗ್ಗೆ ಕೆಲವರು ಪರಸ್ಪರ ಆರೋಪ, ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದರು. ವಿಧಾನ ಪರಿಷತ್ ಚುನಾವಣೆಯ ನಂತರ ಉಭಯ ಪಕ್ಷಗಳ ಒಟ್ಟಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಲು ಅಣಿಯಾಗಿವೆ. ಅದಕ್ಕೆ ಪೂರಕವಾಗಿ ಸಮನ್ವಯ ಸಮಿತಿ ರಚನೆಯಾಗುತ್ತಿದೆ.
