Friday, May 17, 2024
Homeರಾಜ್ಯಆಯೋಗದ ಮುಂದೆ ದಾಖಲೆ ಸಲ್ಲಿಸಿ : ಕೆಂಪಣ್ಣಗೆ ಕಾಂಗ್ರೆಸ್ ಸವಾಲು

ಆಯೋಗದ ಮುಂದೆ ದಾಖಲೆ ಸಲ್ಲಿಸಿ : ಕೆಂಪಣ್ಣಗೆ ಕಾಂಗ್ರೆಸ್ ಸವಾಲು

ಬೆಂಗಳೂರು,ಫೆ.9- ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಆರೋಪ ಕಾಂಗ್ರೆಸ್ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದು, ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ನ್ಯಾಯಾಂಗ ತನಿಖಾ ಆಯೋಗದ ಮುಂದೆ ದಾಖಲೆ ಸಲ್ಲಿಸುವಂತೆ ಸವಾಲು ಹಾಕಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಕೆಂಪಣ್ಣ ಶೇ.40 ರಷ್ಟು ಕಮಿಷನ್‍ನ ಆರೋಪ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿತ್ತು.

ಅದೇ ಕೆಂಪಣ್ಣ ನಿನ್ನೆ ಸುದ್ದಿಗೋಷ್ಟಿ ಮಾಡಿ ಕಾಂಗ್ರೆಸ್ ಸರ್ಕಾರದಲ್ಲೂ ಅಧಿಕಾರಿಗಳು ಶೇ.40 ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪ ಮಾಡಿದರು. ಇದಕ್ಕೆ ಸರ್ಕಾರದ ಪ್ರತಿನಿಧಿಗಳು ಸರಣಿ ಸ್ಪಷ್ಟನೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಶೇ.40 ರಷ್ಟು ಕಮಿಷನ್ ಆರೋಪದ ವಿಚಾರಣೆಗಾಗಿ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ನಾಗಮೋಹನ್‍ದಾಸ್ ನೇತೃತ್ವದಲ್ಲಿ ನ್ಯಾಯಾಂಗ ಆಯೋಗ ಮಾಡಿದ್ದೇವೆ. ಅದರ ಮುಂದೆ ದಾಖಲೆ ಸಲ್ಲಿಸುವಂತೆ ಕೆಂಪಣ್ಣ ಅವರಿಗೆ ಸಲಹೆ ನೀಡಿದರು.

ಕೆಂಪಣ್ಣ ಅವರು ಆರೋಪ ಮಾಡಿರುವುದು ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂದು. ಯಾವ ಅಧಿಕಾರಿ ಲಂಚ ಕೇಳುತ್ತಿದ್ದಾರೆ ಎಂಬ ಬಗ್ಗೆ ಆಯೋಗದ ಮುಂದೆ ದೂರು ನೀಡಲಿ ಎಂದರು. ಕಲ್ಬುರ್ಗಿಯಲ್ಲಿ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಮ್ಮ ಸರ್ಕಾರದಲ್ಲಿ ಯಾವುದೇ ಅವ್ಯವಹಾರಗಳು ನಡೆಯುತ್ತಿಲ್ಲ. ಭ್ರಷ್ಟಾಚಾರವನ್ನು ನಿಯಂತ್ರಿಸಿದ್ದೇವೆ. ಶೇ. 40 ರಷ್ಟು ಕಮಿಷನ್ ವ್ಯವಹಾರ ನಡೆಸಿದ್ದ ಬಿಜೆಪಿಯ ಬಸವರಾಜ ಬೊಮ್ಮಾಯಿ ಸೇರಿದಂತೆ ಯಾವ ನಾಯಕರಿಗೂ ನಮ್ಮ ಸರ್ಕಾರದ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ನಮ್ಮ ಜೀವನದಲ್ಲೇ ಕಂಡರಿಯದಷ್ಟು ಭ್ರಷ್ಟಾಚಾರವನ್ನು ಬೊಮ್ಮಾಯಿ ಅವರ ಸರ್ಕಾರ ನಡೆಸಿತ್ತು. ಮೂರು ವರ್ಷದಲ್ಲಿ ಮೂರು ಲಕ್ಷ ಕೋಟಿ ಸಾಲ ಮಾಡಿ ರಾಜ್ಯವನ್ನು ಸಾಲದ ಗ್ಯಾರಂಟಿಗೆ ನೂಕಿದರು ಎಂದು ದೂರಿದರು.

ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದವರ ಆಸ್ತಿ ಮುಟ್ಟುಗೋಲು : ಪರಮೇಶ್ವರ್

ಇದೇ ವೇಳೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಹಿಂದಿನ ಸರ್ಕಾರ ಗುತ್ತಿಗೆದಾರರ ಬಿಲ್‍ಗಳನ್ನು ಬಾಕಿ ಉಳಿಸಿತ್ತು. ಅದನ್ನು ಹಂತಹಂತವಾಗಿ ನಾವು ಬಿಡುಗಡೆ ಮಾಡುತ್ತಿದ್ದೇವೆ. ಕೆಂಪಣ್ಣ ನನ್ನ ಬಳಿಯೂ ಏಳೆಂಟು ಬಾರಿ ಚರ್ಚೆ ಮಾಡಿದ್ದಾರೆ. ಬಾಕಿ ಬಿಲ್ ಪಾವತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತಿದೆ. ಜೇಷ್ಠತೆ ಮತ್ತು ಸೂಕ್ತ ಮಾನದಂಡಗಳನ್ನ ಪಾಲನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ನಾನು ಹೇಳುವುದಿಲ್ಲ. ಸಣ್ಣಪುಟ್ಟ ಲೋಪಗಳಿದ್ದರೆ ಅದನ್ನು ವಿಚಾರಣೆ ನಡೆಸಲು ಮತ್ತು ಸರಿಪಡಿಸಲು ಸಿದ್ಧರಿದ್ದೇವೆ ಎಂದರು. ಹಿಂದಿನ ಸರ್ಕಾರ ಭ್ರಷ್ಟಾಚಾರವೇ ನಡೆದಿಲ್ಲ ಎಂದು ಹೇಳುತ್ತಿತ್ತು. ನಾವು ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಿದ್ದೇವೆ. ಅದು ಈಗಲೂ ಅಸ್ತಿತ್ವದಲ್ಲಿದೆ. ಕೆಂಪಣ್ಣ ಸೇರಿದಂತೆ ಯಾವುದೇ ಸಾರ್ವಜನಿಕರು ಆಯೋಗದ ಮುಂದೆ ದೂರು ನೀಡಬಹುದು, ದಾಖಲೆಗಳನ್ನು ಸಲ್ಲಿಸಬಹುದು. ಅದರ ತನಿಖೆ ನಡೆಸಲು ಸಿದ್ಧ. ಪಾರದರ್ಶಕತೆ ಪಾಲನೆ ಮಾಡುತ್ತಿರುವುದರಿಂದ ಯಾವುದೇ ಆತಂಕ ಇಲ್ಲ ಎಂದು ಹೇಳಿದರು.

RELATED ARTICLES

Latest News