ಗ್ವಾಲಿಯರ್,ಜು.13- ಹೆಚ್ಚಿನ ಲಾಭದ ಭರವಸೆ ನೀಡಿ ನಕಲಿ ಹೂಡಿಕೆ ಯೋಜನೆಯಲ್ಲಿ ಹಣ ಹೂಡಿಸುವ ಮೂಲಕ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಒಬ್ಬರಿಂದ ಸೈಬರ್ ವಂಚಕರು 21 ಕೋಟಿಗೂ ಅಧಿಕ ಹಣ ವಂಚಿಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಇದುವರೆಗೆ ಸುಮಾರು 1.75 ಕೋಟಿ ಹಣವನ್ನು ಸ್ಥಗಿತಗೊಳಿಸಲು (ಫ್ರೀಜ್) ಪೊಲೀಸರು ಯಶಸ್ವಿಯಾಗಿದ್ದು, ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದರ್ಗಂಜ್ ಪ್ರದೇಶದ ನಿವಾಸಿಯಾಗಿರುವ ಸಂತ್ರಸ್ತರು ತಮಗೆ ವಂಚನೆಯಾಗಿರುವುದು ಗೊತ್ತಾದ ಬಳಿಕ ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡಿದ್ದು, ಅದರ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದೆ.
ಕಳೆದ 2025ರ ಡಿಸೆಂಬರ್ ಕೊನೆಯ ವಾರದಲ್ಲಿ ಮಹಿಳೆಯೊಬ್ಬರುವಾಟ್ಸ್ ಆ್ಯಪ್ ಮೂಲಕ ಸಂತ್ರಸ್ತರನ್ನು ಸಂಪರ್ಕಿಸಿ, ತಾನು ಹೂಡಿಕೆ ಸಲಹೆಗಾರ್ತಿ ಎಂದು ಪರಿಚಯಿಸಿಕೊಂಡಿದ್ದಳು.
ಆರಂಭದಲ್ಲಿ ಸಣ್ಣ ಪ್ರಮಾಣದ ಹೂಡಿಕೆಗಳ ಮೇಲೆ ಲಾಭ ತೋರಿಸಿ ವಿಶ್ವಾಸ ಗಳಿಸಿದ ವಂಚಕರು, ಬಳಿಕ ನಕಲಿ ಆನ್ಲೈನ್ ಹೂಡಿಕೆ ಪೋರ್ಟಲ್ ಸೃಷ್ಟಿಸಿ ಅದರಲ್ಲಿ ಕೃತಕ ಲಾಭದ ವಿವರಗಳನ್ನು ಪ್ರದರ್ಶಿಸಿದ್ದರು ಎಂದು ಉಪ ಪೊಲೀಸ್ ಅಧೀಕ್ಷಕ ಸಂಜೀವ್ ನಯನ್ ಶರ್ಮಾ ತಿಳಿಸಿದ್ದಾರೆ.
ಆ ಲಾಭ ನಿಜವೆಂದು ನಂಬಿದ ಸಂತ್ರಸ್ತರು ಆರು ತಿಂಗಳ ಅವಧಿಯಲ್ಲಿ ಸುಮಾರು 21 ಕೋಟಿಗೂ ಅಧಿಕ ಹಣವನ್ನು ವಿವಿಧ ಹಂತಗಳಲ್ಲಿ ಹೂಡಿಕೆ ಮಾಡಿದ್ದರು.ಆದರೆ ಹಣವನ್ನು ಹಿಂಪಡೆಯಲು ಯತ್ನಿಸಿದಾಗ ವಂಚಕರು ವಿವಿಧ ನೆಪ ಹೇಳತೊಡಗಿದರು. ಬಳಿಕ ಹಣ ಬಿಡುಗಡೆ ಮಾಡಲು ಇನ್ನೂ ಹಲವು ಕೋಟಿ ರೂಪಾಯಿ ಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ದೂರಿನ ಪ್ರಕಾರ, ಸಂತ್ರಸ್ತರ ನಾಲ್ಕು ಬ್ಯಾಂಕ್ ಖಾತೆಗಳಿಂದ 100ಕ್ಕೂ ಹೆಚ್ಚು ಭಾರಿ ಹಣ ವರ್ಗಾವಣೆ ವ್ಯವಹಾರಗಳು ನಡೆದಿವೆ.ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
