ಬೆಂಗಳೂರು, ಜು.16- ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಿಗಳಿಗೆ ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು, ಕೈಗಾರಿಕೆಗಳ ಮೇಲೆ ಅವ್ಯಕ್ತವಾದ ದ್ವೇಷ ಇದ್ದಂತಿದ್ದು, ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕಿರುಕುಳ ನೀಡಿ ಅದನ್ನು ತೀರಿಸಿಕೊಳ್ಳುತ್ತಿವೆ.
ಅಭಿವೃದ್ಧಿಯ ಹೆಸರಿನಲ್ಲಿ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಹಾಳುಗೆಡವಿ, ಅನಗತ್ಯ ಕಿರುಕುಳ ನೀಡುವುದಕ್ಕೆ ವೈಟ್ ಟಾಪಿಂಗ್ ಕಾಮಗಾರಿಗಳೇ ಸ್ಪಷ್ಟ ಉದಾಹರಣೆ. ಬೆಂಗಳೂರಿನಂತಹ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ನಗರದಲ್ಲಿ ಯಾವುದೇ ಯೋಜನೆ ರೂಪಿಸುವಾಗ ಕನಿಷ್ಠ ಜ್ಞಾನ ಇಲ್ಲದೆ ನಡೆದುಕೊಂಡರೆ, ಅದರಿಂದಾಗುವ ದುಷ್ಪರಿಣಾಮಗಳೇನು ಎಂಬುದಕ್ಕೆ ನಗರದ ಪ್ರಮುಖ ಅಪದ್ಧಮನಿಯಾಗಿರುವ ಡಾ.ರಾಜ್‌ಕುಮಾರ್ ರಸ್ತೆಯೇ ಸಾಕ್ಷಿಯಾಗಿದೆ.
ಕಳೆದ ಒಂದೂವರೆ ವರ್ಷದಿಂದಲೂ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಒಂದು ಪಾರ್ಶ್ವ ವೈಟ್‌ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇದೇ ಜುಲೈ ತಿಂಗಳಿಗೆ ಕಾಮಗಾರಿಗೊಂಡು ಉದ್ಘಾಟನೆಯಾಗಬೇಕಿತ್ತು. ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರ, ನಾಗರಿಕ ಸೌಲಭ್ಯಗಳಾದ ನೀರು, ವಿದ್ಯುತ್ ಪೂರೈಕೆ, ಒಳ ಚರಂಡಿ ಇತರ ವ್ಯವಸ್ಥೆಗಳನ್ನು ನಿರ್ವಹಿಸುವ ಸಂಸ್ಥೆಗಳ ಜೊತೆ ತಾಳ-ಮೇಳ ಸಂಬಂಧ ಇಲ್ಲಂದಂತಾಗಿ, ವೈಟ್ ಟಾಪಿಂಗ್ ಕಾಮಗಾರಿ ವ್ಯಾಪಾರಿಗಳಿಗೆ ಬ್ಲಾಕ್ ಡೇ ದಿನಗಳನ್ನು ನೆನಪಿಸುವಂತಾಗಿದೆ. ಕಾಮಗಾರಿ ಮುಕ್ತಾಯದ ಅವಧಿ ಮತ್ತೆ ಮೂರು ತಿಂಗಳು ವಿಸ್ತರಣೆಯಾಗಿದೆ.
ಅನಗತ್ಯವಾದ ವಿಳಂಬದಿಂದಾಗಿ ರಸ್ತೆಯಲ್ಲಿ ಅಕ್ಷರಶಃ ರೌರವ ನರಕವನ್ನೇ ಸೃಷ್ಟಿಸಲಾಗಿದೆ. ಅಧಿಕಾರಿಗಳು, ಗುತ್ತಿಗೆದಾರರು, ಪ್ರತಿನಿಧಿಗಳ ಹೊಣಗೇಡಿತನದಿಂದಾಗಿ ವ್ಯಾಪಾರಸ್ಥರು ಬೀದಿಗೆ ಬೀಳುವಂತಾಗಿದೆ.ಕಾಮಗಾರಿ ಆರಂಭವಾದಾಗಿನಿಂದಲೂ ರಾಜ್‌ಕುಮಾರ್ ರಸ್ತೆಯ ವಾಣಿಜ್ಯ ಚಟುವಟಿಕೆಗಳು ಪಾರ್ಶ್ವವಾಯು ಪೀಡಿತವಾಗಿವೆ. ಒರಿಯಾನ್ ಮಾಲ್ ಜಂಕ್ಷನ್‌ನಿಂದ ಮೆಜೆಸ್ಟಿಕ್ ಮಾರ್ಗದ ಕಡೆಗೆ ಎಡ ಭಾಗದ ರಸ್ತೆಯಲ್ಲಿ ಈಗ ಕಾಮಗಾರಿ ನಡೆಯುತ್ತಿದೆ. ಪ್ರತಿಷ್ಠಿತ ಹೋಟೆಲ್‌ಗಳು, ವಸತಿ ಗೃಹಗಳು, ಆಸ್ಪತ್ರೆಗಳು, ವಿದ್ಯಾ ಸಂಸ್ಥೆಗಳು, ತರಬೇತಿ ಕೇಂದ್ರಗಳು, ಆಟೋ ಮೊಬೈಲ್ ವ್ಯಾಪಾರಿಗಳು ಇಲ್ಲಿ ಭರ್ಜರಿಯಾಗಿದ್ದವು. ಸರ್ಕಾರಕ್ಕೂ ನೂರಾರು ಕೋಟಿ ರೂ.ಗಳ ತೆರಿಗೆ ಪಾವತಿಯಾಗುತಿತ್ತು.
ಒಂದೂವರೆ ವರ್ಷದಿಂದಲೂ ಈ ರಸ್ತೆಯಲ್ಲಿ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ನಿಷ್ಕ್ರಿಯಗೊಂಡಿವೆ. ಕಾಮಗಾರಿ ನಿರ್ವಹಣೆ ಮಾಡುವವರ ಬೇಜವಾಬ್ದಾರಿತನದಿಂದಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ.ಒಂದು ದಿನ ಇದ್ದಕ್ಕಿದ್ದಂತೆ ಜೆಸಿಬಿ ತಂದು ರಸ್ತೆಯನ್ನು ಅಗೆದು ಹೋಗುತ್ತಾರೆ. ಅದರಲ್ಲಿರುವ ಮಣ್ಣು ಮತ್ತು ಡಬರೀಸ್ ತೆಗೆಯಲು ಮೂರು ತಿಂಗಳು ಸಮಯ ತೆಗೆದುಕೊಳ್ಳುತ್ತದೆ. ಎಲ್ಲವನ್ನು ತೆರವು ಮಾಡಿ ವಾಹನಗಳ ಸಂಚಾರಕ್ಕೆ ಸ್ವಲ್ಪ ಅವಕಾಶವಾದರೆ, ಮತ್ತೊಂದು ಭಾಗದಲ್ಲಿ ರಸ್ತೆಗೆ ಅಡ್ಡಲಾಗಿ ಹಳ್ಳ ತೋಡಲಾಗುತ್ತದೆ. ಪೈಪ್‌ಗಳನ್ನು ಅಳವಡಿಸಲು, ಕೇಬಲ್ ಲೈನ್‌ಗಾಗಿ ಎರಡು ತಿಂಗಳಿಗೊಮೆ, ಮೂರು ತಿಂಗಳಿಗೊಮೆ ಕೆಲಸ ಮಾಡಲಾಗುತ್ತಿದೆ.
ವೈಟ್‌ಟಾಪಿಂಗ್ ಮುಗಿದು ಎರಡು ತಿಂಗಳಾದರೂ ನಾಗರಿಕ ಸೌಲಭ್ಯದ ವ್ಯವಸ್ಥೆಗಳು ಅಳವಡಿಕೆಯಾಗಿಲ್ಲ. ಫುಟ್‌ಪಾತ್ ನಿರ್ಮಾಣಗೊಂಡಿಲ್ಲ. ಹೀಗಾಗಿ ಈ ರಸ್ತೆ ಇನ್ನು ಗ್ರಹದೋಷದಿಂದ ಹೊರಬಂದಂತಿಲ್ಲ. ಪ್ರತಿಯೊಂದು ಕಾಮಗಾರಿಗೂ ಉದ್ದೇಶ ಪೂರ್ವಕವಾಗಿಯೇ ವಿಳಂಬ ಮಾಡಿದಂತೆಯೇ ಕಂಡು ಬರುತ್ತಿದೆ. ಈ ಭಾಗಧ ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು ಪ್ರಶ್ನೆ ಮಾಡಿದರೆ ಅಧಿಕಾರಿಗಳು, ಗುತ್ತಿಗೆದಾರರು ಉಡಾಫೆಯ ಉತ್ತರಗಳನ್ನು ನೀಡುತ್ತಿದ್ದಾರೆ.
ಜನ ಛೀಮಾರಿ ಹಾಕುತ್ತಾರೆ ಎಂಬ ಕಾರಣಕಾಗಿಯೇ ಕಾಮಗಾರಿ ನಿರ್ವಹಣೆಯ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮಾಹಿತಿ ಮತ್ತು ಸಂಪರ್ಕ ಸಂಖ್ಯೆಗಳನ್ನು ಮರೆ ಮಾಚಲಾಗಿದೆ. ಯಾವುದೇ ಕಾಮಗಾರಿ ನಡೆಯುವ ಸ್ಥಳದಲ್ಲಿ ಸಂಬಂಧ ಪಟ್ಟ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ಸಂಪರ್ಕ ಸಂಖ್ಯೆಯನ್ನು ಪ್ರಕಟಿಸಬೇಕೆಂಬ ನಿಯಮವನ್ನು ಇಲ್ಲಿ ಉಲ್ಲಂಘಿಸಲಾಗಿದೆ.
ಫುಟ್‌ಪಾತ್ ತೆರವು, ಬೀದಿಬದಿಯ ವ್ಯಾಪಾರಗಳ ಸ್ಥಳಾಂತರದಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಜನ ಮೆಚ್ಚುಗೆಗೆ ಪಾತ್ರವಾಗಿರುವ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೆಗೌಡ ಅವರು ಈ ವೈಟ್‌ಟಾಪಿಂಗ್ ಕಾಮಗಾರಿಗಳ ಕಡೆಗೂ ಗಮನ ಕೊಟ್ಟರೆ ಜನ ನೆಮದಿಯಿಂದ ಉಸಿರಾಡಬಹುದು.
ವರ್ಷಗಟ್ಟಲೇ ಕಾಮಗಾರಿ ಸಮಯ ನಿಗದಿಪಡಿಸುವ ಬದಲು ಕೆಲ ತಿಂಗಳ ಒಳಗಾಗಿಯೇ ಕೆಲಸ ಪೂರ್ಣಗೊಳಿಸುವಂತಹ ಸಮಗ್ರ ಮತ್ತು ವೈಜ್ಞಾನಿಕ ವ್ಯವಸ್ಥೆ ನಿರೂಪಿಸಲು ಸಚಿವ ಕೃಷ್ಣಭೈರೇಗೌಡ ಅವರಿಗೆ ಸಾಧ್ಯವಿದೆ. ಆದರೆ ಅವರು ಇತ್ತ ಗಮನ ಹರಿಸಬೇಕಷ್ಟೆ. ವೈಟ್‌ಟಾಪಿಂಗ್ ಹೆಸರಿನಲ್ಲಿ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಅನಗತ್ಯ ಕಿರುಕುಳ ನೀಡಿ ಅವರ ವ್ಯಾಪಾರ ಚಟುವಟಿಕೆಗಳಲ್ಲಿ ಸಂಪೂರ್ಣ ನಾಶ ಮಾಡಲಾಗುತ್ತಿದೆ.
ಕೆಲವು ವ್ಯಾಪಾರಗಳು ಒಮೆ ಗ್ರಾಹಗಕರ ವಿಶ್ವಾಸ ಕಳೆದುಕೊಂಡರೆ ಚೇತರಿಸಿಕೊಳ್ಳಲು ವರ್ಷಗಳೇ ಬೇಕಾಗುತ್ತದೆ. ಪ್ರತಿ ತಿಂಗಳು ಸರ್ಕಾರದ ಪಗಾರ ಮತ್ತು ಜನರಿಂದ ಲಂಚ ಪಡೆದು ಕೊಬ್ಬಿರುವ ಅಧಿಕಾರಿಗಳಿಗೆ ಬಡ ವ್ಯಾಪಾರಿಗಳ ಮತ್ತು ಉಳುವಿಗಾಗಿ ಸಂಘರ್ಷ ಮಾಡುವ ವಾಣಿಜ್ಯೋದ್ಯಮಿಗಳಿಗೆ ಕಷ್ಟ ಅರ್ಥವಾಗುವುದಿಲ್ಲ. ಪ್ರತಿಯೊಂದು ಕಾಮಗಾರಿಯಲ್ಲೂ ಉಡಾಫೆತನ ಪ್ರದರ್ಶಿಸಿ, ವ್ಯಾಪಾರೋದ್ಯಮಿಗಳಿಗೆ ಖಳ ನಾಯಕರಾಗುತ್ತಿರುವ ಜಿಬಿಎ ಅಧಿಕಾರಿಗಳಿಗೆ ಸಚಿವರು ಕಾಯಕಲ್ಪ ನೀಡಬೇಕಿದೆ.
