ಬೆಂಗಳೂರು, ಜು.16- ರಾಜ್ಯ ಸರ್ಕಾರದ ಭವಿಷ್ಯಕ್ಕೆ ಸವಾಲೊಡ್ಡುವಂತಹ ಕ್ಷಿಪ್ರ ಬೆಳವಣಿಗೆ ಕಾರಣವಾಗಬಹುದಾದ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೆ ದೆಹಲಿಯಲ್ಲಿಂದು ಮುಹೂರ್ತ ನಿಗದಿಯಾಗಲಿದೆ.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ನಿನ್ನೆ ದಿಢೀರ್ ದೆಹಲಿಗೆ ತೆರಳಿದ್ದು, ಇಂದು ಅಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆ ಚರ್ಚೆ ನಡೆಸಲಿದ್ದಾರೆ.
ಬಳಿಕ ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಮಹತ್ವದ ಸಭೆ ನಡೆಯಲಿದೆ. ರಾಜ್ಯ ನಾಯಕರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜೊತೆ, ಖರ್ಗೆ ಅವರ ಸಮುಖದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಲಿದ್ದಾರೆ.
ಮೂಲಗಳ ಪ್ರಕಾರ ಖಾಲಿಯಿರುವ 20 ಸ್ಥಾನಗಳಿಗೂ ಒಂದೇ ಕಂತಿನಲ್ಲಿ ಸಂಪುಟ ವಿಸ್ತರಣೆಯಾಗಬೇಕು. ಇಲ್ಲವಾದರೆ ಸೂಕ್ತ ಸಮಯದಲ್ಲೇ ಸಂಪುಟ ವಿಸ್ತರಣೆಯಾಗಲಿ. ಅಲ್ಲಿಯವರೆಗೂ ಪ್ರಕ್ರಿಯೆಯನ್ನು ಮುಂದೂಡಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಪ್ರಾಯ ಎನ್ನಲಾಗಿದೆ.
ಆದರೆ ಸದ್ಯಕ್ಕೆ 18 ಸಚಿವರನ್ನು ನಿಯೋಜಿಸಿ, ಬಾಕಿ ಎರಡು ಸ್ಥಾನಗಳಿಗೆ ಜಿಬಿಎ ಮತ್ತು ಪಂಚಾಯತ್ ಚುನಾವಣೆಯ ಬಳಿಕ ನೇಮಕಾತಿ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ತಂಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಅಭಿಪ್ರಾಯಗಳು ಸಂಪುಟ ವಿಸ್ತರಣೆಯಲ್ಲಿ ಮಹತ್ವ ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದಿನಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಗಳನ್ನು ಮುಂದುವರೆಸಿದ್ದಾರೆ. ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರ ಮನೆಗೆ ನಿನ್ನೆ ಭೇಟಿ ನೀಡಿದ ಮುಖ್ಯಮಂತ್ರಿಯವರು ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದರು. ಇದಕ್ಕೂ ಮುನ್ನ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರ ಜೊತೆ ಮಹತ್ವದ ಮಾತುಕತೆ ನಡೆಸಲಾಗಿತ್ತು.
ಮೂವರು ಸಿದ್ಧಪಡಿಸಿಕೊಂಡಿರುವ ಸಂಭವನೀಯ ಸಚಿವರ ಕರಡು ಪಟ್ಟಿಯ ಬಗ್ಗೆ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆಯುವ ಪೂರ್ವಭಾವಿ ಸಭೆಯಲ್ಲಿ ಚರ್ಚೆಯಾಗಲಿದೆ. ಬಳಿಕ ರಾಹುಲ್ ಗಾಂಧಿಯವರ ಸಮುಖದಲ್ಲಿ ನಡೆಯುವ ಸಭೆಯಲ್ಲಿ ಏಕೀಕೃತ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್ ರಾಜ್ಯ ನಾಯಕರಿಗೆ ರವಾನಿಸಲಿದೆ ಎಂದು ಮೂಲಗಳು ತಿಳಿಸಿವೆ.
ನಿರೀಕ್ಷೆಯಂತೆ ದೆಹಲಿಯಲ್ಲಿನ ಸಭೆಯಲ್ಲಿ ಫಲಪ್ರದ ಚರ್ಚೆಗಳಾದರೆ, ಎರಡು, ಮೂರು ದಿನಗಳ ಒಳಗಾಗಿಯೇ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಹೈಕಮಾಂಡ್ ಹಸಿರು ನಿಶಾನೆ ತೋರಿಸಿದರೆ, ದೆಹಲಿಯಿಂದ ಆಗಮಿಸುವ ಮುಖ್ಯಮಂತ್ರಿಯವರು ನೇರವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಯ ಮುಹೂರ್ತ ನಿಗದಿಪಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿನ ಸಭೆಯಲ್ಲಿ ವಿಧಾನಪರಿಷತ್‌ನಲ್ಲಿ ತೆರವಾಗುತ್ತಿರುವ 4 ಸ್ಥಾನಗಳಿಗೂ ನೇಮಕಾತಿಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗುತ್ತದೆ. ನಿಗಮ ಮಂಡಳಿಗಳಲ್ಲಿ ಎರಡೂವರೆ ವರ್ಷ ಪೂಣಗೊಳಿಸಿದ ಅಧ್ಯಕ್ಷರುಗಳನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದ್ದು, ಹೊಸ ನೇಮಕಾತಿಯ ಮಾರ್ಗ ಸೂಚಿಗಳು ಮತ್ತು ಸಂಭವನೀಯರ ಪಟ್ಟಿಯ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ದೆಹಲಿಗೆ ತೆರಳುವ ಮುನ್ನವೇ 30 ಮಂದಿ ಶಾಸಕರು, 20 ಮಂದಿ ವಿಧಾನಪರಿಷತ್ ಸದಸ್ಯರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಸಚಿವ ಸ್ಥಾನಕ್ಕಾಗಿ ಪಕ್ಷದ ವರಿಷ್ಠರ ನಾಯಕರನ್ನು ಭೇಟಿ ಮಾಡಿ ದುಂಬಾಲು ಬೀಳುತ್ತಿದ್ದಾರೆ.
