Homeರಾಜ್ಯಮೊದಲ ಆಷಾಢ ಶುಕ್ರವಾರ : ಚಾಮುಂಡಿ ಬೆಟ್ಟಕ್ಕೆ ಹರಿದುಬಂದ ಭಕ್ತಸಾಗರ

ಮೊದಲ ಆಷಾಢ ಶುಕ್ರವಾರ : ಚಾಮುಂಡಿ ಬೆಟ್ಟಕ್ಕೆ ಹರಿದುಬಂದ ಭಕ್ತಸಾಗರ

First Ashada Friday: Ocean of devotees flocks to Chamundi Hill

ಮೈಸೂರು, ಜು.17: ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಸನ್ನಿಧಿ ಭಕ್ತರ ಸಾಗರದಿಂದ ತುಂಬಿ ತುಳುಕಿತು.ಬೆಳಗಿನ ಜಾವ 4 ಗಂಟೆಯಿಂದಲೇ ಸಾವಿರಾರು ಭಕ್ತರು ಬೆಟ್ಟದ ತಳಭಾಗದಲ್ಲಿ ಜಮಾಯಿಸಿ ಸರತಿ ಸಾಲಿನಲ್ಲಿ ನಿಂತು ತುಂತುರು ಮಳೆಯಲ್ಲಿಯೇ ತಾಯಿಯ ದರ್ಶನ ಪಡೆದು ಧನ್ಯರಾದರು.

“ಜೈ ಚಾಮುಂಡೇಶ್ವರಿ, ಅಮ್ಮಾ ತಾಯೇ” ಎಂಬ ಘೋಷಣೆಗಳು ಬೆಟ್ಟದಾದ್ಯಂತ ಪ್ರತಿಧ್ವನಿಸಿದವು. ವಿಶೇಷವಾಗಿ ಅಲಂಕರಿಸಲ್ಪಟ್ಟ ದೇವಾಲಯದಲ್ಲಿ ತಾಯಿ ಚಾಮುಂಡೇಶ್ವರಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಸಹಸ್ರನಾಮ ಅರ್ಚನೆ ನೆರವೇರಿಸಿ ನಂತರ ಮಹಾಮಂಗಳಾರತಿ ಸಲ್ಲಿಸಲಾಯಿತು.

ವಿವಿಧ ಬಗೆಯ ಹೂವುಗಳು, ಹಣ್ಣುಗಳು ಹಾಗೂ ಅಲಂಕಾರಿಕ ವಸ್ತುಗಳಿಂದ ಗರ್ಭಗುಡಿ, ದೇವಸ್ಥಾನ ಹಾಗೂ ಏಳು ಮಹಡಿಯ ಗೋಪುರಕ್ಕೆ ಮನೋಹರ ಅಲಂಕಾರ ಮಾಡಲಾಗಿತ್ತು. ಹಸಿರು ಮತ್ತು ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ಉತ್ಸವ ಮೂರ್ತಿಯನ್ನು ಲಕ್ಷ್ಮೀ ಅಲಂಕಾರದಲ್ಲಿ ಸಿಂಗರಿಸಲಾಗಿದ್ದು, ಲಕ್ಷಾಂತರ ಭಕ್ತರ ಕಣ್ಮನ ಸೆಳೆಯಿತು.

ಆಷಾಢದ ಮೊದಲ ಶುಕ್ರವಾರದ ವಿಶೇಷ ಪೂಜೆಯಲ್ಲಿ ಭಾಗವಹಿಸಲು ಹಲವಾರು ಶಾಸಕರು, ಸಂಸದರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಬಂದು ರೈತರ ಬದುಕು ಸಮೃದ್ಧಿಯಾಗಲಿ, ರೋಗ-ರುಜಿನಗಳಿಲ್ಲದೆ ಜನರು ಸುಖವಾಗಿರಲಿ ಎಂದು ತಾಯಿಯಲ್ಲಿ ಮೊರೆ ಇಟ್ಟರು.

ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ಮಾತನಾಡಿ, “ಆಷಾಢ ಮಾಸವು ಶಕ್ತಿ ಆರಾಧನೆಗೆ ಅತ್ಯಂತ ಪವಿತ್ರವಾದ ಮಾಸ. ಈ ತಿಂಗಳ ನಾಲ್ಕು ಶುಕ್ರವಾರಗಳಲ್ಲೂ ತಾಯಿಗೆ ಲಕ್ಷ್ಮೀ ಅಲಂಕಾರ ಮಾಡಲಾಗುತ್ತದೆ. ಭಕ್ತರು ವ್ರತ, ಪೂಜೆ, ದಾನ-ಧರ್ಮ ಮಾಡಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ತಾಯಿ ಎಲ್ಲರ ಕೋರಿಕೆಗಳನ್ನು ಈಡೇರಿಸುತ್ತಾಳೆ” ಎಂದು ತಿಳಿಸಿದರು.

ಹಿಂದೂ ಧರ್ಮದಲ್ಲಿ ಆಷಾಢ ಮಾಸಕ್ಕೆ ವಿಶೇಷ ಸ್ಥಾನವಿದೆ. ಈ ಮಾಸದಲ್ಲಿ ಶಕ್ತಿ ದೇವತೆಗಳ ಆರಾಧನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮಹಿಳೆಯರು ವಿಶೇಷವಾಗಿ ವ್ರತಾಚರಣೆ ಮಾಡಿ ಕುಟುಂಬದ ಸುಖ-ಶಾಂತಿಗಾಗಿ ಪ್ರಾರ್ಥಿಸುತ್ತಾರೆ.ಮೈಸೂರಿನ ಚಾಮುಂಡಿ ಬೆಟ್ಟ ಮಾತ್ರವಲ್ಲದೆ, ರಾಜ್ಯದ ಎಲ್ಲ ಶಕ್ತಿ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆಯುತ್ತವೆ. ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಢದ ನಾಲ್ಕು ಶುಕ್ರವಾರಗಳಲ್ಲೂ ದೇವಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ.ಮೊದಲ ಶುಕ್ರವಾರ ಲಕ್ಷ್ಮೀ ಅಲಂಕಾರ, ಎರಡನೇ ಶುಕ್ರವಾರ ಸರಸ್ವತಿ ಅಲಂಕಾರ, ಮೂರನೇ ಶುಕ್ರವಾರ ದುರ್ಗಾ ಅಲಂಕಾರ ಹಾಗೂ ನಾಲ್ಕನೇ ಶುಕ್ರವಾರ ಮಹಿಷಾಸುರಮರ್ಧಿನಿ ಅಲಂಕಾರ ಮಾಡಲಾಗುತ್ತದೆ.

ಅಚ್ಚುಕಟ್ಟಾದ ವ್ಯವಸ್ಥೆ

ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿತ್ತು.ಬೆಟ್ಟದ ತಳಭಾಗದಿಂದ ದೇವಸ್ಥಾನದವರೆಗೆ ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯಗಳು, ಪ್ರಸಾದ ವಿತರಣಾ ಕೇಂದ್ರಗಳು, ವೈದ್ಯಕೀಯ ತುರ್ತು ಸೇವಾ ಘಟಕಗಳನ್ನು ಸ್ಥಾಪಿಸಲಾಗಿತ್ತು.

ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ನೂಕುನುಗ್ಗಲು ಉಂಟಾಗದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿತ್ತು.ಡ್ರೋನ್ ಕ್ಯಾಮೆರಾಗಳ ಮೂಲಕ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ಮಾಡಲಾಗಿತ್ತು. 500ಕ್ಕೂ ಹೆಚ್ಚು ಪೊಲೀಸರು, ಹೋಂ ಗಾರ್ಡ್‌ಗಳು ಹಾಗೂ ಸ್ವಯಂಸೇವಕರು ಭಕ್ತರಿಗೆ ಮಾರ್ಗದರ್ಶನ ನೀಡಿದರು.

ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಕೂಡ ಹೆಚ್ಚುವರಿ ಬಸ್‌ಗಳನ್ನು ಕಲ್ಪಿಸಿತ್ತು.ಮೈಸೂರು ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಿಂದ, ನೆರೆಯ ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶದಿಂದಲೂ ಭಕ್ತರು ಆಗಮಿಸಿದ್ದರು.

ರಾತ್ರಿ 10 ಗಂಟೆಯವರೆಗೆ ದರ್ಶನ

ಭಕ್ತರ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಿ ದೇವಸ್ಥಾನ ಆಡಳಿತ ಮಂಡಳಿ ಇಂದು ರಾತ್ರಿ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಿದೆ. ಸಂಜೆ ಮಹಾಮಂಗಳಾರತಿ ಹಾಗೂ ವಿಶೇಷ ಅಲಂಕಾರದ ನಂತರವೂ ಭಕ್ತರು ತಾಯಿಯ ದರ್ಶನ ಪಡೆಯಬಹುದಾಗಿದೆ.

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಮುಖಂಡರಾದ ಮಾಳವಿಕಾ ಅವಿನಾಶ್, ಬಸವನಗೌಡ ಪಾಟೀಲ್ ಯತ್ನಾಳ್, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ವಿವಿಧ ಗಣ್ಯರು ಆಗಮಿಸಿ ದೇವಿಯ ದರ್ಶನ ಪಡೆದರು.

RELATED ARTICLES

Latest News